Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ

ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ

ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಸವಾಲುಗಳಿಗೆ ಸವಾಲು ಎಸೆಯದಿದ್ದರೆ..?
ವಿಶೇಷ ಲೇಖನ

ಸವಾಲುಗಳಿಗೆ ಸವಾಲು ಎಸೆಯದಿದ್ದರೆ..?

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಜಯಶ್ರೀ .ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨

ಉದಯರಶ್ಮಿ ದಿನಪತ್ರಿಕೆ

ಜೀವನವು ಸರಳ ರೇಖೆಯಲ್ಲ. ಅದು ಏರಿಳಿತಗಳಿಂದ ತುಂಬಿದೆ. ಬದುಕಿನ ಎಲ್ಲ ದಿನಗಳೂ ಒಂದೇ ತರನಾಗಿರುವುದಿಲ್ಲ. ಒಂದು ದಿನ ನಾನು ಎಲ್ಲವನ್ನೂ ಅರ್ಥಮಾಡಿಕೊಂಡಿದ್ದೇನೆ ಎಂದು ಅನಿಸಬಹುದು. ನಂತರ ಒಂದೇ ಕ್ಷಣದಲ್ಲಿ ನನಗೇನೂ ಗೊತ್ತಿಲ್ಲ. ನಾನಿನ್ನೂ ಬಹಳಷ್ಟು ತಿಳಿದುಕೊಳ್ಳುವುದು ಬಾಕಿ ಇದೆ ಎಂದೆನಿಸುವುದು. ಪ್ರತಿದಿನ ಬೇರೆ ಬೇರೆ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸವಾಲುಗಳನ್ನು ದಾರಿ ನಡುವೆ ಇರುವ ದೊಡ್ಡ ಕಲ್ಲುಗಳೆಂದು ತಿಳಿಯುತ್ತೇವೆ. ಎಷ್ಟೋ ಸಲ ಅವುಗಳನ್ನು ಮಗ್ಗಲು ಮುಳ್ಳುಗಳೆಂದು ಭಾವಿಸಿ ಕಷ್ಟ ಪಡುತ್ತೇವೆ. ಆದರೆ ಅಸಲಿಯಾಗಿ ಅವುಗಳು ನಮ್ಮ ಬದುಕನ್ನು ಬೆಳಗಿಸುವ ದೀಪಗಳು. ಏಕೆಂದರೆ ಅವು ನಮ್ಮಲ್ಲಿ ಹುದುಗಿರುವ ಸೃಜನಶೀಲ ಮೇದಾವಿತನವನ್ನು ಹೊರಗೆಡುವುತ್ತವೆ. ಆದರೆ ನಾವು ಸವಾಲುಗಳ ಕರೆಗೆ ಓಗೊಡುವುದಿಲ್ಲ. ಅದಕ್ಕೆ ಕಾರಣ ಇಲ್ಲದಿಲ್ಲ. ನಮ್ಮಲ್ಲಿ ಬಹಳಷ್ಟು ಜನರು ಬದಲಾವಣೆ ಬಯಸುವುದಿಲ್ಲ. ಅಸಾಮಾನ್ಯರಾಗಲು ಹಿಂಜರಿಯುತ್ತಾರೆ. ಕೇವಲ ಕೆಲವರು ಮಾತ್ರ ಸಾಧಕರಾಗುತ್ತಿದ್ದಾರೆ. ಅವರು ಮಾತ್ರ ಸವಾಲುಗಳ ಬೇಲಿಯನ್ನು ದಾಟಲು ಮನಸ್ಸು ಮಾಡುತ್ತಾರೆ. ಉಳಿದವರೆಲ್ಲ ಸವಾಲೆಂಬ ಬೇಲಿಗಳಿಗೆ ಮನಸ್ಸನಲ್ಲಿ ಬೇಲಿ ಹಾಕಿದ್ದಾರೆ.
ಪ್ರತಿಯೊಬ್ಬರಿಗೂ ಹುಲ್ಲು ಹಾಸಿನ ಮೇಲೆ ಮೆಲ್ಲಗೆ ನಡೆಯುವಾಸೆ. ಆದರೆ ಸವಾಲೆಂಬ ಬೇಲಿಗಳನ್ನು ದಾಟಿ ಹೋಗಲಾರದೆ ಮನದಲ್ಲಿ ನೊಂದುಕೊಳ್ಳುತ್ತಾರೆ. ಇನ್ನೂ ಕೆಲವರು ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಾರೆ. ಸಾಮಾನ್ಯ ಜನರು ಜೀವನಕ್ಕೆ ಎಷ್ಟು ಒಗ್ಗಿಕೊಳ್ಳುತ್ತಾರೆಂದರೆ ಬೇಲಿ ಇಲ್ಲದಾಗಲೂ ಆ ಎಲ್ಲೆಯನ್ನು ಮೀರುವುದಿಲ್ಲ. ಹೀಗೇಕೆ ಆಗುತ್ತದೆಂದು ಪ್ರಶ್ನಿಸಿಕೊಂಡು ಉತ್ತರಕ್ಕೆ ಹುಡುಕಿದರೆ, ನಾವು ಬೆಳೆದಂತೆಲ್ಲ ಸಮಾಜದ ನಕಾರಾತ್ಮಕ ನಂಬಿಕೆಗಳಿಗೆ, ಹಾನಿಕಾರಕ ಭಯಗಳಿಗೆ ಮತ್ತು ತಪ್ಪು ಕಲ್ಪನೆಗಳಿಗೆ ಹೊಂದಿಕೊಳ್ಳುತ್ತೇವೆ. ಅಷ್ಟೇ ಅಲ್ಲ ಅವುಗಳನ್ನು ನಿಜವೆಂದು ನಂಬುತ್ತೇವೆ.


ಸವಾಲುಗಳು ಎದುರಾದಾಗೆಲ್ಲ ತಪ್ಪಿಸಿಕೊಂಡು ಓಡಿ ಹೋಗುವ ಜಾಯಮಾನ ಬಿಟ್ಟು ಸಂಕಲ್ಪ ಶಕ್ತಿಯಿಂದ ಸವಾಲುಗಳನ್ನು ಬಗ್ಗು ಬಡಿಯುವುದು ಹೇಗೆ? ಸವಾಲುಗಳಿಗೆ ಸವಾಲು ಎಸೆಯುವುದು ಹೇಗೆ ನೋಡೋಣ ಬನ್ನಿ.
ಭಾವನೆಗಳನ್ನು ಅನುಭವಿಸಿ
ಸಾಧನಾ ಪಥದಲ್ಲಿ ನಡೆಯಬೇಕೆನ್ನುವ ಹಂಬಲವಿರುವ ನೀವು ಭಾವನೆಗಳನ್ನು ಅನುಭವಿಸಿ. ನಿಮ್ಮಲ್ಲಿ ನೀವು ಅನೇಕ ಭಾವನೆಗಳನ್ನು ಮರೆಮಾಚುವುದರಿಂದ ಅವು ಮಾಯವಾಗುವುದಿಲ್ಲ. ಬದಲಾಗಿ ಬೆಂಬಿಡದೇ ಕಾಡುತ್ತವೆ. ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತವೆ. ನಿಮಗೆ ಏನನಿಸುತ್ತದೆ ಎಂಬುದನ್ನು ಅನುಭವಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ಅದು ಧ್ಯಾನದ ರೂಪದಲ್ಲಿರಬಹುದು ಇಲ್ಲವೇ ಬರವಣಿಗೆ ರೂಪದಲ್ಲಿರಬಹುದು. ನಿಮ್ಮ ಭಾವನೆಗಳನ್ನು ಅನುಭವಿಸಿದಾಗ ಅಥವಾ ಹಂಚಿಕೊಂಡಾಗ, ನಿಮ್ಮ ಪರಿಸ್ಥಿತಿಯನ್ನು ಹೊಸ ಬೆಳಕಿನಲ್ಲಿ ನೋಡಲು ನಿಮಗೆ ಸಾಧ್ಯವಾಗುತ್ತದೆ. ಮತ್ತು ಸವಾಲನ್ನು ಜಯಿಸಲು ಕಾರಣವಾಗುತ್ತದೆ.
ಯೋಜನೆ ಹಾಕಿ
ಬದುಕು ಯೋಜಿಸುವವರ, ಸರಿಯಾಗಿ ಯೋಚಿಸುವವರ ಮತ್ತು ಎದುರಾದ ಸವಾಲುಗಳನ್ನು ಎದುರಿಸುವವರ ಪರವಾಗಿ ಇರುತ್ತದೆ ಎಂಬುದನ್ನು ಮರೆಯುವಂತಿಲ್ಲ. ಸವಾಲು ಎದುರಿಸಲು ಯೋಜಿಸಿದಷ್ಟು ಹೆಚ್ಚು ಗೆಲುವು ಸಿಗುತ್ತದೆ. ಭವಿಷ್ಯದಲ್ಲಿ ಏನಾಗಲಿದೆ ಎಂದು ತಿಳಿದಿಲ್ಲದಿದ್ದರೂ ಮುಂದೇನೆಂದು ಯೋಜಿಸಬಹುದು. ಈ ಹಿಂದೆ ಎದುರಿಸಿದ ಸವಾಲುಗಳನ್ನು ನೋಡಿ ಮುಂಬರುವ ಸವಾಲುಗಳನ್ನು ಹೇಗೆ ಎದುರಿಸಬಹುದು ಎಂಬುದರ ಕುರಿತು ಯೋಜನೆ ಹಾಕಿ. ನೀವು ಎದುರಿಸಬಹುದಾದ ಸವಾಲುಗಳನ್ನು ಊಹಿಸಲು ಸಾಧ್ಯವಾದರೆ ಅದನ್ನು ಸಾಧಿಸಲು ಯೋಜನೆಗಳನ್ನು ಯೋಚಿಸಲು ಸಾಧ್ಯ. ಸವಾಲುಗಳ ಎದುರು ನಿಲ್ಲದಿದ್ದರೆ ಅವು ನಮ್ಮನ್ನು ನುಂಗಿ ನೀರು ಕುಡಿಯುತ್ತವೆ. ಎದುರಿಸಿದರೆ ಅಸಾಧ್ಯವೆನಿಸಿದ್ದೆಲ್ಲ ಸಾಧ್ಯವಾಗುತ್ತವೆ. ಗೆಲ್ಲುತ್ತೇವೆ.
ಸಹಾಯ ಕೇಳಿ
ಸಾಧನೆಯ ಹಾದಿಯಲ್ಲಿ ನಡೆಯುವ ಪ್ರತಿಯೊಬ್ಬರಿಗೂ ಸವಾಲುಗಳ ಹಾವಳಿ ಖಚಿತ. ಸವಾಲುಗಳನ್ನು ಎದುರಿಸುವ ವ್ಯಕ್ತಿಯಾದ ನೀವು ಒಬ್ಬಂಟಿಯಾಗಿಲ್ಲ. ಆದ್ದರಿಂದ ನೀವು ಸಹಾಯವನ್ನು ಪಡೆಯಬಹುದು. ಅಯ್ಯೋ! ಮತ್ತೊಬ್ಬರ ಸಹಾಯ ಕೇಳುವುದೇ? ಎಂದು ನಾಚಿಕೆ ಪಡುವ ಹಾಗಿಲ್ಲ. ಆತ್ಮೀಯರನ್ನು, ಪ್ರೀತಿಪಾತ್ರರನ್ನು, ಸ್ನೇಹಿತರನ್ನು, ಮಾರ್ಗದರ್ಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿಮ್ಮ ಸವಾಲುಗಳಿಗೆೆ ಎದುರಾಗಿ ನಿಂತು ಎದುರಿಸಲು ಸಲಹೆ ಸೂಚನೆಗಳನ್ನು ಪಡೆಯಬಹುದು. ನೆನಪಿರಲಿ: ಅವರು ದಾರಿ ಮಾತ್ರ ತೋರಿಸುವರು ಅದರಗುಂಟ ನಡೆಯುವವರು ನೀವೇ.
ಸಹಾಯ ಮಾಡಿ
‘ನೀವು ಕೊಡುವುದೇ ನಿಮಗೆ ಸಿಗುತ್ತದೆ.’ ಎಂಬ ಮಾತಿನಂತೆ ಇತರರಿಗೆ ಸಹಾಯ ಮಾಡಲು ಸಿದ್ಧರಾಗಿರಬೇಕು. ಹಾಗಾದಾಗ ಮಾತ್ರ ನಿಮಗೆ ಬೇಕಾದಾಗ ಸಹಾಯ ಸಿಗುತ್ತದೆ. ನಿಮಗೆ ಬೇಕಾದವರು ಯಾರಾದರೂ ಕಠಿಣ ಸಮಯವನ್ನು ಎದುರಿಸುತ್ತಿದ್ದರೆ ಅವರಿಗೆ ನಿಮಗೆ ತಿಳಿದಿರುವ ಸಲಹೆ ಕೊಡಿ. ಸಹಾಯ ಹಸ್ತ ಚಾಚಿ. ಸಹಾಯ ಕೇಳುವುದು ನಾಣ್ಯದ ಒಂದು ಮುಖ ಮಾತ್ರ.. ನಾಣ್ಯದ ಇನ್ನೊಂದು ಬದಿಯಲ್ಲಿ ನೀವು ಮುಕ್ತರಾಗಿರಬೇಕು. ಬೆಂಬಲವನ್ನು ಸ್ವೀಕರಿಸಲು ಸಿದ್ಧರಾಗಿರಬೇಕು. ನಿಮ್ಮ ಸಹಾಯಕ್ಕೆ ಬರುವ ಜನರು ನಿಜವಾಗಿಯೂ ನಿಮ್ಮ ಬಗ್ಗೆ ಕಾಳಜಿ ವಹಿಸುತ್ತಾರೆ. ಪ್ರತಿಯೊಂದು ಹೆಜ್ಜೆಯೂ ಲೆಕ್ಕಕ್ಕೆ ಬರುತ್ತದೆ. ಬೇರೆಯವರು ಎಡುವಿದಾಗ ನಿಂತು ನಗುತ್ತ ನೋಡದೆ, ತಪ್ಪು ತಿದ್ದಿ ಸಹಾಯ ಮಾಡಬೇಕು.
ದೊಡ್ಡದಾಗಿ ಯೋಚಿಸಿ
ಆಲೋಚನೆಗಳನ್ನು ಅವುಗಳ ದಾರಿಯಲ್ಲಿ ಹೋಗಲು ಬಿಟ್ಟರೆ ಅವು ಅಡ್ಡಾದಿಡ್ಡಿ ಮಾರ್ಗದಲ್ಲಿ ಕರೆದುಕೊಂಡು ಹೋಗಿ ಬಿಡುತ್ತವೆ. ಅಲ್ಲಿ ಸೋಲಿನ ಭಯವೇ ಹೆಚ್ಚು. ದೊಡ್ಡ ಸಾಧಕರಾಗಬೇಕೆಂದರೆ, ದೊಡ್ಡದಾಗಿ ಯೋಚಿಸಬೇಕು. ವೈಫಲ್ಯದ ಭಯ ಅಥವಾ ನಿರ್ಧಾರ ತೆಗೆದುಕೊಳ್ಳುವ ಭಯದಿಂದಾಗಿ ನೀವು ಸಾಮಾನ್ಯ ರೀತಿಯಲ್ಲಿ ಯೋಚಿಸುವುದು ಸುಲಭ. ಆದರೆ, ಜೀವನದಲ್ಲಿ ದೊಡ್ಡದನ್ನು ಸಾಧಿಸಲು, ನೀವು ಅಪಾಯಗಳನ್ನು ತೆಗೆದುಕೊಳ್ಳಲು ಮುಕ್ತರಾಗಿರಬೇಕು. ಯಾವುದೇ ಸವಾಲುಗಳು ಎದುರಾದರೂ, ಯಾವಾಗಲೂ ದೊಡ್ಡದಾಗಿ ಯೋಚಿಸಿ ಮತ್ತು ಕನಸು ಕಾಣಿರಿ. ಆ ರೀತಿಯಲ್ಲಿ ನೀವು ಊಹಿಸಿದ್ದಕ್ಕಿಂತ ಹೆಚ್ಚಿನದನ್ನು ಸಾಧಿಸುವಿರಿ.
ಮನಸ್ಥಿತಿ
‘ನಾವು ಏನನ್ನು ಯೋಚಿಸುತ್ತೇವೆ ಅದೇ ನಾವಾಗುತ್ತೇವೆ.’ ಎಂಬಂತೆ ಅದು ನಮ್ಮ ವಾಸ್ತವವಾಗುತ್ತದೆ. ನಿಮ್ಮ ಮನಸ್ಸನ್ನು ಸಕಾರಾತ್ಮಕವಾಗಿ ಯೋಚಿಸಲು ತರಬೇತಿ ನೀಡಿ. ಅದಕ್ಕೆ ಸಮಯ ಮತ್ತು ಅಭ್ಯಾಸ ಎರಡೂ ಬೇಕಾಗುತ್ತದೆ. ಅದು ಮಾನಸಿಕ ಅರಿವಿನೊಂದಿಗೆ ಆರಂಭವಾಗುತ್ತದೆ. ಮೈಂಡ್‌ಫುಲ್‌ನೆಸ್ ತಂತ್ರಗಳು ಮತ್ತು ಧ್ಯಾನದ ಮೂಲಕ ಅರಿವನ್ನು ಅಭ್ಯಾಸ ಮಾಡಬಹುದು. ನಿಮ್ಮ ಆಲೋಚನೆಗಳನ್ನು ಒಪ್ಪಿಕೊಳ್ಳುವಲ್ಲಿ ಮತ್ತು ಅವುಗಳನ್ನು ಹಾದುಹೋಗಲು ಬಿಡುವಲ್ಲಿ ನೀವು ಉತ್ತಮರಾದಾಗ ನೀವು ನಕಾರಾತ್ಮಕ ಆಲೋಚನೆಗಳನ್ನು ನಿಲ್ಲಿಸಬಹುದು.
ಕೊನೆ ಹನಿ
ಸವಾಲುಗಳನ್ನು ಜಯಿಸಲು ನಿರಂತರತೆಯು ಒಂದು ದೊಡ್ಡ ಕೀಲಿಯಾಗಿದೆ. ಕಠಿಣ ಪರಿಶ್ರಮದ ಬದಲು ಬುದ್ಧಿವಂತಿಕೆಯಿಂದ ಚುರುಕಾಗಿ ಕೆಲಸ ಮಾಡಲು ಯತ್ನಿಸಿ. ನಿಮಗಿಂತ ಮೊದಲು ಇತರರು ಅದನ್ನು ಹೇಗೆ ಮಾಡಿದ್ದಾರೆಂದು ಪತ್ತೆ ಹಚ್ಚಿ. ಸವಾಲನ್ನು ಹೇಗೆ ಕಟ್ಟಿ ಹಾಕಬಹುದು ಎಂಬುದರ ಕುರಿತು ನಿಮ್ಮ ಸ್ವಂತ ಕೌಶಲ್ಯಗಳನ್ನು ಬಳಸಿ ಪ್ರಯತ್ನದ ದಾರಿಗೆ ಅಂಟಿಕೊಳ್ಳಿ. ಇದರಿಂದ ಸವಾಲುಗಳಿಗೆ ಸವಾಲು ಎಸೆಯಲು ಸಾಧ್ಯವಾಗುವುದು. ಸವಾಲುಗಳಿಗೆ ಸವಾಲು ಎಸೆಯದಿದ್ದರೆ ಸವಾಲನ್ನು ಮಣಿಸಬಹುದೆಂದು ನಮಗೆಂದೂ ಗೊತ್ತಾಗುವುದಿಲ್ಲ ಅಲ್ಲವೇ?

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ

ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ

ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .

ಅನ್ನದಾತರ ಸಮೃದ್ಧಿಯಲ್ಲಿ ನಮಗೆ ಸಂತೃಪ್ತಿ ಇದೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ
    In (ರಾಜ್ಯ ) ಜಿಲ್ಲೆ
  • ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ
    In (ರಾಜ್ಯ ) ಜಿಲ್ಲೆ
  • ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .
    In (ರಾಜ್ಯ ) ಜಿಲ್ಲೆ
  • ಅನ್ನದಾತರ ಸಮೃದ್ಧಿಯಲ್ಲಿ ನಮಗೆ ಸಂತೃಪ್ತಿ ಇದೆ
    In (ರಾಜ್ಯ ) ಜಿಲ್ಲೆ
  • ಸರ್ಕಾರದಿಂದ ಮೈಸೂರು ಜಿಲ್ಲೆಗೆ 5 ಕೋಟಿ 19 ಲಕ್ಷ ಅನುದಾನ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿಯಲ್ಲಿ ಭಾವೈಕ್ಯತಾ ದಿನಾಚರಣೆ…
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ಭೀಮ ಗಾಯನ ಕಾರ್ಯಕ್ರಮ ಯಶಸ್ವಿಗೆ ಕೈಜೋಡಿಸಿ
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ಪ್ರಧಾನ ಮಂತ್ರಿ ರಾಷ್ಟ್ರೀಯ ಶಿಶುಕ್ಷು ಮೇಳ
    In (ರಾಜ್ಯ ) ಜಿಲ್ಲೆ
  • ಹೋಳಿ ಹಬ್ಬ ಆಚರಣೆ: ವಿಶೇಷ ದಂಡಾಧಿಕಾರಿಗಳ ನೇಮಿಸಿ ಆದೇಶ
    In (ರಾಜ್ಯ ) ಜಿಲ್ಲೆ
  • ಬೇಡಿಕೆಗಳ ಈಡೇರಿಕೆಗೆ ಮಾ.೧೧ ರಿಂದ ೧೫ವರೆಗೆ ಮುಷ್ಕರಕ್ಕೆ ನಿರ್ಧಾರ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.