ಲೇಖನ
– ಜಯಲಕ್ಷ್ಮೀಕೃಷ್ಣ
ಬೆಂಗಳೂರು
“ನಮ್ಮ ಕಥಾ ಅರಮನೆ*
ಬರಹಗಾರರು
ಉದಯರಶ್ಮಿ ದಿನಪತ್ರಿಕೆ
ಸಮಯ ಮನುಷ್ಯನ ಜೀವನದಲ್ಲಿ ಎಷ್ಟು ಪ್ರಾಮುಖ್ಯವನ್ನು ಪಡೆದಿದೆ ಅಲ್ಲವೇ..! ಜಗತ್ತಿನಲ್ಲಿ
ಏನನ್ನಾದರೂ ಹಣ ನೀಡಿ ಕೊಂಡುಕೊಳ್ಳಬಹುದು ಆದರೆ ಸರಿದ ಕಳೆದಹೋದ ಸಮಯವನ್ನು ಮತ್ತೆ ಪಡೆಯಲು ಸಾಧ್ಯವಾಗದು. ಅಷ್ಟು ಅಮೂಲ್ಯವಾದುದು.ಇರುವ ಸಮಯ ಕಳೆದು ಹೋದರೆ ಮತ್ತೆ ನಮ್ಮ ಕೈಗೆ ಸಿಗುವುದೇ ಇಲ್ಲ. ಕೈ ಜಾರಿದ ಮುತ್ತಿನಂತೆ. ಮತ್ತೆ ಸೇರುವುದೇ ಇಲ್ಲ. ಆದುದರಿಂದ ಸಮಯಕ್ಕೆ ಯಾರು ಪ್ರಾಧಾನ್ಯತೆ ನೀಡುತ್ತಾರೋ ಗೌರವಿಸುತ್ತಾರೆ ಅವರು ಜೀವನದಲ್ಲಿ ಬಹಳ ಎತ್ತರಕ್ಕೆ ಬೆಳೆಯುತ್ತಾರೆ. ಸೂರ್ಯ ಉದಯಿಸುವ ಮೊದಲು ಎದ್ದು ಯಾರು ನಿತ್ಯದ ಕೆಲಸ ಕಾರ್ಯಗಳಲ್ಲಿ ತೊಡಗಿ ಸೂರ್ಯನನ್ನು ಸ್ವಾಗತಿಸುತ್ತಾರೋ ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿಯಂತೆ. ಅಯ್ಯೋ ಚಳಿ ಬೆಚ್ಚಗೆ ಇನ್ನೂ ಸ್ವಲ್ಪ ಮಲಗಿದರಾಯಿತು ಎಂದು ಮಲಗಿ ನಿದ್ದೆ ಮಾಡಿ ಕಾಲಹರಣ ಮಾಡಿದರೆ ಹೋದ ಸಮಯ ಮತ್ತೆ ಹಿಂದೆ ಯಂತೂ ಬರುವುದಿಲ್ಲ. ಆದರೆ ಸೋಮಾರಿತನ ಅನಾರೋಗ್ಯ ಇವೆಲ್ಲಾ ಆವರಿಸಿ ದೇಹ ಆಲಸ್ಯಕ್ಕೆ ಒಗ್ಗಿಕೊಂಡು ಯಾವುದರ ಕಡೆಗೂ ಮನಸ್ಸು ಲವಲವಿಕೆಯಿಂದ ಇರಲು ಸಾಧ್ಯವಾಗದೇ ನೀರಿನಿಂದ ತೆಗೆದ ಮೀನಿನಂತೆ ಒದ್ದಾಡುತ್ತದೆ.

ಇದಕ್ಕೆ ನಿದರ್ಶನವಾಗಿ ನಮ್ಮ ಹಿಂದಿನ ಅನೇಕ ಮಹಾಪುರುಷರ ಜೀವನಗಾಥೆಗಳು ನಮಗೆ ಉದಾಹರಣೆಯಾಗಿ ಕಾಣುತ್ತವೆ. ಅವರು ಸಮಯಕ್ಕೆ ಅಷ್ಟು ಪ್ರಾಧಾನ್ಯತೆ ನೀಡಿ ಕಷ್ಟದ ಜೀವನವನ್ನು ಇಷ್ಟ ಪಟ್ಟು ಕಟ್ಟುನಿಟ್ಟಾಗಿ ಜೀವನ ಸಾಗಿಸಿದ ರೀತಿಯಿಂದ ಇಂದು ನಮ್ಮ ಮನಗಳಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ದೇವರ ಸ್ವರೂಪದಂತೆ. ಆದುದರಿಂದ ಜೀವನದಲ್ಲಿ ಏನನ್ನಾದರೂ ಸಾಧಿಸುವುದಿದ್ದರೆ ಸಮಯ ಸಿಕ್ಕಾಗ ಮಾಡಿ ಬಿಡಬೇಕು. ಸ್ವಾಮಿ ವಿವೇಕಾನಂದರ ‘ಏಳಿ ಎದ್ದೇಳಿ’ ಎಂಬ ಘೋಷವಾಕ್ಯಗಳನ್ನು ಒಮ್ಮೆ ನೆನಪಿಸಿಕೊಂಡರೆ ಮೈ ರೋಮಾಂಚನವಾಗುತ್ತದೆ. ಯುವ ಜನತೆಯನ್ನು ಹುರಿದುಂಬಿಸುವ ನುಡಿಮುತ್ತುಗಳಿವು. ಅವರ ಜೀವನ ಪಾಠವೇ ನಮಗೆ ಆದರ್ಶ. ಅಂತಹ ಮಹಾ ಪುರುಷರ ಜೀವನ ಗಾಥೆಯೇ ನಮಗೆ ಪಾಠವಾಗಿದೆ.
ಗಾಳಿ ಬಂದಾಗ ತೂರಿಕೋ ಎಂಬ ಗಾದೆಯ ಹಾಗೆ ಸಮಯ ಇರುವಾಗ ಆರೋಗ್ಯ ಚನ್ನಾಗಿರುವಾಗ ದೇಹ ಸಹಕರಿಸುವಾಗ ಎಲ್ಲವನ್ನೂ ಮಾಡಿ ಬಿಡಬೇಕು. ನಾಳೆ ಎಂದರೆ ಮನೆ ಹಾಳು ಎಂಬಂತೆ ನಾಳೆ ಎನ್ನುವ ಪದವನ್ನು ನಮ್ಮ ಜೀವನದ ಡಿಕ್ಷನರಿಯಿಂದ ಡಿಲೀಟ್ ಮಾಡಿಬಿಡಬೇಕು. ನಾಳೆ ಮಾಡುವುದನ್ನು ಇಂದು ಮಾಡು ಇಂದು ಮಾಡುವುದನ್ನು ಈಗಲೇ ಮಾಡು ಎಂಬ ನುಡಿಯಂತೆ ಯಾವುದೇ ಕೆಲಸವನ್ನು ಆಗಲಿ ಆ ಸಮಯಕ್ಕೆ ಮಾಡಿ ಮುಗಿಸಿ ಬಿಡಬೇಕು. ಇದರಿಂದ ಸಮಾಧಾನ ಆತ್ಮ ಸಂತೃಪ್ತಿ ಮನಸ್ಸಿನಲ್ಲಿ ನಿರಾಳತೆ ಇರುತ್ತದೆ. ಬದುಕಿನಲ್ಲಿ ಒಂದು ಪ್ರಶಾಂತತೆ ಆವರಿಸುತ್ತದೆ. ಸಮಯವನ್ನು ಸರಿಯಲು ಬಿಡದೆ ಅದರ ಸದುಪಯೋಗ ಪಡಿಸಿಕೊಂಡ ಆ ತೃಪ್ತಿ ಇದೆಯಲ್ಲಾ ಅದಕ್ಕೆ ಎಷ್ಟು ಬೆಲೆಯನ್ನು ಕಟ್ಟಲಾಗದು ಸರಿ ದೂಗಲಾಗದು.
ಜೀವನದಲ್ಲಿ ಎಲ್ಲಾ ಕಾರ್ಯಗಳು ಓದು ಮದುವೆ ಕೆಲಸ ಹೀಗೆ ಯಾವುದೇ ಆಗಲಿ ಆಯಾ ಸಮಯಕ್ಕೆ ನಡೆದರೆ ಅದಕ್ಕೆ ಒಂದು ಬೆಲೆ ಸಿಗುತ್ತದೆ. ಓದುವ ಸಮಯದಲ್ಲಿ ಎಷ್ಟು ಬೇಕೋ ಅಷ್ಟು ಓದಿ ಬಿಡಬೇಕು. ಮದುವೆಯಾದ ಮೇಲೆ ಓದುವ ಎಂದಾಗ ಗಂಡ, ಮನೆ ಮಕ್ಕಳು ಹೀಗೆ ಜವಾಬ್ದಾರಿಗಳು ಹೆಗಲೇರುತ್ತವೆ. ಇವೆಲ್ಲವನ್ನು ನಿಭಾಯಿಸಿಕೊಂಡು ಓದಿ ಡಿಗ್ರಿ ಪಡೆದವರು ತಮ್ಮ ಇಳಿ ವಯಸ್ಸಿನಲ್ಲಿ ಓದಿದವರು ಇದ್ದಾರೆ. ಆದರೆ ಅವರು ಬೆರಳೆಣಿಕೆಯಷ್ಟು ನಮಗೆ ಆದರ್ಶಪ್ರಾಯರು. ಮದುವೆ ಕೂಡಿ ಬಂದ ಸಮಯಕ್ಕೆ ಮದುವೆಯಾದರೆ ಮುಂದಿನ ಜೀವನ ಸುಗಮವಾಗುತ್ತದೆ. ಸುಖಾಸುಮ್ಮನೆ ಮುಂದೂಡಿದರ ವಯಸ್ಸು ಸರಿದ ಸಮಯ ಮತ್ತೆ ಮರುಕಳಿಸಿ ಬರಲಾರದು. ಇದು ಒಂದೆರಡು ಉದಾಹರಣೆಗಳು ಅಷ್ಟೇ.
ಆದುದರಿಂದ ಸಮಯ ಸರಿಯುತಿದೆ ನಮಗಿಂತ ಮುಂದೆ ಓಡುತ್ತಿದೆ ಅದನ್ನು ಮೀರಿ ನಡೆಯದಿದ್ದರೂ ಅದರ ಜೊತೆಜೊತೆಗೆ ಹೆಜ್ಜೆ ಹಾಕುತ ಸಮಯವನ್ನು ಸತ್ಕಾರ್ಯಗಳಿಗೆ ಉಪಯೋಗಿಸುತ್ತಾ ದೇವರು ಕೊಟ್ಟ ಈ ನಾಲ್ಕು ದಿನದ ಬದುಕನ್ನು ಸಾರ್ಥಕಗೊಳಿಸಿ ದೇಹ ಸತ್ತರೂ ಹೆಸರು ಜೀವಂತವಾಗಿರುವಂತೆ ಮಾಡಲಾಗುವುದು ಕೇವಲ ಸಮಯವನ್ನು ದೇವರಂತೆ ನೆನೆದು ಪೂಜಿಸಿ ಗೌರವಿಸಿದಾಗ ಮಾತ್ರ. ಆದುದರಿಂದ ಕಾಲವನ್ನು ಗೌರವಿಸೋಣ, ಪ್ರೀತಿಸೋಣ, ಕರ್ತವ್ಯ ಪರರಾಗಿ ಪ್ರಬುದ್ಧತೆಯ ಹರಿಕಾರರಾಗಿ ನಡೆದುಕೊಂಡರೆ ಕಾಲವೇ ನಮಗೆ ಜೀವನದ ಪಾಠವನ್ನು, ಬದುಕುವ ರೀತಿಯನ್ನು ಕಲಿಸಿ ಧೈರ್ಯ ತುಂಬುತ್ತದೆ.
ಜೀವನದಲ್ಲಿ ಬಂದಿದ್ದು ಬರಲಿ ಗೋವಿಂದನ ದಯೆ ಇರಲಿ ಎನ್ನುತ್ತಾ ಕಷ್ಟಗಳನ್ನು ನೀಡಬೇಡ ಎನ್ನುವುದಿಲ್ಲ ಭಗವಂತ ಕಷ್ಟಗಳನ್ನು ಎದುರಿಸುವ ಶಕ್ತಿ ನೀಡು ನಮಗೆ ಧನ ಧಾನ್ಯ ಕನಕ ಮಣಿ ನೀಡೆಂದು ಬೇಡುವುದಿಲ್ಲ ನಿನ್ನ ಕೃಪಾ ಕಟಾಕ್ಷ ನಮ್ಮ ಮೇಲೆ ಸದಾ ಇರಲಿ ಕಾಲದ ಜೊತೆ ಜೊತೆಗೆ ಈ ಸಂಸಾರವೆಂಬ ಭವ ಬಂಧನದಲ್ಲಿ ಸಿಲುಕಿದ ನಮಗೆ ಎಷ್ಟೇ ಏರಿಳಿತಗಳು ಇದ್ದರೂ ಸುಖ ದುಖಗಳಿದ್ದರೂ ನಿನ್ನ ನಾಮ ಸ್ಮರಣೆಯಿಂದ ಕಾಲದ ಜೊತೆ ಹೆಜ್ಜೆ ಹಾಕುತ್ತಾ ಎಲ್ಲವನ್ನೂ ಮರೆತು ಮುಂದೆ ಸಾಗುವ ಪ್ರಶಾಂತವಾದ ಮನಸ್ಸು ನೀಡು ತಂದೆ ಎನ್ನುತ್ತಾ, ಕಾಲಾಯ ತಸ್ಮೈ ನಮಃ
