ಲೇಖನ
– ಶಿವಪ್ರಿಯೆ
ಪ್ರಿಯಾ ಎಸ್ ದೇಗಾವಿಮಠ್
“ನಮ್ಮ ಕಥಾ ಅರಮನೆ”
ಬರಹಗಾರರು
ಉದಯರಶ್ಮಿ ದಿನಪತ್ರಿಕೆ
ವೈದ್ಯ ಕಣ್ಣಿಗೆ ಕಾಣುವ ದೇವರು ಮರುಜನ್ಮ ಕರುಣಿಸುವ ಕೃಪಾಳು. ಮನುಷ್ಯನ ಜನ್ಮಕ್ಕೆ ಭಗವಂತ ಕಾರಣನಾದ್ರೆ ಆರೋಗ್ಯಯುತ ಜೀವನ ಸಡೆಸಲು ವೈದ್ಯ ಕಾರಣನಾಗುತ್ತಾನೆ.
5000 ವರ್ಷಗಳ ಹಿಂದೆ ಪ್ರಪಂಚಕ್ಕೆ ಅತ್ಯಮೂಲ್ಯ ಆಯುರ್ವೇದದ ಚಿಕಿತ್ಸೆ ಕೊಡುಗೆ ಕೊಟ್ಟದ್ದು ನಮ್ಮ ಪೂರ್ವಜರು, ಜಗತ್ತಿನ ಮೊದಲ ಶಸ್ತ್ರ ಚಿಕಿತ್ಸಕ ವೈದ್ಯ ಸುಶ್ರುತ ನಮ್ಮ ಭಾರತದ ಕಾಶಿ ನಗರದವರು. ಅವರಿಗೆ “ಶಸ್ತ್ರ ಚಿಕಿತ್ಸಾ ಪಿತಾಮಹ” ಎಂದು ಕರೆಯುತ್ತಾರೆ. ತಾವೇ ತಯಾರಿಸಿದ ಉಪಕರಣಗಳ ಬಳಸಿ ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದವರು ಸುಶ್ರುತ. ಯಾವುದೇ ಸ್ಕ್ಯಾನಿಂಗ್ ಮೆಷಿನ್ ಇಲ್ಲದೆ ಎಕ್ಸರೇ ನೋಡದೆ ಬರೀ ನಾಡಿ ಮಿಡಿತ ಗಮನಿಸಿ ರೋಗಿಯ ಸಮಸ್ಯೆ ಅದರ ಆಳ ತಿಳಿಯುತ್ತಿದ್ದ ಅಪ್ರತಿಮ ಬುದ್ಧಿಶಕ್ತಿ ಹೊಂದಿದ ವೈದ್ಯರವರು. ಆಗಿನ ಕಾಲದಲ್ಲೇ ಉಸಿರಾಟದ ಸಮಸ್ಯೆಗೆ, ಸೀಳು ತುಟಿ, ಎಲುಬು ಜೋಡಣೆ, ಚರ್ಮ ಬದಲಾವಣೆಯ ಶಸ್ತ್ರ ಚಿಕಿತ್ಸೆ ಮಾಡಿದವರು.
ಕೆಲವು ದಿನಗಳ ಹಿಂದೆ ನನ್ನ ಕುಟುಂಬದ ಜೊತೆ “ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶೌರ್ಯ ಭೂಮಿ” ಎಂಬ ಪ್ರವಾಸಿ ತಾಣಕ್ಕೆ ಹೋದಾಗ ಅಲ್ಲಿ ಸಂಗೊಳ್ಳಿ ರಾಯಣ್ಣ ಅವರ ಅಜ್ಜ ರೋಗಪ್ಪ ಅವರ ಬಗ್ಗೆ ಓದಿದೆ ಪ್ರತಿಮೆಗಳ ಮುಖಾಂತರ ಆಗಿನ ವೈದ್ಯ ಪದ್ಧತಿ ನೋಡಿದೆ. ನಾರು ಬೇರು ಸೊಪ್ಪುಗಳ ಮೂಲಕ ಅದ್ಯಾವುದೇ ಜಟಿಲ ರೋಗವಾದರು ಕೆಲವೇ ದಿನಗಳಲ್ಲಿ ವಾಸಿ ಮಾಡುತ್ತಿದ್ದರು. ಪಥ್ಯ ಮಡಿಮದ್ದು ಮಾಡಿ ರೋಗಿಗಳ ಸಮಸ್ಯೆಗೆ ಪರಿಹಾರ ನೀಡುತ್ತಿದ್ದರು.

ನನ್ನ ಸ್ವ-ಅನುಭವ ಹೇಳಬೇಕು ಎಂದರೆ ಕೊರೊನ ಸಮಯದಲ್ಲಿ ನನ್ನ ಕೈ ಮೂಳೆ ಮುರಿದಾಗ ಯಾವುದೇ ಆಸ್ಪತ್ರೆ ಇರಲಿಲ್ಲ. ನನ್ನ ಪಾಲಿಗೆ ದೈವವಾಗಿ ಬಂದದ್ದು ನಮ್ಮ ಊರ ಪಕ್ಕದ ಪುಟ್ಟ ಹಳ್ಳಿ ಮದ್ನಳ್ಳಿಯ ಅನಕ್ಷರಸ್ಥ ಆಯುರ್ವೇದ ವೈದ್ಯರು. ನನ್ನ ಕೈಗೆ ಕಟ್ಟಿಗೆ ಕಟ್ಟಿ 2 ತಿಂಗಳು ಊಟದಲ್ಲಿ ಪಥ್ಯ ಹೇಳಿ ತಾವೇ ತಯಾರಿಸಿದ ಕೆಲವು ಮಾತ್ರೆಗಳಿಂದ ಮೂಳೆ ಮರು ಜೋಡಣೆ ಮಾಡಿದರು. ಆ ಸಮಯದಲ್ಲಿ ವೈದ್ಯೋ ನಾರಾಯಣೋ ಹರಿಃ ಎಂಬ ಪದದ ನಿಜ ಅರ್ಥ ತಿಳಿದೆ.
ಇನ್ನು ಹೆಣ್ಣುಮಕ್ಕಳ ಹೆರಿಗೆ ವಿಷಯದಲ್ಲೂ ಅಷ್ಟೇ..! ಪ್ರಸವ ಆಗುವವರೆಗೂ ಹೊಟ್ಟೆಯಲ್ಲಿ 1 ಮಗು ಇದೆಯೊ 2 ಇದೆಯೊ ಹೆಣ್ಣೊ ಗಂಡೊ ಏನೂ ತಿಳಿಯುತ್ತಿರಲಿಲ್ಲ. ಮನೆಯಲ್ಲೇ ನಾಲ್ಕೈದು ಜನ ಹೆಣ್ಣುಮಕ್ಕಳು ಹಿರಿಯ ಅಜ್ಜಿ ಜೊತೆ ಸೇರಿ ಪ್ರಸವ ಮಾಡಿಸುತ್ತಿದ್ದರು. ಹಾಗಾಗೇ ಹೆಚ್ಚಿನ ಮಕ್ಕಳು ಹುಟ್ಟಿ ತುಂಬು ಕುಟುಂಬ ಬಂಧು ಬಳಗದ ಪ್ರೀತಿ ಪ್ರೇಮ ತ್ಯಾಗದ ಅರಿವು ಇರುತ್ತಿತ್ತು. ಹಿರಿಯರ ಮೇಲೆ ಗೌರವ ಕಿರಿಯರ ಮೇಲೆ ಕಾಳಜಿ ಕೂಡು ಕುಟುಂಬದ ಶಕ್ತಿ ಇರುತ್ತಿತ್ತು.
ಆದರೆ ದಿನಕಳೆದಂತೆ ಊಟದಲ್ಲಿ ಜೀವನ ಶೈಲಿಯಲ್ಲಾದ ಬದಲಾವಣೆಯಿಂದ ಕೆಲವು ಮಾರಣಾಂತಿಕ ರೋಗಗಳಿಗೆ (ಕ್ಯಾನ್ಸರ್ , hiv) ಗುಣಮುಖ ಮಾಡಲು ಯಾವುದೇ ಚಿಕಿತ್ಸೆ ಇರಲಿಲ್ಲ.
ಕೆಲವು ದಿನಗಳ ಹಿಂದೆ ಕ್ಯಾನ್ಸರ್ ಬಂದು ಸಂಪೂರ್ಣ ಗುಣಮುಖರಾದ ನನ್ನ ಸಂಬಂಧಿ ಒಬ್ಬರನ್ನು ನೋಡಿದಾಗ ನನ್ನ ಸ್ಮೃತಿಗೆ ಬಂದ ಮೊದಲ ವಿಷಯ ಇದೇ ಚಿಕಿತ್ಸೆ 25 ವರ್ಷಗಳ ಹಿಂದೆ ಬಂದಿದ್ದರೆ ನನ್ನ ತಂದೆ ಪ್ರೀತಿಯಿಂದ ನಾನು ವಂಚಿತಳಾಗುತ್ತಿರಲಿಲ್ಲ. ನನ್ನ ತಂದೆ ಎಲುಬು ಕ್ಯಾನ್ಸರ್ ನಿಂದಾ ತೀರಿ ಹೋದರು. ನನಗೆ ಆಗ ಬರೀ 10 ವರ್ಷ ಆದರೂ ಈಗಲೂ ನೆನಪಿದೆ ಕೊನೆ ಸಮಯದಲ್ಲಿ ಮೈಯಲ್ಲಿ ಆಗುತ್ತಿದ್ದ ನೋವು ಸಹಿಸಲು ಆಗದೆ ಅವರು ಇಸ್ತ್ರೀ ಕಾಯಿಸಿ ಮೈಗೆ ಹಚ್ಚಿ ಕೊಳ್ಳುತ್ತಿದ್ದರು. ಅಬ್ಬಾ ಆ ದಿನಗಳನ್ನು ನೆನೆದರೆ ಈಗಲೂ ಮೈ ಜುಂ ಅನ್ನಿಸುತ್ತದೆ.
ಈಗ ಕಾಲ ತುಂಬ ಬದಲಾಗಿದೆ. ಅದೆಂತದ್ದೆ ಕೆಟ್ಟ ರೋಗವಿದ್ದರೂ ವೈದ್ಯಕೀಯ ವಿಜ್ಞಾನದಲ್ಲಿ ಅದಕ್ಕೆ ಚಿಕಿತ್ಸೆ ಇದೆ. ಎಷ್ಟೋ ಜನ ಕ್ಯಾನ್ಸರ್ , hiv, ಹೃದಯ ರೋಗದಿಂದ ಸಂಪೂರ್ಣ ಗುಣಮುಖರಾಗಿದ್ದಾರೆ.
ಹತ್ತು ಹಲವಾರು ವೈದ್ಯಕೀಯ ಉಪಕರಣಗಳ ಆವಿಷ್ಕಾರ ಮೂಲಕ ಮನುಷ್ಯನ ದೇಹದ ಒಳ ಹೊಕ್ಕು ಸಮಸ್ಯೆ ಅರಿಯುವಷ್ಟು ವಿಜ್ಞಾನ ತಂತ್ರಜ್ಞಾನ ಮುಂದುವರೆದಿದೆ.
ಹೊಟ್ಟೆಯಲ್ಲಿ ಇರುವ ಮಗುವಿನ ಸಮಸ್ಯೆ ಮೊದಲೇ ತಿಳಿದು ಚಿಕಿತ್ಸೆ ಕೊಡುವಷ್ಟು ಬದಲಾವಣೆ ಆಗಿದೆ.
ಆಗಿನ ಕಾಲದ ವೈದ್ಯಕೀಯ ಪದ್ಧತಿ ಒಂದು ರೀತಿಯಲ್ಲಿ ವಿಜ್ರಂಭಿಸಿದರೆ ಈಗಿನ ಕಾಲದ ವೈದ್ಯಕೀಯ ಪದ್ಧತಿ ಮತ್ತೊಂದು ರೀತಿಯಲ್ಲಿ ಸಂಭ್ರಮಿಸುವಂತೆ ಮಾಡುತ್ತಿದೆ.
ಕಾಲಾಯ ತಸ್ಮೈನಮಃ ಕಾಲ ಬದಲಾದಂತೆ ನಾವು ಬದಲಾಗಬೇಕು. ಆಗ ಬೇರು, ಕಷಾಯ, ಪಥ್ಯ ಮಾಡುತ್ತಿದ್ದವರು ಈಗ ಸ್ಕ್ಯಾನಿಂಗ್ ಅಲ್ಟ್ರಾ ಸೌಂಡ್ ಇಸಿಜಿ ಮಾಡಿಸಿ ಹತ್ತಾರು ಮಾತ್ರೆ ನುಂಗಿ ಗುಣಮುಖರಾಗಬೇಕು.
