ಲೇಖನ
– ಡಾ. ಶಶಿಕಾಂತ ಪಟ್ಟಣ ರಾಮದುರ್ಗ
ಮೊ: 9552002338
ಉದಯರಶ್ಮಿ ದಿನಪತ್ರಿಕೆ
*"ಹಿಂದೆ ಗುರುವಿಲ್ಲ ಮುಂದೆ ಗುರಿಯಿಲ್ಲ ಸಾಗಿದೆ ನೋಡು ರಣಹೇಡಿಗಳ ದಂಡು"* ಕುವೆಂಪುರವರ ಈ ವಾಖ್ಯವು ಲಿಂಗಾಯತರಿಗೆ ಹೆಚ್ಚು ಅನ್ವಯವಾಗುತ್ತದೆ ಎಂದರೆ ತಪ್ಪಾಗಲಾರದು.
ಬಸವಣ್ಣನವರು ನಿರ್ಗಮಿಸಿದ ಮೇಲೆ ಅವರ ಹೆಸರಿನಲ್ಲಿ ಶೈವರು ವೈದಿಕರು ಸಾಹಿತಿಗಳು ಈಗ ರಾಜಕಾರಣಿಗಳು ಕಾವಿಗಳು ಬಸವ ತತ್ವವನ್ನು ತಮ್ಮ ಮನಸ್ಸಿಗೆ ಬಂದಂತೆ ಜಗ್ಗಾಡಿ ವ್ಯಾಖ್ಯಾನ ಮಾಡುತ್ತಾ ಬದುಕುತ್ತಿದ್ದಾರೆ.
ಲಿಂಗಾಯತ ಒಂದು ಅವೈದಿಕ ಹಿಂದುಯೇತರ ಸರ್ವತಂತ್ರ ಸ್ವತಂತ್ರ ಧರ್ಮವಾಗಿದೆ. ಲಿಂಗಾಯತ ಧರ್ಮದ ಉಲ್ಲೇಖವು ಸಿ ಪಿ ಬ್ರೌನ್ ಜಾನ್ ಡಿ ಮೆನ್ ಆರ್ಥರ್ ಮೈಲ್ಸ್ ನ್ಯಾಯಮೂರ್ತಿ ಪ್ರೊ ಶಿ ಶಿ ಬಸವನಾಳ ಎಂ ಆರ್ ಸಾಖರೆ ಪಿ ಬಿ ಗಜೇಂದ್ರಗಡಕರ ಡಾ ಎಂ ಎಂ ಕಲಬುರ್ಗಿ ಮುಂತಾದವರ ಲೇಖನಗಳಿಂದ ಕಂಡು. ಬಂದಿದೆ. ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆಗೆ ಎರಡು ಶತಮಾನವೇ ಕಳೆದು ಹೋಗಿವೆ. ಲಿಂಗಾಯತ ಧರ್ಮದ ಬೇಡಿಕೆ ನ್ಯಾಯ ಸಮ್ಮತ ಮತ್ತು ಕಾನೂನು ಸಮ್ಮತವಾಗಿದೆ.

2018 ರಲ್ಲಿ ಶ್ರೀಮಾನ್ ಸಿದ್ದರಾಮಯ್ಯನವರ ಸರಕಾರದಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಮತ್ತು ಅಲ್ಪ ಸಂಖ್ಯಾತ ಸ್ಥಾನಮಾನಕ್ಕಾಗಿ ನ್ಯಾಯಮೂರ್ತಿ ಶ್ರೀ ನಾಗಮೋಹನದಾಸ ಸಮಿತಿ ರಚಿಸಲಾಯಿತು. ವೀರಶೈವ ಮತ್ತು ಲಿಂಗಾಯತ ಬಣಗಳ ಪ್ರಬಲ ಗುಂಪುಗಳ ಪೈಪೋಟಿ. ನಡೆಯಿತು. ಈ ನಡುವೆ ಲಿಂಗಾಯತ ಸಮಾವೇಶಗಳು ನಾಡಿನ ತುಂಬೆಲ್ಲಾ ನಡೆದು ದೊಡ್ಡ ಸುದ್ಧಿ ಮಾಡಿದವು. ಹಲವು ಹೊಸ ಹುಡುಗರು ವೈಚಾರಿಕ ಪ್ರಜ್ಞೆ ಬೆಳೆಸಿಕೊಂಡು ಬಸವಣ್ಣ ಮತ್ತು ಶರಣರು ಸ್ಥಾಪಿಸಿದ ಲಿಂಗಾಯತ ಧರ್ಮ ಮಾನ್ಯತೆ ಮತ್ತು ಅಲ್ಪಸಂಖ್ಯಾತ ಸ್ಥಾನಮಾನದ ಹೋರಾಟಕ್ಕೆ ಇಳಿದರು. ಅಂದಿನ ಕಾಂಗ್ರೆಸ್ಸಿನ ಮಂತ್ರಿಗಳು ಶಾಸಕರು ಡಾ ಎಂ ಬಿ ಪಾಟೀಲ ಡಾ ಶರಣಪ್ರಕಾಶ ಪಾಟೀಲ ಶ್ರೀ ವಿನಯ ಕುಲಕರ್ಣಿ ಶ್ರೀ ಬಸವರಾಜ ರಾಯರೆಡ್ಡಿ , ಶ್ರೀ ಬಿ ಆರ್ ಪಾಟೀಲ, ಶ್ರೀ ಅಶೋಕ ಪಟ್ಟಣ ಇದರಲ್ಲಿ ಧುಮುಕಿದರು. ಕೆಲ ನಿವೃತ್ತ ಅಧಿಕಾರಿಗಳನ್ನು ಶ್ರೀ ಎಂ ಬಿ ಪಾಟೀಲರು ನಿಯಮಿಸಿದರು, ಒಂದು ಲಿಂಗಾಯತ ಸಂಸ್ಥೆ ಹುಟ್ಟಿಕೊಂಡಿತು ವೀರಶೈವ ಬೇರೆ ಲಿಂಗಾಯತ ಬೇರೆ ಎಂಬ ಅನೇಕ ಕೃತಿಗಳು ಹೊರ ಬಂದವು. ಟಿವಿ ಚರ್ಚೆ ಭಾಷಣ ನಿರಂತರ ಲೇಖನ ಒಟ್ಟಾರೆ ಲಿಂಗಾಯತ ಪರವಾದ ವಾತಾವರಣ ನಿರ್ಮಾಣಗೊಂಡಿತು. ನ್ಯಾಯಮೂರ್ತಿ ನಾಗಮೋಹನ ದಾಸ ಅವರ ವರದಿಯಾಧಾರಿತ ಸಚಿವ ಸಂಪುಟದಲ್ಲಿ ನಿರ್ಣಯ ತೆಗೆದುಕೊಂಡು ಕೇಂದ್ರ ಸರಕಾರದ ಅಲ್ಪ ಸಂಖ್ಯಾತ ಇಲಾಖೆಗೆ ಲಿಂಗಾಯತ ಧರ್ಮಿಯರನ್ನು , ಬಸವ ತತ್ವದಲ್ಲಿ ನಂಬಿಕೆ ಇರುವ ಲಿಂಗಾಯತ ವೀರಶೈವ ಲಿಂಗಾಯತರು ಅಲ್ಪ ಸಂಖ್ಯಾತ ಎಂದು ಪರಿಗಣಿಸಲು ಹಲವು ವಿರೋಧಗಳ ಮಧ್ಯೆ ಕಳುಹಿಸಿ ಕೊಟ್ಟರು. ಕೇಂದ್ರ ಸರಕಾರದ ಅಲ್ಪ ಸಂಖ್ಯಾತ ಇಲಾಖೆಯು ಕರ್ನಾಟಕ ಸರಕಾರದ ಶಿಫಾರಸ್ಸನ್ನು ತಿರಸ್ಕರಿಸಿತು.. ಮುಂದೆ ಕಾಂಗ್ರೆಸ ಪಕ್ಷ ಅಧಿಕಾರ ಕಳೆದು ಕೊಂಡಿತು ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರಕಾರ ರಚನೆ ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ. ಆಪರೇಷನ್ ಕಮಲ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂತು. ಆಗ ಕೆಲ ಕಾಂಗ್ರೆಸ ನಾಯಕರು ತಮ್ಮ ಪಕ್ಷದ ಸೋಲಿಗೆ ಲಿಂಗಾಯತ ಚಳುವಳಿ ಕಾರಣ ಎಂದು ನಿರ್ಧರಿಸಿ ಲಿಂಗಾಯತರ ಮೇಲೆ ಗೂಬೆ ಕೂಡಿಸಿದರು. ಚುನಾವಣೆಯ ಸಂದರ್ಭದಲ್ಲಿ ಒಂದು ಲಿಂಗಾಯತ ಸಂಘಟನೆಯ ಪದಾಧಿಕಾರಿ ಬಿಜೆಪಿಯನ್ನು ಸೋಲಿಸಿ ಶ್ರೀ ಎಡೆಯೂರಪ್ಪನವರ ಭ್ರಷ್ಟತೆಯ ವಿರುದ್ಧ ಜಾಹಿರಾತು ನೀಡಿ, ಲಿಂಗಾಯತ ಸಂಘಟನೆಯು ರಾಜಕೀಯ ರಹಿತ ಎಂದು ಹೇಳುತ್ತಾ ರಾಜಕೀಯ ಪಕ್ಷದ ಏಜೆಂಟ ಆಗಿ ಕಾರ್ಯ ನಿರ್ವಹಿಸಿತು. ಎಲ್ಲಾಕಾಂಗ್ರೆಸ್ ಮುಖಂಡರು ಶಾಸಕರು ರಾಜಕೀಯ ಮುಖಂಡರು ಲಿಂಗಾಯತ ಚಳುವಳಿಯನ್ನು ನಡು ನೀರಿನಲ್ಲಿ ಕೈ ಬಿಟ್ಟರು.
ಡಾ ಎಂ ಬಿ ಪಾಟೀಲರೊಬ್ಬರು ಲಿಂಗಾಯತರ ಧ್ವನಿ ಎನಿಸಿಕೊಂಡು ಸ್ವಲ್ಪ ಮಟ್ಟಿಗೆ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟವನ್ನು ಜೀವಂತ ಇಟ್ಟರು. ಸಮ್ಮಿಶ್ರ ಸರಕಾರದ ಆರಂಭದಲ್ಲಿ ಇವರಿಗೆ ಸಚಿವ ಸ್ಥಾನ ಸಿಗಲಿಲ್ಲ.
ಮುಂದೆ ಪಂಚ ಪೀಠ ಸ್ವಾಮೀಜಿಗಳ ಹತ್ತಿರವಾಗ ಹತ್ತಿದರು, ಇದರ ಜೊತೆಗೆ ಕರ್ನಾಟಕ ಮಠಾಧೀಶರ ಒಕ್ಕೂಟವು ಸೆಪ್ಟೆಂಬರ್ 1 ರಿಂದ ರಾಜ್ಯಾದ್ಯಂತ ಬಸವ ಸಂಸ್ಕೃತಿ ಅಭಿಯಾನವನ್ನು ಒಂದು ತಿಂಗಳು ಮಾಡುತ್ತಾ ಕೊನೆಗೆ ಬೆಂಗಳೂರಿನಲ್ಲಿ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯನವರನ್ನು ಸತ್ಕರಿಸುವ ವೀರಶೈವ ಲಿಂಗಾಯತ ಸಮಾವೇಶವನ್ನು ಅಕ್ಟೋಬರ್ 5 ರಂದು ನಿಗದಿ ಮಾಡಿದ್ದಾರೆ. ಅಪ್ಪಟ ಬಸವ ಪ್ರಣೀತ ಸ್ವಾಮಿಗಳು ಇತ್ತೀಚಿಗೆ ಡಾ ಎಂ ಬಿ ಪಾಟೀಲರನ್ನು ಭೇಟಿ ಮಾಡಿ ವೀರಶೈವ ಲಿಂಗಾಯತ ಸಮಾವೇಶಕ್ಕೆ ತಾಮ್ಮ ಸಮ್ಮತಿ ಸೂಚಿಸಿ, ಲಿಂಗಾಯತ ಧರ್ಮ ಮಾನ್ಯತೆ ಮತ್ತು ಅಲ್ಪ ಸಂಖ್ಯಾತ ಸ್ಥಾನಮಾನದ ಚಳುವಳಿಗೆ ಹೋಮ ಮಾಡಿದರು.
ಡಾ ಎಂ ಬಿ ಪಾಟೀಲರು ಮತ್ತು ಡಾ ಬಸವಲಿಂಗ ಪಟ್ಟದದೇವರು ಭಾಲ್ಕಿ ಶ್ರೀಗಳ ಮುಂದಾಳತ್ವದಲ್ಲಿ ನಡೆಯುವ ಈ ಸಮಾವೇಶವು ಲಿಂಗಾಯತ ಧರ್ಮ ಮಾನ್ಯತೆಯ ಕನಸಿನ ಚಿಗುರನ್ನು ಚಿವುಟಿ ಬಿಟ್ಟರೆ ಎಂದು ಪೂಜ್ಯ ಡಾ ಬಸವಲಿಂಗ ಪಟ್ಟದದೇವರು ಮತ್ತು ಸಮಸ್ತ ಲಿಂಗಾಯತ ಮಠಾಧೀಶರು ಉತ್ತರಿಸಲಿ. ಇಂತಹ ಸಮಾವೇಶಗಳಿಂದ ಲಿಂಗಾಯತರ ಭಾವನೆಗಳು ಸ್ವಲ್ಪ ಮಟ್ಟಿಗೆ ಉದ್ಧೀಪನಗೊಳ್ಳಬಹುದೇ ವಿನಃ ಶಾಶ್ವತ ಗೆಲುವು ಸಿಗುವದಿಲ್ಲ. ರಾಜಕೀಯ ಲೆಕ್ಕಾಚಾರಕ್ಕೆ ಲಿಂಗಾಯತ ಧರ್ಮ ಬಲಿ ಪಶುವಾಗದಿರಲಿ, ಲಿಂಗಾಯತರು ವೀರಶೈವರ ವಿರೋಧಿಗಳಲ್ಲ ಆದರೆ ಲಿಂಗಾಯತರು ವೀರಶೈವರಲ್ಲ. ಇಂತಹ ವೀರಶೈವ ಲಿಂಗಾಯತ ಸಮಾವೇಶಗಳು ಬಸವ ದ್ರೋಹದ ಕಾರ್ಯವೆಂದು ಹೇಳಬಹುದು. ಪ್ರತಿಯೊಬ್ಬ ಮಠಾಧೀಶರು ಮೊದಲು ತಮ್ಮ ತಮ್ಮ ಮಠಗಳಲ್ಲಿ ಅಂಧ ಭಕ್ತಿ ಕರ್ಮಕಾಂಡ ಗದ್ದುಗೆ ಪೂಜೆ ಪಾದ ಪೂಜೆ ಬಿಟ್ಟು ಬಸವ ತತ್ವದ ಸಂಸ್ಕೃತಿಯನ್ನು ಅನುಷ್ಠಾನಗೊಳಿಸಲಿ. ನಂತರ ರಾಜ್ಯದ ತುಂಬೆಲ್ಲ ಬಸವ ಸಂಸ್ಕೃತಿಯ ಅಭಿಯಾನ ಮಾಡಲಿ.
