ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಚದುರಿ ಹೋಗಿದ್ದ ಶರಣರ ವಚನಗಳ ಕಟ್ಟುಗಳನ್ನು ಹುಡುಕಿ, ಮುದ್ರಿಸಿ, ಪ್ರಚಾರ ಮಾಡಿ ಶರಣ ಸಾಹಿತ್ಯವನ್ನು ನಾಡಿನಲ್ಲಿ ಬೆಳಕಿಗೆ ತಂದು ನಮಗೆ ಇಂತಹ ಅಮೂಲ್ಯ ಸಾಹಿತ್ಯವನ್ನು ನೀಡಿದ ಕೀರ್ತಿ ವಚನ ಪಿತಾಮಹ ಫ.ಗು.ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಹೇಳಿದರು.
ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ತಾಲೂಕಾಡಳಿತದಿಂದ ಬುಧವಾರ ಹಮ್ಮಿಕೊಂಡಿದ್ದ ವಚನ ಪಿತಾಮಹ ಫ.ಗು.ಹಳಕಟ್ಟಿ ಅವರ ಜಯಂತ್ಯೋತ್ಸವ ಹಾಗೂ ವಚನ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಫ.ಗು.ಹಳಕಟ್ಟಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದ ನಂತರ ಮಾತನಾಡಿದ ಅವರು, ವಚನಗಳ ಕಟ್ಟುಗಳಲ್ಲಿರುವ ವಚನಗಳನ್ನು ಪರಿಷ್ಕರಣೆ ಮಾಡಿ ಶರಣರ ವಚನಗಳನ್ನು ಮುದ್ರಿಸಿ ನಾಡಿನ ಜನರಿಗೆ ತಲುಪಿಸಿದರು. ಸುಮಾರು ೨೫೦ ವಚನಕಾರರನ್ನು ನಾಡಿಗೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯ ಅನುಪಮವಾಗಿದೆ. ಇವರು ವಚನ ಸಾಹಿತ್ಯವನ್ನು ಸಂರಕ್ಷಿಸಿ ನಾಡಿಗೆ ನೀಡಿದ ಹಿನ್ನೆಲೆಯಲ್ಲಿ ಬಿಎಂಶ್ರೀ ಅವರ ಇವರನ್ನು ವಚನ ಗುಮ್ಮಟ ಎಂದು ಕರೆದು ಗೌರವ ಸಲ್ಲಿಸಿದ್ದು ಸದಾ ಸ್ಮರಣೀಯವಾಗಿದೆ ಎಂದರು.
ನಿವೃತ್ತ ಶಿಕ್ಷಕ ಎಂ.ಜಿ.ಆದಿಗೊಂಡ ಮಾತನಾಡಿ, ಹಿಂದುಳಿದ ವಿಜಯಪುರ ಜಿಲ್ಲೆಗೆ ಧಾರವಾಡದಿಂದ ಆಗಮಿಸಿದ್ದ ಫ.ಗು.ಹಳಕಟ್ಟಿ ಅವರು ಜಿಲ್ಲೆಯಲ್ಲಿ ಶೈಕ್ಷಣಿಕ, ಆರ್ಥಿಕ, ಧಾರ್ಮಿಕ ಸಂಸ್ಥೆಗಳನ್ನು ಸ್ಥಾಪಿಸಿ ಆಧುನಿಕ ವಿಜಯಪುರ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ಜಿಲ್ಲೆಗೆ ಇವರ ಕೊಡುಗೆ ಅಪಾರವಾಗಿದೆ. ಜಿಲ್ಲೆಯಲ್ಲಿ ಬಿಎಲ್ಡಿಇ ಸಂಸ್ಥೆಯನ್ನು ಆರಂಭಿಸುವಲ್ಲಿ ಬಂಥನಾಳದ ಸಂಗನಬಸವ ಸ್ವಾಮೀಜಿಯವರಿಗೆ ತುಂಬಾ ಸಹಕಾರ ನೀಡಿದರು. ಇವರು ವಿಜ್ಞಾನ ವಿದ್ಯಾರ್ಥಿಯಾಗಿದ್ದರೂ ಸಹ ವಚನ ಸಾಹಿತ್ಯದ ಬಗ್ಗೆ ಅಪಾರ ಒಲವು ತೋರಿಸಿ ವಚನಗಳನ್ನು ಸಂಗ್ರಹಿಸಿ ಅವುಗಳನ್ನು ಪ್ರಕಟಿಸಿ ನಮಗೆ ನೀಡಿರುವದು ತುಂಬಾ ಮಹತ್ವದ ಕಾರ್ಯವಾಗಿದೆ. ಅವರು ವಚನ ಸಾಹಿತ್ಯವನ್ನು ತಮ್ಮ ಜೀವನದ ಉಸಿರಾಗಿಸಿಕೊಂಡು ಬದುಕಿದ ಮಹಾಪುರುಷರಾಗಿದ್ದಾರೆ ಎಂದರು.
ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ, ನಿವೃತ್ತ ಉಪನ್ಯಾಸಕ ಕೆ.ಬಿ.ಕಡೇಮನಿ ಮಾತನಾಡಿ, ಫ.ಗು.ಹಳಕಟ್ಟಿ ಅವರು ವಚನ ಸಾಹಿತ್ಯ ಕ್ಷೇತ್ರವಲ್ಲದೇ ಸಹಕಾರ, ನೀರಾವರಿ ಕ್ಷೇತ್ರಕ್ಕೂ ಕೊಡುಗೆ ನೀಡಿದ್ದಾರೆ. ಇವರು ವಚನ ಸಾಹಿತ್ಯವನ್ನು ಸಂರಕ್ಷಣೆ ಮಾಡದೇ ಹೋಗಿದ್ದರೆ ಇಂದು ಯಾವ ಮಠಾಽಶರು, ಜನರು ವಚನಗಳನ್ನು ಹೇಳುತ್ತಿರಲಿಲ್ಲ. ಇಂತಹ ಅಮೂಲ್ಯ ವಚನಗಳನ್ನು ಸಂರಕ್ಷಿಸಿ ನಾಡಿಗೆ ನೀಡಿದ ಇವರನ್ನು ಎಲ್ಲರೂ ಸದಾ ಸ್ಮರಣೆ ಮಾಡಿ ವಚನ ಸಾಹಿತ್ಯದಲ್ಲಿರುವ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸುಂದರ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಭೂ ಮಾಪನ ಇಲಾಖೆಯ ಸಹಾಯಕ ನಿರ್ದೇಶಕ ವೈ.ಎಸ್.ವಗ್ಗನ್ನವರ, ಶಿರಸ್ತೇದಾರ ಬಿ.ಆರ್.ಪೋಲೇಶಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ, ಮುಖಂಡರಾದ ರವಿಗೌಡ ಚಿಕ್ಕೊಂಡ, ಸುರೇಶಗೌಡ ಪಾಟೀಲ, ಸಮಾಜ ಕಲ್ಯಾಣ ಇಲಾಖೆಯ ಜಿ.ಐ.ಬೆಕಿನಾಳ, ತಹಸೀಲ್ದಾರ ಕಚೇರಿ ಸಿಬ್ಬಂದಿಗಳಾದ ವಿಲಾಸ ಜಾಡರ, ಆರತಿ ತೆನಹಳ್ಳಿ, ಸಿದ್ದು ಶಿರಶ್ಯಾಡ, ಪ್ರವೀಣ ಲಮಾಣಿ, ಪ್ರಸನ್ನ ಕರಿಜಾಡರ, ರಾಮಚಂದ್ರ ಘಾಟಗೆ, ಸುಧಾ ಪಟ್ಟಣದ ಇತರರು ಇದ್ದರು. ಶ್ರೀಶೈಲ ಶಿರಗುಪ್ಪಿ ಸ್ವಾಗತಿಸಿದರು. ಮಹಾಂತೇಶ ಸಂಗಮ ನಿರೂಪಿಸಿದರು. ಎಸ್.ಕೆ.ಸೋಮನಕಟ್ಟಿ ವಂದಿಸಿದರು.

