ಶಾಸಕರ ಸಮಸ್ಯೆ ಇತ್ಯರ್ಥವಾಗಲಿದೆ | ಎಐಸಿಸಿ ರಾಜ್ಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಸ್ಪಷ್ಟನೆ
ಬೆಂಗಳೂರು: ನಾಯಕತ್ವ ಬದಲಾವಣೆ ಕುರಿತು ರಾಜ್ಯ ರಾಜಕೀಯ ವಲಯದಲ್ಲಿ ಊಹಾಪೋಹಗಳು ಹೆಚ್ಚಾಗಿದ್ದು, ಈ ನಡುವಲ್ಲೇ ಊಹಾಪೋಹಗಳಿಗೆ ಎಐಸಿಸಿ ರಾಜ್ಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರಿಗೆ ಹಲವು ಆಸೆಗಳು ಇರಬಹುದು. ಪಕ್ಷದಲ್ಲಿ ಹೈಕಮಾಂಡ್ ಇದೆ. ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನವದೆಹಲಿಗೆ ಭೇಟಿ ನೀಡುತ್ತಿರುವ ಕುರಿತು ಪ್ರತಿಕ್ರಿಯಿಸಿ, ಇಬ್ಬರೂ ರಾಷ್ಟ್ರ ರಾಜಧಾನಿಗೆ ಭೇಟಿ ನೀಡುವುದಕ್ಕೆ ಯಾವುದೇ ನಿರ್ಬಂಧವಿಲ್ಲ. ಕೇಂದ್ರ ಸರ್ಕಾರ ಕರ್ನಾಟಕದ ವಿರುದ್ಧ ತಾರತಮ್ಯ ಮಾಡದಂತೆ ಮನವೊಲಿಸಲು ಅವರು ಆಗಾಗ್ಗೆ ದೆಹಲಿಗೆ ಭೇಟಿ ನೀಡುತ್ತಾರೆ. ಇಬ್ಬರೂ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸ ಹೇಗಿದೆ? ಗ್ಯಾರಂಟಿ ಯೋಜನೆಗಳ ಪರಿಣಾಮ ಇತ್ಯಾದಿ ಬಗ್ಗೆ ನಿರ್ದಿಷ್ಟ ಪ್ರಶ್ನೆಗಳಿಗೆ ಶಾಸಕರಿಂದ ಉತ್ತರ ಪಡೆಯುತ್ತಿದ್ದೇವೆ. ಶಾಸಕರಾಗಿ ಜವಾಬ್ದಾರಿ ನಿರ್ವಹಿಸುವಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಇದಕ್ಕೆ ಏನು ಪರಿಹಾರ ಹುಡುಕಬೇಕು ಎಂಬ ಚಿಂತನೆ ನಡೆಯಲಿದೆ. ಶಾಸಕರು ಸಾಕಷ್ಟು ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದು, ಲಿಖಿತ ರೂಪದಲ್ಲಿ ಮಾಹಿತಿ ತೆಗೆದುಕೊಳ್ಳುತ್ತಿದ್ದೇವೆ ಎಂದರು,
ಈ ನಡುವೆ ಶಾಸಕರೊಂದಿಗೆ 2ನೇ ಸುತ್ತಿನ ಸಭೆ ನಡೆಸಿದ ಸುರ್ಜೇವಾಲಾ ಅವರು, ಬಳ್ಳಾರಿ ರಾಜಕೀಯಕ್ಕೆ ಸಂಬಂಧಿಸಿದಂತೆ ಹಲವಾರು ಸುತ್ತಿನ ಮಾತುಕತೆಗಳನ್ನು ನಡೆಸಿದರು.

ಮೋದಿ ಸರ್ಕಾರದಿಂದ ರಾಜ್ಯ ರೈತರ ದಮನ
ಮೋದಿ ಸರ್ಕಾರ ರಾಜ್ಯ ರೈತರನ್ನು ದಮನ ಮಾಡುತ್ತಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕ ದೇಶದ ಶೇ.50 ತೊಗರಿ ಬೇಳೆ ಬೆಳೆಯುತ್ತವೆ. ಬೆಲೆ ಕುಸಿತ ಹಿನ್ನೆಲೆ ರಾಜ್ಯ ಸರ್ಕಾರ ತೊಗರಿ ಬೇಳೆಗೆ 16,548 ರೂ. ನಂತೆ ಪ್ರತಿ ಕ್ವಿಂಟಾಲ್ ಗೆ ದರ ನಿಗದಿಗೆ ಬೇಡಿಕೆ ಇಟ್ಟಿದೆ. ಆದರೆ, ಕೇಂದ್ರ ಸರ್ಕಾರ ಪ್ರತಿ ಕ್ವಿಂಟಾಲ್ ಗೆ ಕೇವಲ 8,000 ದರ ನಿಗದಿ ಮಾಡಿದೆ. ಸದ್ಯ ರಾಜ್ಯ ರೈತರು ಬೆಲೆ ಕುಸಿತದಿಂದ ತೊಗರಿ ಬೇಳೆಯನ್ನು ಪ್ರತಿ ಕ್ವಿಂಟಾಲ್ ಗೆ ರೂ.5500-ರೂ.6000 ರಂತೆ ಮಾರಾಟ ಮಾಡಬೇಕಾಗಿದೆ.
ರಾಜ್ಯದ ರೈತರು 10 ಲಕ್ಷ ಕ್ವಿಂಟಾಲ್ ತೊಗರಿ ಬೇಳೆ ಬೆಳೆಯುತ್ತಿದ್ದಾರೆ. ಬೆಲೆ ಕುಸಿತ ಹಾಗೂ ಈ ಬೆಂಬಲ ಬೆಲೆ ಕೊಡದೇ ಇರುವ ಕಾರಣ ರಾಜ್ಯದ ರೈತರಿಗೆ 1,550 ಕೋಟಿ ರೂ. ನಷ್ಟವಾಗುತ್ತಿದೆ. ಮೋದಿ ಸರ್ಕಾರ ತಾರತಮ್ಯ ಮಾಡುತ್ತಿದೆ. ರಾಜ್ಯದ ರೈತರಿಗೆ ತಾರತಮ್ಯ ಮಾಡುತ್ತಿದೆ. ಮೋದಿ ಸರ್ಕಾರ ಮೊಸಾಂಬಿಕ್, ಮ್ಯಾನ್ಮಾರ್, ಆಸ್ಟ್ರೇಲಿಯಾದ ರೈತರನ್ನು ಬೆಂಬಲಿಸುತ್ತಿದೆ ಎಂದು ಅವರು ಆರೋಪಿಸಿದರಲ್ಲದೆ, ಕೇಂದ್ರ ಸರ್ಕಾರ ತೊಗರಿ ಬೇಳೆ ಆಮದನ್ನು ತೆರಿಗೆ ಮುಕ್ತ ಮಾಡಿದೆ. ಮಾರ್ಚ್ 2026ರ ವರೆಗೆ ಆಮದು ತೆರಿಗೆ ಮುಕ್ತ ಮಾಡಿದೆ. ನಿಮಗೆ ದೇಶದ ರೈತರ ಅಗತ್ಯ ಇಲ್ಲ. ವಿದೇಶಿ ರೈತರ ಅಗತ್ಯ ಇದೆ ಎಂದು ವಾಗ್ದಾಳಿ ನಡೆಸಿದರು.

