ಜುಲೈ 07 ರಿಂದ ಕೆಲಸ ನಿರ್ವಹಿಸದೇ ಅಸಹಕಾರ ಚಳುವಳಿ ನಡೆಸಲು ನಿರ್ಧಾರ | ಜಿಲ್ಲಾಧ್ಯಕ್ಷ ಪೃಥ್ವಿರಾಜ ಪಾಟೀಲ ಎಚ್ಚರಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಜಿಲ್ಲಾ ಪಂಚಾಯತಿ ಕಾರ್ಯಾಲಯದಲ್ಲಿ ಮಹಾತ್ಮ ಗಾಂದಿ ನರೇಗಾ ಯೋಜನೆಯಡಿ ವಿವಿಧ ಹಂತಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕಳೆದ 06 ತಿಂಗಳಿಂದ ವೇತನ ಪಾವತಿಸದೇ ಇರುವುದರಿಂದ ಶೀಘ್ರವೇ ವೇತನ ಪಾವತಿಯಾಗುವಂತೆ ಕ್ರಮ ಕೈಗೊಳ್ಳುವಂತೆ ವಿನಂತಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಹಾಗೂ ಉಪ ಕಾರ್ಯದರ್ಶಿ ಡಾ. ವಿಜಯಕುಮಾರ ಆಜೂರ ಅವರಿಗೆ ನರೇಗಾ ಸಿಬ್ಬಂದಿ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಮಹಾತ್ಮ ಗಾಂಧಿ ನರೇಗಾ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಪೃಥ್ವಿರಾಜ ಪಾಟೀಲ ಮಾತನಾಡಿ, “ಕಳೆದ ಜನೇವರಿ-2025 ರಿಂದ ವಿಜಯಪುರ ಜಿಲ್ಲೆ ಸೇರಿದಂತೆ ರಾಜ್ಯವ್ಯಾಪ್ತಿ ಕೆಲಸ ಮಾಡುವ ನರೇಗಾ ಸಿಬ್ಬಂದಿಗಳಿಗೆ ವೇತನ ಪಾವತಿಯಾಗಿರುವದಿಲ್ಲ, ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಾವು ಜಿಲ್ಲಾ ಪಂಚಾಯತ್ ಮತ್ತು ತಾಲೂಕ ಪಂಚಾಯತ್ ಮಟ್ಟದಲ್ಲಿ ವಿವಿಧ ಸ್ಥರಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಾ, ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ಭಾಗಿಯಾಗಿದ್ದೇವೆ. ಕರ್ನಾಟಕ ಜಿಲ್ಲಾದ್ಯಂತ 145 ನೌಕರರು ನರೇಗಾ ಯೋಜನೆಯಡಿ ವಿವಿಧ ಹುದ್ದೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಕಳೆದ ಜನವರಿಯಿಂದ ಇಲ್ಲಿಯವರೆಗೆ ವೇತನ ಪಾವತಿಯಾಗಿರುವುದಿಲ್ಲ. ಇದರಿಂದ ಎಲ್ಲಾ ನೌಕರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುತ್ತಾರೆ. ವೇತನ ಪಾವತಿಗಾಗಿ ವಿನಂತಿಸಿ ಹಲವಾರು ಬಾರಿ ಮೌಖಿಕವಾಗಿ ಹಾಗೂ ಲಿಖಿತವಾಗಿ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ರೀತಿಯ ಪ್ರಯೋಜನವಾಗಿರುವುದಿಲ್ಲ. ಈ ನಿಟ್ಟಿನಲ್ಲಿ ಶೀಘ್ರವಾಗಿ ವೇತನಕ್ಕಾಗಿ ಜು.07 ರಿಂದ ಕೆಲಸ ನಿರ್ವಹಿಸದೇ ಅಸಹಕಾರ ಚಳುವಳಿ ಆರಂಭಿಸಲು ರಾಜ್ಯ ಸಮಿತಿ ನಿರ್ಧರಿಸಿದೆ. ಆ ನಿಟ್ಟಿನಲ್ಲಿ ನಮ್ಮ ಜಿಲ್ಲೆಯಲ್ಲಿಯೂ ಸಹ ಅಸಹಕಾರ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ. ಇದರಿಂದಾಗಿ ಅಧಿಕಾರಿಗಳಿಗೆ, ಮನರೇಗಾ ಕೂಲಿಕಾರರಿಗೆ, ಸದಸ್ಯರುಗಳಿಗೆ, ಗ್ರಾಮಸ್ಥರಿಗೆ ಸ್ವಲ್ಪ ತೊಂದರೆಯಾಗಬಹುದು, ಆದರೂ ಅನಿವಾರ್ಯವಾಗಿರುವದರಿಂದ ಎಲ್ಲರು ನಮ್ಮ ಚಳುವಳಿಗೆ ಸಹಕಾರ ನೀಡಲು ಕೋರಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಸಾಹಿಲ್ ಧನಶೆಟ್ಟಿ, ಜಿಲ್ಲಾ ಉಪಾದ್ಯಕ್ಷರಾದ ಕಲ್ಲಪ್ಪ ನಂದರಗಿ, ಪ್ರವೀಣ ಭಾವಿಕಟ್ಟಿ, ಸಂಘಟನಾ ಕಾರ್ಯದರ್ಶಿಗಳಾದ ಪರಶುರಾಮ ಶಹಾಪುರ, ವಿಶ್ವನಾಥ ಪಟ್ಟಣಶೆಟ್ಟಿ, ಅಮೃತಾ ನೀಲಜಗಿ, ಜಿಲ್ಲಾ ಪಂಚಾಯತಿಯ ಸುವರ್ಣಾ ಭಜಂತ್ರಿ, ಶಿಲ್ಪಾ ಗುತ್ತೇಧಾರ, ಅಮೃತಾ ಕಿಟ್ಟದ ಸೇರಿದಂತೆ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮನರೇಗಾ ಸಿಬ್ಬಂದಿ ಹಾಜರಿದ್ದರು.

