ಲೇಖನ
– ವೀಣಾ ವೈಷ್ಣವಿ
’ನಮ್ಮ ಕಥಾ ಅರಮನೆ’
ಬರಹಗಾರರು
ಉದಯರಶ್ಮಿ ದಿನಪತ್ರಿಕೆ
ವಿಳಾಸ ಬದಲಾದರೆ ಜೀವನವೂ ಬದಲಾಗುತ್ತಾ…?
ಈ ಪ್ರಶ್ನೆ ನನ್ನಲ್ಲಿ ನಾನೇ ಎಷ್ಟು ಸಲ ಕೇಳಿಕೊಂಡಿದ್ದೀನೋ ಏನೂ, ಹೌದು ನನ್ನ ಮಟ್ಟಿಗೆ ವಿಳಾಸ ಬದಲಾದಾಗೆಲ್ಲ ಜೀವನವೂ ಬದಲಾಗುತ್ತೆ, ನಮ್ಮ ಗುರುತು ಕೂಡ. ಅಪ್ಪ ಅಮ್ಮನ ಒಬ್ಬಳೇ ಮಗಳಾಗಿ ಮೈಸೂರಿನ ಹತ್ತಿರದ ಹಳ್ಳಿಯೊಂದರಲ್ಲಿದ್ದ ನಾನು ಶಶಾಂಕನನ್ನು ವರಿಸಿ ಬೆಂಗಳೂರು ನಗರಕ್ಕೆ ಕಾಲಿಟ್ಟಿದ್ದೆ. ಹಳ್ಳಿಯಿಂದ ಬೆಂಗಳೂರಿನ ಶಶಾಂಕನ ಅಪಾರ್ಟ್ಮೆಂಟ್ ಗೆ ನನ್ನ ವಿಳಾಸ ಬದಲಾಗಿದ್ದೆ ಅದರೊಂದಿಗೆ ನನ್ನ ಗುರುತು, ಜೀವನ ಎರಡೂ ಕೂಡ ಬದಲಾಗಿ ಹೋಗಿತ್ತು. ಮೆಚ್ಚಿನ ಮಗಳಾಗಿದ್ದ ನನ್ನ ಜೀವನ ಇನ್ಮೇಲೆ ಹೆಂಡತಿಯಾಗಿ, ಅತ್ತೆ ಮಾವನ ಮೆಚ್ಚಿನ ಸೊಸೆಯಾಗಿ ಪ್ರಾರಂಭ ಆಗುತ್ತೆ ಎಂದು ಕನಸು ಹೊತ್ತಿದ್ದರೆ, ಅ ಮನೆಗೆ ಬಂದ ಮೊದಲ ರಾತ್ರಿಯೆ ಶಶಾಂಕ್ ನ ನಿಜ ಸ್ವರೂಪ ಬಯಲಾಗಿತ್ತು . ನೋಡು ನಾನು ಅಪ್ಪ ಅಮ್ಮನ ಖುಷಿಗಾಗಿ ಅಷ್ಟೇ ನಿನ್ನ ಮದುವೆಯಾಗಿದ್ದು, ನಾನು ನನ್ನ ಸಹೋದ್ಯೋಗಿ ರೀಟಾಳನ್ನು ಪ್ರೀತಿಸುತ್ತಿದ್ದೇನೆ, ಸ್ವಲ್ಪ ಸಮಯದ ನಂತರ ನಿಂಗೆ ಮಗು ಆಗೋಲ್ಲ ಅಂತ ಕಾರಣ ಕೊಟ್ಟು ನಿನ್ನಿಂದ ಡೈವೋರ್ಸ್ ತಗೊಂಡು, ಅಪ್ಪ ಅಮ್ಮನ ಮನವೊಲಿಸಿ ರೀಟಾಳನ್ನು ಮದುವೆಯಾಗುತ್ತೇನೆ, ಅಲ್ಲಿಯವರೆಗೆ ನೀನು ಇಲ್ಲಿ ಇರಬಹುದು ಎಂದು ನೇರ ನೇರ ಹೇಳಿ ಹೊರ ಹೊರಟು ಬಿಟ್ಟಿದ್ದ.
ಅವನ ಮಾತಿನಿಂದ ನನ್ನ ಜೀವನವೇ ಬದಲಾಗಿ ಹೋಗಿತ್ತು. ಆಗಾಗ ಬಂದು ಹೋಗುತ್ತಿದ್ದ ಅತ್ತೆ ಮಾವನ ಅನುಭವಿ ಕಣ್ಣುಗಳು ನನ್ನ ಮತ್ತು ಶಶಾಂಕ್ ನಡುವೆ ಏನೂ ಸರಿಯಿಲ್ಲ ಎಂದು ಪತ್ತೆ ಹಚ್ಚಿದ್ದವು. ನೋಡು ಶರಧಿ ನಮಗೆ ಹೆಣ್ಣು ಮಕ್ಕಳಿಲ್ಲ ಆದ್ದರಿಂದ ನಿನ್ನನ್ನೇ ಮಗಳು ಎಂದುಕೊಂಡಿದ್ದೇವೆ, ಶಶಾಂಕ್ ನಿನ್ನ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂದು ನಮಗೆ ಅನಿಸುತ್ತಿದ್ದೆ, ನಿಂಗೆ ಇಲ್ಲಿ ಏನಾದರೂ ತೊಂದರೆ ಆಗುತ್ತಿದ್ದರೆ ದಯವಿಟ್ಟು ಯಾವುದನ್ನೂ ಮುಚ್ಚಿಡದೆ ಹೇಳು ಎಂದಾಗ, ನನ್ನ ಸಂಕಟ ನೋವು ಕಣ್ಣೀರಾಗಿ ಹರಿದಿತ್ತು.ಮಗನ ಕಥೆ ಕೇಳಿ ಕೋಪ ಧಿಗ್ಬ್ರಮೆಗೊಂಡ ಅವರು ಮಗ ಬರುವುದನ್ನೇ ಕಾದು ಅವನೊಂದಿಗೆ ದೊಡ್ಡ ಜಗಳವನ್ನೇ ಮಾಡಿದರು. ಅಪ್ಪ ಅಮ್ಮನ ಕಣ್ಣೀರು, ಕೋಪ ಯಾವುದಕ್ಕೂ ಶಶಾಂಕ್ ಜಗ್ಗದಿದ್ದಾಗ, ನೀನು ಮಾಡಿದ ಕೆಲಸದಿಂದ ನಾವು ಗೊತ್ತಿಲ್ಲದೇ ಒಂದು ಹುಡುಗಿಯ ಬಾಳು ಹಾಳು ಮಾಡಿದಂತಾಯಿತು, ಅಪ್ಪ ಅಮ್ಮನ ಮಾತಿಗೆ ಗೌರವ ಕೊಡದ ನಿನ್ನಂತ ಮಗ ನಮಗೂ ಬೇಡ ಎಂದು ಅಂದು ರಾತ್ರಿಯೆ ನನ್ನ ಕರೆದುಕೊಂಡು ತಾವು ವಾಸಿಸುತ್ತಿದ್ದ ತಮ್ಮ ಸ್ವಂತ ಮನೆಗೆ ಕರೆದೋಯ್ದರು. ತುಂಬಾ ಅಲ್ಪಾವಧಿಯಲ್ಲೇ ನನ್ನ ವಿಳಾಸ ಶಶಾಂಕ್ ನ ಅಪಾರ್ಟ್ಮೆಂಟ್ ಇಂದ ಬನಶಂಕರಿಯ ಮಾವನ ಮನೆ ವಿಳಾಸಕ್ಕೆ ಬದಲಾಗಿ ಹೋಗಿತ್ತು. ಶಶಾಂಕ್ ಇಂದ ವಿಚ್ಚೇದನದ ನೋಟೀಸ್ ಬಂದಾಗ ಅವನಾದರೂ ಇಷ್ಟಪಟ್ಟವರೊಂದಿಗೆ ಸುಖವಾಗಿರಲಿ ಎಂದು ಕೋರ್ಟ್ನಲ್ಲಿ ವಿಚ್ಚೇದನ ಪತ್ರಕ್ಕೆ ಸಹಿ ಹಾಕಿ ಬಂದಿದ್ದೆ.

ಶಶಾಂಕ್ ನ ಹೆಂಡತಿಯಾಗಿ ಬಂದ ನನ್ನ ಗುರುತು ಈಗ ಕೇವಲ ಅತ್ತೆ ಮಾವನ ಸೊಸೆಯಾಗಿ ಮಾತ್ರ ಉಳಿದಿತ್ತು.ಹಳ್ಳಿಗೆ ಹಿಂತಿರುಗಿ ಊರವರ ಬಾಯಿಗೆ ಆಹಾರವಾಗಿ ಅಪ್ಪ ಅಮ್ಮನ ಕಣ್ಣೀರಿಗೆ ಕಾರಣವಾಗುವ ಬದಲು ಅತ್ತೆ ಮಾವನವರ ಜೊತೆ ಉಳಿಯುವುದೇ ಸರಿ ಎನಿಸಿತ್ತು. PUC ಓದಿದ್ದ ನನ್ನನ್ನು ಮಾವ ಹತ್ತಿರದ ಕಾಲೇಜಿನಲ್ಲಿ ಪದವಿಗೆ ಅಡ್ಮಿಶನ್ ಕೊಡಿಸಿದ್ದರು. ನಾನು ಮುಂದೆ ಓದಿ ಸ್ವಾವಲಂಬಿಯಾಗಿರಬೇಕು ಎಂದು ಹೆತ್ತ ಮಗಳಿಗಿಂತ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ನಾನು ಕೂಡ ಅವರ ನಿರೀಕ್ಷೆ ಹುಸಿ ಮಾಡದೇ ಪದವಿ ಮುಗಿಸಿ ಸ್ನಾತಕೋತ್ತರ ಪದವಿ ಪಡೆಯಲು ಓದಲಾರಂಭಿದ್ದೆ.
ಆ ದಿನಗಳಲ್ಲೇ ನನಗೆ ವಿಲಿಯಂ ಪರಿಚಯವಾಗಿದ್ದು. ಭಾರತೀಯ ಸಂಸ್ಕೃತಿ ಬಗ್ಗೆ ಅಧ್ಯಯನ ಮಾಡಲು ಲಂಡನ್ ಇಂದ ಬಂದಿದ್ದ ಅವನು ಕನ್ನಡವನ್ನು ಕಲಿತು ಮಾತನಾಡುತ್ತಿದ್ದ. ಸದಾ ಹಸನ್ಮುಖಿಯಾಗಿರುವ, ಸದಾ ಗೆಲುವಾಗಿರುವ ವಿಲಿಯಂ ನನ್ನು ಅತ್ತೆಮಾವನಿಗೂ ಪರಿಚಯಿಸಿದ್ದೆ. ನನ್ನ ಸ್ನಾತಕೋತ್ತರ ಪದವಿ ಮುಗಿಯುವಷ್ಟರಲ್ಲಿ ವಿಲಿಯಂ ಅತ್ತೆ ಮಾವನಿಗೆ ತುಂಬಾ ಆತ್ಮೀಯನಾಗಿ ಬಿಟ್ಟಿದ್ದ. ಅವನು ಲಂಡನ್ಗೆ ವಾಪಾಸ್ ಹೋಗುವ ಮೊದಲು ಅತ್ತೆ ಮಾವನ ಮುಂದೆ ನನ್ನ ಮದುವೆಯಾಗುವ ಪ್ರಸ್ತಾಪ ಇಟ್ಟಿದ್ದ. ವಿಲಿಯಂ ನನ್ನನ್ನು ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟ ಮೇಲೆ ಅತ್ತೆ ಮಾವ ನನ್ನ ಒಪ್ಪಿಗೆ ಪಡೆದು ಅವನೊಂದಿಗೆ ನನ್ನ ಮದುವೆ ಮಾಡಿಸಿದ್ದರು.
ಮಗದೊಮ್ಮೆ ನನ್ನ ವಿಳಾಸದೊಂದಿಗೆ ನನ್ನ ಜೀವನ, ನನ್ನ ಗುರುತು ಕೂಡ ಬದಲಾಗಿತ್ತು. ವಿಲಿಯಂ ನ ಹೆಂಡತಿಯಾಗಿ ಲಂಡನ್ ನಗರಕ್ಕೆ ಕಾಲಿಟ್ಟಿದ್ದೆ. ವಿಲಿಯಂ ಜೊತೆಗಿನ ಜೀವನದಲ್ಲಿ ಸಮಯ ಸರಿದ್ದದ್ದೇ ತಿಳಿಯಲಿಲ್ಲ,ಮಗಳ ಜನನದೊಂದಿಗೆ ವಿಲಿಯಂನ ಖುಷಿಗೆ ಪಾರವೇ ಇರಲಿಲ್ಲ.ಆದರೆ ವಿಧಿ ಇಲ್ಲಿಯೂ ನನ್ನ ಬೆನ್ನಟ್ಟಿತ್ತು. ಏನೂ ಕೆಲಸದ ಮೇಲೆ ಲಂಡನ್ನಿಂದ ಭಾರತಕ್ಕೆ ಹೊರಟ ವಿಲಿಯಂ ವಿಮಾನದೊಡನೆ ಸುಟ್ಟು ಕರಕಲಾಗಿ ಹೋಗಿದ್ದ.
ನಾನು ನನ್ನ ಮಗು ಅನಾಥರಾಗಿದ್ದೆವು.ಅತ್ತೆ ಮಾವ ಮತ್ತೆ ಬಂದು ಸಂತೈಸದಿದ್ದರೆ ನಾನು ಏನಾಗುತ್ತಿದ್ದೆನೋ… ವಿಲಿಯಂ ಸಾವಿನ ಪರಿಹಾರವಾಗಿ ಬಂದ ಹಣ ಮತ್ತು ಮಾವ ನನ್ನ ಹೆಸರಿನಲ್ಲಿ ಇಟ್ಟಿದ್ದ ಡೆಪಾಸಿಟ್ ಹಣ ಒಟ್ಟುಗೂಡಿಸಿ ಈ ಅಪಾರ್ಟ್ಮೆಂಟ್ ಲ್ಲಿ ಪುಟ್ಟ ಫ್ಲಾಟ್ ಒಂದನ್ನು ಕೊಂಡಿದ್ದೆ.
ನನ್ನ ವಿಳಾಸ ಬದಲಾಗಿತ್ತು… ಜೀವನ ಹಾಗೂ ನನ್ನ ಗುರುತು ಕೂಡ. ವಿಲಿಯಂ ಇಲ್ಲದ ಬಾಳಲ್ಲಿ ಅವನ ಪ್ರತಿರೂಪವಾಗಿ ಮಗಳು ಆದ್ಯಾ ವಿಲಿಯಂ ಇದ್ದಳು, ಆದ್ಯಾಳಿಗೆ ಅಮ್ಮನಾಗಿ, ಅತ್ತೆ ಮಾವನವರಿಗೆ ಮಗಳಾಗಿ ಉಳಿದಿದ್ದೆ.ಇನ್ನೆಂದು ನನ್ನ ವಿಳಾಸವಾಗಲಿ, ಜೀವನವಾಗಲಿ, ಗುರುತಾಗಲಿ ಬದಲಾಗುವುದಿಲ್ಲ ಅನ್ನುವ ಭರವಸೆ ಹೊತ್ತು ನಿಂತಿದ್ದೆ.
