ಉದಯರಶ್ಮಿ ದಿನಪತ್ರಿಕೆ
ಹೆಚ್.ಡಿ.ಕೋಟ: ತಾಲೂಕಿನ ಬೋಚಿಕಟ್ಟೆ ಸಮೀಪ ಇರುವ ಚಿತ್ತಧಾಮದಲ್ಲಿ ಅರಣ್ಯ ಇಲಾಖೆ, ಮೈಸೂರು ಪ್ರಾದೇಶಿಕ ವಿಭಾಗ, ಹೆಚ್ ಡಿ ಕೋಟೆ ಉಪ ವಿಭಾಗ, ಹೆಚ್ ಡಿ ಕೋಟೆ ವಲಯ, ಹಾರ್ಟ್ ಸಂಸ್ಥೆ ಮೈಸೂರು ಸಹಯೋಗದೊಂದಿಗೆ ಅಣಬೆ ಬೇಸಾಯ ತರಬೇತಿ ಕಾರ್ಯಾಗಾರ ನಡೆಯಿತು. ಹಾರ್ಟ್ ಸಂಸ್ಥೆ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಗ್ರಾಮೀಣ ಜನರು ಕೃಷಿಯ ಜೊತೆಗೆ ಅಣಬೆ ಬೇಸಾಯದಂತಹ ಉಪ ಬೇಸಾಯ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು . ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು. ಅಣಬೆಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಇದೆ. ತರಬೇತಿ ಪಡೆದು ಅತಿ ಹೆಚ್ಚಾಗಿ ಅಣಬೆ ಬೆಳೆದು, ಆದಾಯ ಗಳಿಸುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಪ್ರಸನ್ನ ಮಾತನಾಡಿ, ದೊಡ್ಡ ಬಳ್ಳಾಪುರ, ಹೊಸಕೋಟೆ ಸೇರಿದಂತೆ ವಿವಿಧೆಡೆ ಅಣಬೆ ಬೇಸಾಯ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದೀಗ ಸುಲಭವಾಗಿ ಒಂದು ಕೋಣೆಯಲ್ಲಿ ಅಣಬೆ ಬೆಳಯಲು ಬೇಕಾದ ವಾತಾವರಣ ನಿರ್ಮಿಸಿ ಸುಲಭವಾಗಿ ಅಣಬೆಗಳನ್ನು ಬೆಳೆದು ಮಾರಾಟ ಮಾಡಬಹುದು, ಮಾರುಕಟ್ಟೆಯಲ್ಲಿ 500 ಗ್ರಾಂ ಅಣಬೆಗೆ 40 ರೂ.ಗಳಿಂದ 80 ರೂವರೆಗೆ ಮಾರಾಟ ಮಾಡಲಾಗುತ್ತದೆ. ಮಾರುಕಟ್ಟೆಯಲ್ಲಿ ಅಣಬೆಗೆ ಉತ್ತಮ ಬೇಡಿಕೆಯಿದೆ. ಸಂಪೂರ್ಣವಾಗಿ ಬೆಳೆದ ಅಣಬೆಯನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಇಟ್ಟರೆ ಸುಮಾರು 7ರಿಂದ 10 ದಿನಗಳವರೆಗೆ ಸಂಗ್ರಹಿಸಿಟ್ಟು ಮಾರಾಟ ಮಾಡಬಹುದು. ಇನ್ನು ಮನೆಗೆ ಸೀಮಿತವಾಗಿ ಸಾವಯವ ಮಾದರಿಯಲ್ಲಿ ಅಣಬೆ ಬೆಳೆಯುತ್ತೇವೆ ಎನ್ನುವವರಿಗೂ ಈ ತರಬೇತಿ ಉತ್ತಮ ಸಹಕಾರಿ ಆಗಲಿದೆ ಎಂದು ಹೇಳಿದರು.
ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ಎಸಿಎಫ್ ಸುಮಿತ್ರ ಅವರು ಪ್ರಮಾಣ ಪತ್ರ ನೀಡಿದರು. ಅಣಬೆ ಬೆಳೆಯಲು ಕಾಡಂಚಿನ ಭಾಗದ ಜನರಿಗೆ ಸಕಲ ರೀತಿಯಲ್ಲೂ ಅರಣ್ಯ ಇಲಾಖೆ ಸಹಾಯ ಮಾಡಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ರ, ವಲಯ ಅರಣ್ಯಾಧಿಕಾರಿ ರವಿಕುಮಾರ್, ಸುರೇಂದ್ರ, ವಸಂತ, ಅಭಿಲಾಷ್, ಚಿತ್ತಧಾಮ ವ್ಯವಸ್ಥಾಪಕ ಮಹದೇವಸ್ವಾಮಿ, ಹಾರ್ಟ್ ಸಂಸ್ಥೆಯ ಸಂಯೋಜಕ ಶಿವಲಿಂಗ ಸೇರಿದಂತೆ ಶಿಬಿರಾರ್ಥಿಗಳು ಭಾಗವಹಿಸಿದ್ದರು.

