ಚಿತ್ರಕಲಾವಿದ ದಿ.ಸೋಮಶೇಖರ ಸಾಲಿ ಜನ್ಮಶತಮಾನೋತ್ಸವ | ಚಿತ್ರಕಲಾ ಪ್ರದರ್ಶನ
ವಿಜಯಪುರ: ಅಖಂಡ ವಿಜಯಪುರ ಜಿಲ್ಲೆಯ ಶ್ರೇಷ್ಠ ಕಲಾವಿದ ದಿ.ಸೋಮಶೇಖರ ಸಾಲಿ ಅವರ ಕಲಾಕೃತಿಗಳು ತರುಣ ಕಲಾವಿದರಿಗೆ ಸ್ಪೂರ್ತಿಯಾಗಿವೆ. ಅವರ ಜನ್ಮಶತಮಾನೋತ್ಸವವನ್ನು ಅವರದೇ ಕಲಾಕೃತಿಗಳ ಪ್ರದರ್ಶನ ಮೂಲಕ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಅಭಿಪ್ರಾಯಪಟ್ಟರು.
ಗುರುವಾರ ನಗರದ ಸರಕಾರಿ ಆರ್ಟ್ ಗ್ಯಾಲರಿಯಲ್ಲಿ ಸೋಮಶೇಖರ ಸಾಲಿ ಪ್ರತಿಷ್ಠಾನವು ಅವರ ಜನ್ಮಶತಮಾನೋತ್ಸವ ಅಂಗವಾಗಿ ಹಮ್ಮಿಕೊಂಡ ದಿ.ಸೋಮಶೇಖರ ಸಾಲಿ ಅವರ ಸಮಗ್ರ
ಕಲಾಕೃತಿಗಳ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ದಿ.ಸೋಮಶೇಖರ ಸಾಲಿ ಅವರು ತಮ್ಮ ಸಹಜ ಸರಳ ಬದುಕಿನಲ್ಲಿ ಇಷ್ಟೊಂದು ಅದ್ಭುತ ಚಿತ್ರಗಳನ್ನು ರಚಿಸಿ ನಾಡಿಗೆ
ಬಹುದೊಡ್ಡ ಕೊಡುಗೆ ನೀಡಿರುತ್ತಾರೆ. ಈ ಬಹುಮುಖ ವ್ಯಕ್ತಿತ್ವದ ಕಲಾವಿದರ ಈ ಕಲಾ ಪ್ರದರ್ಶನದ ಪಯಣ ನಾಡಿನಾದ್ಯಂತ ಯಶಸ್ವಿಯಾಗಿ ನಡೆಯಲೆಂದು ಅವರು ಹಾರೈಸಿದರು.
ಅಧ್ಯಕ್ಷತೆ ವಹಿಸಿದ ಹಿರಿಯ ಕಲಾವಿದ ಪಿ.ಎಸ್. ಕಡೇಮನಿ ಮಾತನಾಡಿ, ದಿ.ಸೋಮಶೇಖರ ಸಾಲಿ ಅವರು ಲಲಿತಕಲಾ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಸಂಚಾರಿ ಕಲಾ ವಾಹನ ಪರಿಕಲ್ಪನೆ ಜಾರಿಗೆ ತಂದು, ಅದು ರಾಜ್ಯದ ಎಲ್ಲ ಜಿಲ್ಲೆಗಳಿಗೆ ಸಂಚರಿಸುವಂತೆ ವ್ಯವಸ್ಥೆ ಮಾಡಿದ್ದರು. ಬೆಂಗಳೂರಿನ ಚಿತ್ರಕಲಾ ಪರಿಷತ್ತು ಹಾಗೂ ಬಾಗಲಕೋಟೆಯ ಬಸವೇಶ್ವರ ಸಂಸ್ಥೆಯಂತಹ ಪ್ರತಿಷ್ಠಿತ ಸಂಸ್ಥೆಗಳ ಉಪಾಧ್ಯಕ್ಷರಾಗಿದ್ದರೂ ಅವರು ಯಾವತ್ತೂ ಆ ಸ್ಥಾನವನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳದೆ ಪ್ರಾಮಾಣಿಕತೆ, ಸಜ್ಜನಿಕೆ ಮೆರೆದಿದ್ದರು. ಅವರ ಕಲಾಕೃತಿಗಳು ಇಂದಿನ ಯುವಪೀಳಿಗೆಗೆ ಮಾದರಿ. ಇಂತಹ ಶ್ರೇಷ್ಠ ಕಲಾವಿದ ನಮ್ಮವರೇ ಆಗಿದ್ದು ಹೆಮ್ಮೆಯ ಸಂಗತಿ ಎಂದರು.
ಮುಖ್ಯ ಅತಿಥಿ,ಹಿರಿಯ ಕಲಾವಿದ ಮೋಹನ ಸೀತನೂರ ಮಾತನಾಡಿದರು.
ವಿಶ್ರಾಂತ ಪ್ರಾಚಾರ್ಯ ಡಾ. ಜೆ.ಎಸ್.ಹಿರೇಮಠ ಅವರು,
ಸೋಮಶೇಖರ ಸಾಲಿ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು.
ಶ್ರೀಮತಿ ಅಶ್ವಿನಿ ಹಿರೇಮಠ ಪ್ರಾರ್ಥಿಸಿದರು. ಕಲಾವಿದ ಮಂಜುನಾಥ ಮಾನೆ ಸ್ವಾಗತಿಸಿದರು. ಎ.ಎಸ್.ಪಾಟೀಲ ನಿರೂಪಿಸಿದರು. ಜನ್ಮಶತಮಾನೋತ್ಸವ ಸಮಿತಿ ಕಾರ್ಯದರ್ಶಿ ರಮೇಶ ಚವ್ಹಾಣ ವಂದಿಸಿದರು.
ಹಿರಿಯ ಕಲಾವಿದರಾದ ವಿ.ವಿ.ಹಿರೇಮಠ, ಬಸವರಾಜ ಗವಿಮಠ, ಜಿ.ಎಸ್.ಭೂಸಗೊಂಡ, ರಾಘವೇಂದ್ರ ಪಾಟೀಲ, ವಿಶ್ವನಾಥ ಅಗಸರ, ಪ್ರಶಾಂತ ಹೆಗಡೆ, ಬಿ.ಎಸ್.ಪಾಟೀಲ, ಚಂದ್ರಶೇಖರ ಬಗಲಿ, ಶ್ರೀಶೈಲ ಹೂಗಾರ ಸೇರಿದಂತೆ ಹಿರಿಯ ಕಲಾವಿದರು, ಕಲಾ ಶಿಕ್ಷಕರು, ಕಲಾ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.