ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ವಚನ ಸಾಹಿತ್ಯದ ಸಂರಕ್ಷಣೆ ಮತ್ತು ಪ್ರಸಾರದಲ್ಲಿ ಡಾ.ಹಳಕಟ್ಟಿ ಅವರ ಪಾತ್ರ ಅನನ್ಯವಾದುದು. ಅವರು ತಮ್ಮ ಜೀವನವನ್ನೇ ಈ ಮಹತ್ಕಾರ್ಯಕ್ಕೆ ಮುಡಿಪಾಗಿಟ್ಟರು. ನಶಿಸಿಹೋಗುತ್ತಿದ್ದ ವಚನಗಳನ್ನು ಸಂಗ್ರಹಿಸಿ, ಸಂಪಾದಿಸಿ, ಪ್ರಕಟಿಸುವ ಮೂಲಕ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಅಳಿಸಲಾಗದ ಕೊಡುಗೆ ನೀಡಿದ್ದಾರೆ ಎಂದು ಕಾಯಾಧ್ಯಕ್ಷ ಸುಧಾಕರ ಚವ್ಹಾಣ ಹೇಳಿದರು.
ಸಿಂದಗಿ ಪಟ್ಟಣದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಎಕ್ಯೂಐಸಿ ಮತ್ತು ಕನ್ನಡ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರ ೧೪೫ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಚನ ಪಿತಾಮಹ ಡಾ.ಪ.ಗು. ಹಳಕಟ್ಟಿಯವರು ಒಬ್ಬ ಶ್ರೇಷ್ಠ ಸಾಮಾಜಿಕ ಸಂತ. ವಚನ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಅನನ್ಯ. ವಚನಗಳ ಮಹತ್ವವನ್ನು ಇಂದಿನ ಯುವ ಪೀಳಿಗೆಗೆ ತಲುಪಿಸುವ ಅಗತ್ಯವಿದೆ ಎಂದರು.
ಈ ವೇಳೆ ಐಕ್ಯೂಎಸಿ ಮುಖ್ಯಸ್ಥ ಪ್ರಶಾಂತ ಕುಲಕರ್ಣಿ, ಉಪನ್ಯಾಸಕ ದಾನಯ್ಯ ಮಠಪತಿ ಮಾತನಾಡಿ, ಡಾ.ಹಳಕಟ್ಟಿ ಅವರು ಕೇವಲ ಒಬ್ಬ ಸಂಶೋಧಕರಾಗಿರಲಿಲ್ಲ. ಬದಲಿಗೆ ವಚನ ಚಳುವಳಿಯ ಪುನರುಜ್ಜೀವನಕ್ಕೆ ಕಾರಣರಾದವರು. ಅವರ ಶ್ರಮವಿಲ್ಲದಿದ್ದರೆ, ಬಸವಣ್ಣನವರಂತಹ ಮಹಾನ್ ಶರಣರ ವಚನಗಳು ಇಂದಿಗೂ ನಮಗೆ ಲಭ್ಯವಾಗುತ್ತಿರಲಿಲ್ಲ. ಅವರು ವಚನಗಳನ್ನು ಜನಸಾಮಾನ್ಯರಿಗೆ ತಲುಪಿಸಿ, ಸಾಮಾಜಿಕ ಸಮಾನತೆಯ ಸಂದೇಶವನ್ನು ಪುನರುಚ್ಚರಿಸಿದರು. ಇಂತಹ ಮಹಾನ್ ವ್ಯಕ್ತಿಗಳ ಕುರಿತು ಅಧ್ಯಯನ ಮಾಡುವುದು ನಮ್ಮ ವಿದ್ಯಾರ್ಥಿಗಳಲ್ಲಿ ಜ್ಞಾನದಾಹವನ್ನು ಹೆಚ್ಚಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಭಾಗ್ಯ ಜ್ಯೋತಿ ದಸ್ಮಾ, ನಾಜಿಯಾ ಮುಲ್ಲಾ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರಶಿಕ್ಷಣಾರ್ಥಿ ಪುಂಡಲಿಕ್ ಪೂಜಾರಿ ನಿರೂಪಿಸಿದರು, ಸುಪ್ರೀತಾ ಡೋಣೂರ ಸ್ವಾಗತ ಮಾಡಿದರು.

