ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಇಡೀ ವಿಜಯಪುರ ಜಿಲ್ಲೆಗೆ ಕೇಂದ್ರ ಮತ್ತು ರಾಜ್ಯ ಸರಕಾರ ರೂ.೪೦೦ ಕೋಟಿ ಅನುದಾನವನ್ನು ಈ ಯೋಜನೆಗೆ ನೀಡಿದ್ದಾರೆ. ಇದರಲ್ಲಿ ಸಿಂದಗಿ ನಗರಕ್ಕೆ ಸುಮಾರು ರೂ.೬೫ ಕೋಟಿ ಹಣ ಖರ್ಚಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಸಿಂದಗಿ ಪಟ್ಟಣದ ಪುರಸಭೆ ಆವರಣದಲ್ಲಿ ಕೇಂದ್ರ ಪುರಸ್ಕೃತ ಅಮೃತ ೨.೦ ಯೋಜನೆ ಅಡಿ ಸಿಂದಗಿ ಪಟ್ಟಣಕ್ಕೆ ೨೪೭ ಕುಡಿಯುವ ನೀರು ಸರಬರಾಜು ವಿತರಣಾ ವ್ಯವಸ್ಥೆ ಕಲ್ಪಿಸುವ ಯೋಜನೆ (ಹಂತ ೧ಮತ್ತು೨)ರ ಶಂಕು ಸ್ಥಾಪನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮುಂಬರುವ ದಿನಮಾನಗಳಲ್ಲಿ ಹಂತ ಹಂತವಾಗಿ ಈ ಹಣ ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಬಜೆಟ್ ಬರುವ ವೇಳೆಗೆ ಸಂಪೂರ್ಣ ಖರ್ಚಾಗುತ್ತದೆ. ೧ಮತ್ತು೨ ಹಂತದ ಈ ಯೋಜನೆ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ೧೮ ತಿಂಗಳುಗಳ ಕಾಲಾವಧಿ ಇದ್ದು, ಅದರೊಳಗಾಗಿ ಕಾಮಗಾರಿ ಪೂರ್ಣಗೊಳಿಸಬೇಕು. ಏಕೆಂದರೆ ಸಾರ್ವಜನಿಕರಿಗೆ ಅತ್ಯಂತ ಅನುಕೂಲಕರವಾದ ಯೋಜನೆ. ದಿನದ ೨೪ಗಂಟೆಗಳ ಕಾಲ ನೀರು ಸರಬರಾಜಾಗುತ್ತದೆ. ನೀರನ್ನು ಮಿತವಾಗಿ ಬಳಸಿ. ವಿಜಯಪುರ ಜಿಲ್ಲೆಗೆ ಹಿಂದೆಯೂ ಯಾರು ಮಾಡಿಲ್ಲ ಮುಂದೆಯೂ ಯಾರು ಮಾಡಲಿಕ್ಕೆ ಆಗದಷ್ಟು ಕೆಲಸ ನಮ್ಮ ಸರಕಾರದಲ್ಲಿ ಮಾಡಿದ್ದೇನೆ. ವಿಜಯಪುರ ಜಿಲ್ಲೆಗೆ ನ್ಯಾಷನಲ್ ಹೈವೆ ಇರಲಿಲ್ಲ, ೬ ನ್ಯಾಷನಲ್ ಹೈವೆ ಬಂದು ಸೇರುವಂತೆ ೧ಸಾವಿರದ ೮ನೂರು ಕೋಟಿ ಹಣ ತಂದು ಕೆಲಸ ಮಾಡಿದ್ದೇನೆ. ಮುಂಬರುವ ದಿನಮಾನಗಳಲ್ಲಿ ಪೇರ ಪೇರಿಯಲ್ ರಸ್ತೆ ಮಂಜೂರು ಮಾಡುವಂತೆ ಈಗಾಗಲೇ ಕೇಂದ್ರ ಸಚಿವರಿಗೆ ಮನವಿ ಮಾಡಿಕೊಂಡಿದ್ದೇನೆ. ಸುಮಾರು ೭೪೭ಕಿಮೀ ರಸ್ತೆಗೆ ೭೫೦ ಕೋಟಿ ಹಣವನ್ನು ಕೋಡುತ್ತೇವೆ ಎನ್ನುವಂತೆ ಮಂತ್ರಿಗಳು ಭರವಸೆ ನೀಡಿದ್ದಾರೆ ಎಂದರು. ಈ ವೇಳೆ ಶಾಸಕ ಅಶೋಕ ಮನಗೂಳಿ ಮಾತನಾಡಿ, ಸಿಂದಗಿ ನಗರದ ಜನತೆಯ ಬಹುದಿನಗಳ ಬೇಡಿಕೆಗೆ ಇದೀಗ ಸಮಯ ಕೂಡಿ ಬಂದಿದೆ. ದಿ.ಎಂ.ಸಿ.ಮನಗೂಳಿ ಅವರು ಮತಕ್ಷೇತ್ರದಲ್ಲಿ ಶಾಶ್ವತ ಯೋಜನೆಗಳನ್ನು ತರುವಂತ ಕಾರ್ಯ ಮಾಡಿದ್ದಾರೆ. ಇಂತಹ ಕಾರ್ಯಗಳಿಗೆ ಸಹಕರಿಸಿದ ಕೀರ್ತಿ ಸಂಸದ ಜಿಗಜಿಣಗಿ ಅವರಿಗೆ ಸಲ್ಲುತ್ತದೆ. ಅಮೃತ್ತ ೨ ಯೋಜನೆಗೆ ಕೇಂದ್ರ ಸರಕಾರದಿಂದ ಶೇ.೫೦ರಷ್ಟು, ರಾಜ್ಯ ಸರಕಾರದಿಂದ ಶೇ.೪೦, ಸ್ಥಳೀಯ ಸಂಸ್ಥೆಯಿಂದ ಶೇ.೧೦ರಷ್ಟು ಹಣವನ್ನು ಈ ಯೋಜನೆ ಹೊಂದಿದೆ. ಮೊದಲನೆ ಹಂತದಲ್ಲಿ ರೂ.೧೪.೭೫ಕೋಟಿ, ಎರಡನೆಯ ಹಂತದಲ್ಲಿ ರೂ.೨೬.೫೩ಕೋಟಿ ವೆಚ್ಚದ ಈ ೨೪೭ ಯೋಜನೆ ಹಣ ಬಂದಿದೆ. ಇದು ೬ಹಂತದ ಯೋಜನೆಯಾಗಿದ್ದು, ಇದು ೪ ಹಂತಗಳ ಭೂಮಿ ಪೂಜೆ ಮಾಡಲಾಗಿದೆ. ಇದರಲ್ಲಿ ಕನಿಷ್ಠ ೫ಸಾವಿರ ಮನೆಗಳಿಗೆ ೨೪*೭ ನೀರು ಸರಬರಾಜು ಮಾಡುವಂತಹ ವ್ಯವಸ್ಥೆಯಾಗುತ್ತದೆ. ಇನ್ನೂ ಎರಡು ಹಂತದ ರೂ.೪೦ ಕೋಟಿ ಅನುದಾನ ಕುರಿತಾಗಿ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ್ದೇನೆ. ವಿಜಯಪುರದಲ್ಲಿ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಮಂಜೂರು ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದೇನೆ. ಮಂಜೂರಾಗುತ್ತೆ ಎನ್ನುವ ಆಶಾ ಭಾವನೆ ನನ್ನಲ್ಲಿದೆ.
ಈ ವೇಳೆ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಶೈಲ ಬೀರಗೊಂಡ, ಮುಖ್ಯಾಧಿಕಾರಿ ಎಸ್.ರಾಜಶೇಖರ, ಕಾರ್ಯಪಾಲಕ ಅಭಿಯಂತರ ಗೋವಿಂದ ಎಸ್. ಗುತ್ತಿಗೆದಾರ ಬಿ.ಎಸ್.ಬಿರಾದಾರ, ಪುರಸಭೆ ಸದಸ್ಯರಾದ ಹಣಮಂತ ಸುಣಗಾರ, ಬಸವರಾಜ ಯರನಾಳ, ಸಾಯಬಣ್ಣ ಪುರದಾಳ, ಸಿದ್ದು ಮಲ್ಲೇದ, ಚನ್ನಪ್ಪ ಗೋಣಿ, ಸಿಬ್ಬಂದಿ ಸಿದ್ದು ಅಂಗಡಿ, ನಬಿರಸೂಲ್ ಉಸ್ತಾದ, ಸಚಿನ ಮೋರಟಗಿ ಸೇರಿದಂತೆ ಇತರರು ಇದ್ದರು.
ಸಿಂದಗಿ ಕೊಡಂಗಲ್ ರಸ್ತೆಗೆ ಶಾಸಕ ಮನಗೂಳಿ ಮನವಿ
ಚುನಾವಣೆಯ ಸಂದರ್ಭದಲ್ಲಿ ಒಂದು ತಿಂಗಳಲ್ಲಿ ಮಾತ್ರ ಪಕ್ಷಕ್ಕಾಗಿ ದುಡಿಯೋಣ. ಒಂದು ತಿಂಗಳ ರಾಜಕೀಯ ಮಾಡೋಣ. ೫೯ ತಿಂಗಳ ಕಾಲ ಜನಪರ ಅಭಿವೃದ್ಧಿ ಕೆಲಸ ಮಾಡೋಣ. ಸಿಂದಗಿ ಕೊಡಂಗಲ್ ರಸ್ತೆ ಬಹಳ ಅವಶ್ಯಕತೆ ಇದೆ. ಅದೊಂದ ರಸ್ತೆ ಮಾಡಿಕೊಡಬೇಕು. ವಿಜಯಪುರ-ಬೆಂಗಳೂರು-ವಿಜಯಪುರ ಸೂಪರ ಫಾಸ್ಟ್ ರೈಲು ಸೇವೆ, ನಗರಕ್ಕೆ ಕೇಂದ್ರ ಸರಕಾರ ಹಂತದಲ್ಲಿ ಬರುವ ಒಳಾಂಗಣ ಕ್ರೀಡಾಂಗಣ ಮಂಜೂರು ಮಾಡಿಸಿಕೊಡಿ ಎಂದು ಶಾಸಕ ಅಶೋಕ ಮನಗೂಳಿ ಮನವಿ ಮಾಡಿಕೊಂಡರು.

