ರೂ.೫೦ ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಅಶೋಕ ಮನಗೂಳಿ ಭರವಸೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಈ ಪ್ರದೇಶ ಬಹಳ ದಿನಗಳಿಂದ ಕುಂಠಿತಗೊಳ್ಳುತ್ತಾ ಬಂದಿತ್ತು. ಈ ಕಾಲೋನಿಯನ್ನು ವಿಶೇಷವಾಗಿ ಅಭಿವೃದ್ಧಿ ಪಡಿಸುವ ದಿಸೆಯಲ್ಲಿ ಇಲ್ಲಿನ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿರುವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ಪಟ್ಟಣದ ವಾರ್ಡ ನಂ.೦೭ರಲ್ಲಿ ೨೦೨೪-೨೫ನೆಯ ಸಾಲಿನ ಕಾಲೋನಿ ಅಭಿವೃದ್ಧಿ ಯೋಜನೆ/ಪ್ರಗತಿ ಕಾಲೋನಿ ಯೋಜನೆಯಡಿಯಲ್ಲಿ ಆಶ್ರಯ ಕಾಲೋನಿಯಲ್ಲಿ ರೂ.೫೦ಲಕ್ಷ ವೆಚ್ಚದ ಚರಂಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರೂ.೫೦ಲಕ್ಷ ವೆಚ್ಚದ ಚರಂಡಿ ಕಾಮಗಾರಿ ಪೂರ್ಣಗೊಳಿಸಿದ ಬಳಿಕ ರೂ.೧ ಕೋಟಿ ವೆಚ್ಚದ ಸಿಸಿ ರಸ್ತೆ ಮಾಡಿಸುವ ದಿಸೆಯಲ್ಲಿ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದೇನೆ. ಒಟ್ಟಿನಲ್ಲಿ ಈ ಪ್ರದೇಶವನ್ನು ಸಾರ್ವಜನಿಕರ ಮತ್ತು ನಿವಾಸಿಗಳ ಉತ್ತಮ ಆರೋಗ್ಯ ಹಾಗೂ ನೈರ್ಮಲ್ಯದ ಅನುಗುಣವಾಗಿ ಸೌಲಭ್ಯಗಳನ್ನು ಒದಗಿಸುತ್ತೇನೆ. ನನ್ನ ಮೂರು ವರ್ಷದ ಕಾಲಾವಧಿಯಲ್ಲಿ ಈ ಪ್ರದೇಶವನ್ನು ಅತ್ಯಂತ ಶ್ರೇಷ್ಠವಾದ ಕಾಲೋನಿಯನ್ನಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಸಿಂದಗಿ ನಗರದ ಪ್ರತಿಯೊಂದು ಕಾಲೋನಿಗಳಲ್ಲಿ ಸಿಸಿ ರಸ್ತೆ, ಚರಂಡಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎನ್ನುವ ಯೋಜನೆ ಇದೆ. ಹಂತ ಹಂತವಾಗಿ ಸಿಂದಗಿ ನಗರಕ್ಕೆ ಅನುದಾನವನ್ನು ತಂದು ಅಭಿವೃದ್ಧಿ ಪಡಿಸುತ್ತೇನೆ. ಸರಕಾರ ನೀಡುವ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳುವ ಜವಾಬ್ದಾರಿ ಸ್ಥಳೀಯ ನಿವಾಸಿ, ಅಧಿಕಾರಿ ಮತ್ತು ಪುರಸಭೆ ಸದಸ್ಯರದ್ದಾಗಿರುತ್ತದೆ. ಏಕೆಂದರೆ ಸರಕಾರ ನೀಡುವ ಅನುದಾನ ಮತ್ತು ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎಂದರು.
ಈ ವೇಳೆ ಆದಿಶೇಷ ಸಂಸ್ಥಾನಮಠದ ರಾಜಯೋಗಿ ನಾಗರತ್ನ ವೀರರಾಜೇಂದ್ರ ಮಹಾಸ್ವಾಮಿಗಳು, ಪುರಸಭೆ ಉಪಾಧ್ಯಕ್ಷ ಸಂದೀಪ ಚೌರ, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಶೈಲ ಬೀರಗೊಂಡ, ಸದಸ್ಯರಾದ ಹಣಮಂತ ಸುಣಗಾರ, ಭಾಷಾಸಾಬ ತಾಂಬೋಳ್ಳಿ, ಬಸವರಾಜ ಯರನಾಳ, ಗ್ಯಾರಂಟಿ ಸಮಿತಿ ಸದಸ್ಯರಾದ ಸುನಂದಾ ಯಂಪುರೆ, ರಜತ ತಾಂಬೆ, ಪುರಸಭೆ ಸಿಬ್ಬಂದಿ ದಯಾನಂದ ಇವಣಿ, ಅಜರ ನಾಟೀಕಾರ, ಅಲ್ಪಸಂಖ್ಯಾತರ ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಸಲೀಂಪಟೇಲ ಮರ್ತೂರ ಸೇರಿದಂತೆ ಅಧಿಕಾರಿಗಳು, ಸ್ಥಳೀಯ ನಿವಾಸಿಗಳು ಹಾಗೂ ಕಾರ್ಯಕರ್ತರು ಇದ್ದರು.

“ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾವಣೆ ಮಾಡಿದವರಿಗೆ ಮಾತ್ರ ಕಾಂಗ್ರೆಸ ಸರಕಾರ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿಲ್ಲ. ಜಾತ್ಯಾತೀತವಾಗಿ ಬಿಜೆಪಿ ಮತ್ತು ಜೆಡಿಎಸ್ ಸೇರಿದಂತೆ ಇತರೆ ಪಕ್ಷಗಳಿಗೂ ಮತ ಚಲಾಯಿಸಿದ ಮತದಾರರಿಗೂ ಗ್ಯಾರಂಟಿ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ.”
– ಅಶೋಕ ಮನಗೂಳಿ
ಶಾಸಕರು, ಸಿಂದಗಿ