ಲೇಖನ
– ಡಾ. ರಾಜಶೇಖರ ನಾಗೂರ
“ನಮ್ಮ ಕಥಾ ಅರಮನೆ”
ಬರಹಗಾರರು
ಉದಯರಶ್ಮಿ ದಿನಪತ್ರಿಕೆ
ಆ ವ್ಯಕ್ತಿ ತನ್ನ ಪುಟ್ಟ ಮಗನನ್ನು ಬೆಳಿಗ್ಗೆ ಶಾಲೆಗೆ ತಂದು ಕಾರಿನ ಬಾಗಿಲು ತೆರೆದ. ಆ ಮಗು ಕಾರಿನಿಂದ ಇಳಿದು ಹತ್ತು ಹೆಜ್ಜೆ ಸಾಗಿ, ಅಪ್ಪನ ಕಡೆ ಭಾವನಾತ್ಮಕವಾಗಿ ನೋಡಿ “ಅಪ್ಪಾ ಶಾಲೆ ಬಿಟ್ಟ ನಂತರ ನನ್ನ ಕರೆದುಕೊಂಡು ಹೋಗಲು ಬರ್ತೀಯ ಅಲ್ವಾ” ಎಂದು ಕೇಳಿತು. ಕಾರು ಹತ್ತಿದ್ದ ಆ ತಂದೆ ಕೆಳಗಿಳಿದು ಬಂದು ಮಗುವನ್ನು ತಬ್ಬಿ “ಖಂಡಿತ ಮಗ, ನಿನ್ನ ಕರೆದುಕೊಂಡು ಹೋಗಲು ಬಂದೇ ಬರುವೆ” ಎಂದು ಮುಗುವಿನ ತಲೆಯ ಮೇಲೆ ಕೈಯಾಡಿಸಿ, ಮುದ್ದಿಸಿ ಹೊರಡುತ್ತಾನೆ.
ಆ ವ್ಯಕ್ತಿ ಶಾಲೆಯಿಂದ ಹೊರಟ 20 ನಿಮಿಷಗಳ ನಂತರ ಅತ್ಯಂತ ಪ್ರಭಲ ಭೂಕಂಪ ಸಂಭವಿಸುತ್ತದೆ. ಕೇವಲ ನಾಲ್ಕು ನಿಮಿಷದಲ್ಲಿ ಇಡೀ ನಗರ ಸ್ಮಶಾನವಾಗಿ ಬಿಡುತ್ತದೆ. ಆ ರಸ್ತೆಯ ಮೂಲಕ ಕಾರ್ ಲ್ಲಿ ಹೊರಟ ಆ ವ್ಯಕ್ತಿಗೆ ತನ್ನ ಮಗುವಿನ ಗತಿ ಏನು ಎಂದು ಆತಂಕವಾಗಿ ತಕ್ಷಣವೇ ಶಾಲೆಯ ಕಡೆ ಕಾರನ್ನು ತಿರುಗಿಸಿಕೊಂಡು ಅವಸರದಲ್ಲಿ ಬಂದು ನೋಡುತ್ತಾನೆ. ಎಂಟು ಮಹಡಿಯ ಶಾಲೆಯ ಕಟ್ಟಡ ಇಡಿಯಾಗಿ ಕಲ್ಲು ಮಣ್ಣು ಇಟ್ಟಿಗೆಯ ಅವಶೇಷಗಳ ನಡುವೆ ಮುಳುಗಿ ಹೋಗಿದೆ.
ಇವನಂತೆ ಅಲ್ಲಿಗೆ ಓಡಿ ಬಂದ ಅನೇಕ ಪಾಲಕರು ತಮ್ಮ ತಮ್ಮ ಮಕ್ಕಳನ್ನು ಹುಡುಕುವ ಪ್ರಯತ್ನ ಮಾಡುತ್ತಾ, ಚೀರುತ್ತಾ ಅಳುತ್ತಾ, ಭಾವನಾತ್ಮಕ ನೆಲೆಯಲ್ಲಿ ಕಟ್ಟಡದ ಇಟ್ಟಿಗೆ ಕಲ್ಲುಗಳನ್ನು ಒಂದೊದಾಗಿ ತೆಗೆಯಲು ಪ್ರಯತ್ನಿಸಿ ಸೋತು ಕೈ ಚೆಲ್ಲಿ ನಿಲ್ಲುತ್ತಾರೆ. ಆದರೆ ಈ ವ್ಯಕ್ತಿ ಮಾತ್ರ ಒಂದೊಂದೇ ಇಟ್ಟಿಗೆ ಕಲ್ಲುಗಳನ್ನು ತೆಗೆಯುವುದು ನಿಲ್ಲಿಸುವುದಿಲ್ಲ.
ಸಾಯಂಕಾಲ 6 ಗಂಟೆಗೆ ಸರ್ಕಾರಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾಗುತ್ತದೆ. ಈ ವ್ಯಕ್ತಿಗೆ ಅಧಿಕಾರಿಗಳು ಯಾವ ಮಕ್ಕಳೂ ಬದುಕುಳಿದ ಸಂಭವವಿಲ್ಲಾ. ಬದುಕಿದ್ದರೂ ಅವರನ್ನು ತಗೆಯುವುದು ಸುಲಭವಿಲ್ಲ. ಕಾರಣ ವ್ಯರ್ಥ ಪ್ರಯತ್ನ ಬೇಡ. ಈ ಸ್ಥಳದಿಂದ ನಿರ್ಗಮಿಸಿ ಎಂದು ತಿಳಿಸುತ್ತಾರೆ. ಆದರೂ ಆ ವ್ಯಕ್ತಿ ಬಿಡದೆ ತನ್ನ ಮಗುವನ್ನು ಹುಡುಕುವ ಪ್ರಯತ್ನ ಮುಂದುವರೆಸುತ್ತಾನೆ.
3 ಗಂಟೆ ಕಳೆಯಿತು.
6 ಗಂಟೆ ಕಳೆಯಿತು.
12 ಗಂಟೆ ಕಳೆಯಿತು.
24 ಗಂಟೆ ಕಳೆಯಿತು.
30 ಗಂಟೆ ಕಳೆಯಿತು.
ಈ ಅಪ್ಪ ತನ್ನ ಮಗುವನ್ನು ಹುಡುಕುವುದ ನಿಲ್ಲಿಸಲಿಲ್ಲ.
ಎಲ್ಲರೂ ಮಗುವಿನ ಮೇಲಿನ ಪ್ರೀತಿಯಿಂದ ಈ ವ್ಯಕ್ತಿ ಹತಾಶೆಯಾಗಿದ್ದಾನೆ. ಇದೆಲ್ಲ ಹುಚ್ಚು ಪ್ರಯತ್ನ ಎಂದು ಪರಿಗಣಿಸುತ್ತಾರೆ. ಮನೆಗೆ ತೆರಳಲು ಹೇಳುತ್ತಾರೆ. ಉಳಿದ ಪಾಲಕರು ತಮ್ಮ ಮಕ್ಕಳು ಬದುಕಿ ಬರಲಿ ಎಂದು ಪ್ರಾರ್ಥನೆ ಮಾಡುತ್ತಾ ಇರುವಾಗ, ಈತ ಕಲ್ಲು ಮಣ್ಣು ಇಟ್ಟಿಗೆಗಳನ್ನು ಸರಿಸುತ್ತಲೇ ಇದ್ದ.
ಬೆಳಿಗ್ಗೆ ಶಾಲೆಗೆ ಮಗುವನ್ನು ಬಿಟ್ಟು ತೆರಳುವಾಗ ‘ನಿನ್ನನ್ನು ಮರಳಿ ಕರೆದುಕೊಂಡು ಹೋಗಲು ಬಂದೇ ಬರುತ್ತೇನೆ’ ಎಂದು ತನ್ನ ಮಗನಿಗೆ ಇತ್ತ ಆ ಭರವಸೆ ಆ ಅಪ್ಪನನ್ನು ಸುಮ್ಮನಿರಲು ಬಿಡಲೇ ಇಲ್ಲಾ. ಅವನು ಬಿದ್ದ ಕಟ್ಟಡದ ಅವಶೇಷಗಳನ್ನು ತೆಗೆಯುವುದ ನಿಲ್ಲಿಸಲೇ ಇಲ್ಲಾ.
36 ಗಂಟೆ ಕಳೆಯಿತು.
38 ಗಂಟೆ ಕಳೆಯಿತು.
“ಸ್ಯಾಮ್ಯೂಲ್ ಸ್ಯಾಮ್ಯೂಲ್” ಎಂದು ಮಗನನ್ನು ಕೂಗುತ್ತಲೇ ಆ ಬಂಡೆಗಲ್ಲನ್ನು ಸರಿಸಿದಾಗ “ಅಪ್ಪಾ ಅಪ್ಪಾ” ಎಂದು ಒಳಗಿನಿಂದ ಧ್ವನಿಯೊಂದು ಕೇಳಿತು. ಈ ಧ್ವನಿ ತನ್ನ ಮಗನದೇ ಎಂದು ದೃಡವಾದಾಗ ಕೈ ಒಳಗೆ ಚಾಚುತ್ತಾನೆ. ಪುಟ್ಟ ಬೆರಳುಗಳ ಕೈಗಳು ಅವನನ್ನು ಸ್ಪರ್ಶಸಿದವು. ಈ ವ್ಯಕ್ತಿಯ ಕಣ್ಣಾಲೆಗಳು ತುಂಬಿಬಂದವು. ತಡ ಮಾಡದೆ ಮಗನನ್ನು ಹೊರಗೆಳೆದು ಬಿಗಿದಪ್ಪಿ ಅಳಲು ಪ್ರಾರಂಭಿಸಿದ. ಆಗ ಆ ಮಗು “ಅಪ್ಪಾ ನನ್ನ ಜೊತೆ ಒಳಗೆ ನನ್ನ ಸ್ನೇಹಿತರು ಕೂಡಾ ಇದ್ದಾರೆ ಅವರನ್ನು ಕೂಡಾ ಹೊರಗೆ ತಗೆ” ಎಂದಿತು. ಕೂಡಲೇ ಈ ವ್ಯಕ್ತಿ ಆ ಮಕ್ಕಳನ್ನು ಕೂಡಾ ಹೊರತೆಗೆಯುತ್ತಾನೆ.
ಎಲ್ಲಾ ಮಕ್ಕಳು ಹೊರ ಬಂದಮೇಲೆ ಆ ಮಗು ತನ್ನ ಇತರೇ ಸ್ನೇಹಿತರಿಗೆ ಹೇಳುತ್ತಾನೆ “ನಾನು ಹೇಳಿರಲಿಲ್ವಾ, ನಮ್ಮಪ್ಪ ಬಂದೇ ಬರುತ್ತಾನೆ ಎಂದು”.
ಈ ನೈಜ ಘಟನೆ 1988 ರಲ್ಲಿ ಅರ್ಮೆನಿಯಾ ದಲ್ಲಿ ನಡೆದಿದೆ.
ಅಪ್ಪನೆಂಬ ಆಕಾಶ, ಅಪ್ಪನೆಂಬ ಅದ್ಬುತ, ಅಪ್ಪನೆಂಬ ಭರವಸೆ ಇನ್ನೊಂದಿಲ್ಲ. ಇಂತಹ ಅಪ್ಪನಿದ್ದರೆ ಪ್ರತಿದಿನವು ಅಪ್ಪನ ದಿನಾಚರಣೆ. ಅಲ್ವಾ! ಅಪ್ಪ ಎಂದರೆ ಮಕ್ಕಳು ಪ್ರತಿದಿನ ಅಪ್ಪನ ನೆನೆದು ಬದುಕುವಂತಹ ವ್ಯಕ್ತಿ. ಅಂತಹ ಭರವಸೆ ಅಪ್ಪ.
ತನ್ನ ಜವಾಬ್ದಾರಿಯನ್ನು ನಿಭಾಯಿಸದೆ ತನ್ನ ನಂಬಿ ಹುಟ್ಟಿದ ಮಕ್ಕಳನ್ನು ಕಡೆಗಣಿಸುವವ ಅಪ್ಪನೆನಿಸಿಕೊಳ್ಳಲಾರ. ಕುಡಿತ, ಇತರೇ ಚಟಗಳ ದಾಸನಾಗಿ ತನ್ನ ಮಕ್ಕಳನ್ನು ಮರೆಯುವವ ತಂದೆ ಎನಿಸಿಕೊಳ್ಳಲಾರ.
ಹಾಗಾದರೆ ಒಳ್ಳೆಯ ಆದರ್ಶಪ್ರಿಯ ಅಪ್ಪನಾಗಲು ಬದುಕೊಂದು ಅಲ್ಪಕಾಲದ ಅವಕಾಶ. ಅಲ್ವಾ..!


