ಮೊದಲ ಪುಟ
ಮುದ್ದೇಬಿಹಾಳ: ಜಾಗತೀಕರಣದ ಪ್ರಭಾವದಿಂದ ನಾಟಕ ಎನ್ನುವ ಸಂಸ್ಕೃತಿ ದೂರಾಗಿದೆ ಎಂದು ಕುಂಟೋಜಿ ಸಂಸ್ಥಾನ ಭಾವೈಕ್ಯತಾ ಮಠದ ಡಾ.ಚನ್ನವೀರ ಶಿವಾಚಾರ್ಯರು ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಗವಿಸಿದ್ದೇಶ್ವರ ವೇದಿಕೆಯಲ್ಲಿ ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷರಾದ ಪ್ರಭುಗೌಡ ದೇಸಾಯಿ ಅವರು ತುಮಕೂರಿನ ಸಿದ್ದಗಂಗಾ ಮಠದ ಲಿಂ. ಡಾ.ಶಿವಕುಮಾರ ಮಹಾಸ್ವಾಮಿಗಳು ಮತ್ತು ಲಿಂ.ಚನ್ನಣ್ಣ ದೇಸಾಯಿ ಅವರ ಪುಣ್ಯಸ್ಮರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ನಾಟಕೋತ್ಸವವನ್ನು ತಬಲ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕಲೆ-ಸಂಸ್ಕೃತಿಗೆ ಜೀವ ತುಂಬುವ ನಾಟಕ ಪರಂಪರೆಯನ್ನು ಯಾರೂ ಮರೆಯಬಾರದು. ನಾಟಕಗಳು ಮನುಷ್ಯನ ಬದುಕಿಗೆ ಶಿಸ್ತು, ವಿವೇಕ ಮತ್ತು ಮಾನವೀಯತೆ ನೀಡುತ್ತದೆ. ರಂಗಭೂಮಿ ಕೇವಲ ಮನರಂಜನೆಗೆ ಸೀಮಿತವಾಗದೇ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ದಾರಿ ತೋರುವ ಶಕ್ತಿಯನ್ನೂ ಹೊಂದಿದೆ. ನಾಟಕಗಳ ಮೂಲಕ ಉತ್ತಮ ಸಂದೇಶವನ್ನು ಜನರಿಗೆ ತಲುಪಿಸಿ, ಯುವ ಪೀಳಿಗೆಯಲ್ಲಿ ಉತ್ತಮ ಸಂಸ್ಕಾರ ಬೆಳೆಸಬೇಕು. ನಮ್ಮ ದೇಶದಲ್ಲಿ ನಾಟಕಕ್ಕೆ ಮಹತ್ವದ ಸ್ಥಾನವಿದೆ. ನಮ್ಮ ಭಾಷೆ, ಸಂಸ್ಕೃತಿ, ಮೌಲ್ಯಗಳನ್ನು ಕಾಪಾಡಿಕೊಳ್ಳಲು ಇಂತಹ ನಾಟಕೋತ್ಸವಗಳು ಅಗತ್ಯ ಎಂದರು.
ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷರು, ನಾಟಕೋತ್ಸವದ ರುವಾರಿ ಪ್ರಭುಗೌಡ ದೇಸಾಯಿಯವರು ಮಾತನಾಡಿ ನಾಟಕ ಮತ್ತು ರಂಗಭೂಮಿ ನಮ್ಮ ಸಂಸ್ಕೃತಿಯ ಜೀವಾಳ. ಯುವಕರಲ್ಲಿ ಕಲಾಸಕ್ತಿ ಬೆಳೆಸುವ ಉದ್ದೇಶದಿಂದ ಈ ನಾಟಕೋತ್ಸವವನ್ನು ಕಳೆದ ೫ ವರ್ಷಗಳಿಂದ ಆಯೋಜಿಸುತ್ತಿದ್ದೇವೆ. ಮನರಂಜನೆಯ ಜೊತೆಗೆ ಒಳ್ಳೆಯ ಸಂದೇಶ ನೀಡುವ ನಾಟಕಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಮೊದಲ ದಿನವೇ ಒಳ್ಳೆಯ ಸ್ಪಂದನೆ ಸಿಕ್ಕಿದ್ದು ನಮ್ಮ ಶ್ರಮ ಸಾರ್ಥಕವಾಗಿದೆ. ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಎಲ್ಲ ಗಣ್ಯರಿಗೆ, ನನ್ನ ಆತ್ಮೀಯರಿಗೆ ಧನ್ಯವಾದಗಳನ್ನು ತಿಳಿಸುವೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮಹಾಂತಪ್ಪ ನಾವದಗಿ, ಹಿರಿಯ ಸಾಹಿತಿ ಬಿ.ಎಂ.ಹಿರೇಮಠ ಮಾತನಾಡಿದರು. ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ, ಹಿರಿಯ ನ್ಯಾಯವಾದಿಗಳಾದ ಎಂ.ಎಚ್.ಹಾಲಣ್ಣವರ, ಎಂ.ಎಸ್.ನಾವದಗಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಪ್ರಮುಖರಾದ ವಾಸುದೇವ ಶಾಸ್ತ್ರಿ, ಮಲ್ಲಿಕಾರ್ಜುನ ಮದರಿ, ಶಿವಶಂಕರಗೌಡ ಹಿರೇಗೌಡರ, ಗುರು ತಾರನಾಳ, ಮಾಣಿಕ ದಂಡಾವತಿ, ವೆಂಕನಗೌಡ ಪಾಟೀಲ, ಬಸವರಾಜ ಮೋಟಗಿ, ಬಸವರಾಜ ನಾಲತವಾಡ ಸೇರಿದಂತೆ ಹಲವರು ಭಾಗಿಯಾಗಿದ್ದರು.

