ಉದಯರಶ್ಮಿ ದಿನಪತ್ರಿಕೆ
ಕಲಬುರಗಿ: ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಬೆಳವಣಿಗೆಗೆ ಮಾರಕವಾದ ಅಂಶಗಳನ್ನು ಅಳವಡಿಸಿ 2026 27ನೇ ಸಾಲಿನ ಹಣಕಾಸು ವರ್ಷದಿಂದ ಜಾರಿಗೆಗೊಳಿಸಲು ಸಿದ್ಧಪಡಿಸಲಾಗಿರುವ ಹೊಸ ಜಾಹೀರಾತು ನೀತಿಯನ್ನು ಕಲ್ಯಾಣ ಕರ್ನಾಟಕ ಸಂಪಾದಕರ ಸಂಘ ಕಲಬುರಗಿ ವಿಭಾಗ ತೀವ್ರವಾಗಿ ಖಂಡಿಸಿದೆ. ಪತ್ರಿಕೆಗಳ ಬೆಳವಣಿಗೆಗೆ ಮಾರಕವಾಗಿರುವ ಅಂಶಗಳನ್ನು ಕೈಬಿಡುವಂತೆ ಮಾರ್ಚ್ 17ರಂದು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಒತ್ತಾಯಿಸಲಾಗಿದೆ.
ಸಂಘದ ಪದಾಧಿಕಾರಿಗಳಾದ ಸುರೇಶ್ ಗೌರೆ, ಗುರುರಾಜ್ ಕುಲಕರ್ಣಿ, ಆನಂದ್ ಮಣ್ಣೂರ, ಹನುಮಂತ್ ರಾವ್ ಭೋಧನ್ ಕರ್ ಮತ್ತಿತರರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಳೆದ ಅನೇಕ ದಶಕಗಳಿಂದ ಜನತೆಯ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದೆ ಪರಿಗಣಿಸಲಾದ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳು ಹೊಸ ಜಾಹೀರಾತು ನೀತಿಯಿಂದ ಸಂಪೂರ್ಣ ಸ್ಥಗಿತ ಗೊಳ್ಳುವ ಆತಂಕ ಎದುರಾಗಿದೆ. ಸಣ್ಣ ಪತ್ರಿಕೆಗಳ ಬೆಳವಣಿಗೆಗಾಗಿ ಪ್ರೋತ್ಸಾಹ ನೀಡುವ ಸಲುವಾಗಿ ಹೊಸ ಜಾಹೀರಾತು ನೀತಿ ಕೈ ಬಿಟ್ಟು ಎಂದಿನಂತೆ ಹಳೆಯ ಪ್ರೋತ್ಸಾಹ ನೀತಿಯನ್ನು ಮುಂದುವರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಆದೇಶ ನೀಡುವುದರ ಜೊತೆಗೆ ಪುನರ್ ಪರಿಶೀಲನೆ ಮಾಡುವವರಿಗೆ ಹೊಸ ಅನುಷ್ಠಾನಕ್ಕೆ ತಡೆ ನೀಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.

