ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಎಲ್ಲಾ ಕಾಲುವೆಗಳಿಗೆ ಮುಂಗಾರು ಹಂಗಾಮಿಗೆ ಜುಲೈ 8 ರಿಂದ 120 ದಿನಗಳ ಕಾಲ ನೀರು ಹರಿಸಲು ಬೆಂಗಳೂರಿನ ವಿಕಾಸಸೌಧದಲ್ಲಿ ಮಂಗಳವಾರ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಜರುಗಿದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಸದ್ಯ ಎರಡೂ ಜಲಾಶಯಗಳಲ್ಲಿಯೂ ಸಾಕಷ್ಟು ನೀರಿನ ಸಂಗ್ರಹವಿದ್ದು, ಒಳಹರಿವು ಕೂಡಾ ಹೆಚ್ಚಿದೆ. ಅದಕ್ಕಾಗಿ ಮುಂಗಾರು ಹಂಗಾಮಿಗೆ ನಿರಂತರ ನೀರು ಹರಿಸಲಾಗುತ್ತದೆ. ಒಳಹರಿವು ಸ್ಥಗಿತಗೊಂಡ ನಂತರ ಕಾಲುವೆಗೆ 14 ದಿನ ಚಾಲು, 10 ದಿನ ಬಂದ್ ಅವಧಿಯ ವಾರಾಬಂಧಿ ಅಳವಡಿಸಲಾಗುತ್ತದೆ.
ಕಾಲುವೆಗಳ ಸ್ವಚ್ಛತೆ ಕಾರ್ಯ , ಪಂಪಸೆಟ್ ದುರಸ್ತಿ ಮತ್ತೀತರ ನಿರ್ವಹಣೆಯ ಕಾರ್ಯ ಕೈಗೊಂಡು, ಜುಲೈ 8 ರೊಳಗೆ ಕಾಲುವೆಗೆ ನೀರು ಹರಿಸಲು ಕಾಲುವೆಗಳನ್ನು ಸಿದ್ಧಗೊಳಿಸಿಕೊಳ್ಳಬೇಕು, ರೈತರಲ್ಲಿ ನೀರಿನ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಗಿದೆ.
ಸಭೆಯಲ್ಲಿ ಸಚಿವ ಶರಣಬಸಪ್ಪ ದರ್ಶನಾಪುರ, ಶಾಸಕರಾದ ಜೆ.ಟಿ.ಪಾಟೀಲ, ಅಜಯ ಧರ್ಮಸಿಂಗ್, ರಾಜಾವೇಣುಗೋಪಾಲ ನಾಯಕ, ಮಾನಪ್ಪ ವಜ್ಜಲ, ವಿಠ್ಠಲ ಕಟಕದೋಂಡ, ಕರಿಯಮ್ಮ ನಾಯಕ, ರಾಜುಗೌಡ ಪಾಟೀಲ, ಕೆಬಿಜೆಎನ್ ಎಲ್ ಎಂಡಿ ಕೆ.ಪಿ.ಮೋಹನರಾಜ್, ಬಾಗಲಕೋಟೆ ಜಿಲ್ಲಾಧಿಕಾರಿ ಸಂಗಪ್ಪ, ಪ್ರೇಮಸಿಂಗ್, ಡಿ.ಬಸವರಾಜ, ವಿ.ಆರ್. ಹಿರೇಗೌಡರ, ಬಿ.ಎಸ್. ಪಾಟೀಲ ಸೇರಿದಂತೆ ಕೃಷಿ, ಕಂದಾಯ, ಕೆಬಿಜೆಎನ್ಎಲ್ ಸೇರಿದಂತೆ ನಾನಾ ಇಲಾಖೆಯ ಅಧಿಕಾರಿಗಳು ಇದ್ದರು.
ಜಲಾಶಯದ ಮಟ್ಟ
ಆಲಮಟ್ಟಿ ಜಲಾಶಯದ ಇಂದಿನ ಮಟ್ಟ
517.20 ಮೀ
ಜಲಾಶಯದ ಒಳಹರಿವು: 84,167 ಕ್ಯೂಸೆಕ್
ಜಲಾಶಯದ ಹೊರಹರಿವು: 70,000 ಕ್ಯೂಸೆಕ್
ಜಲಾಶಯದ ನೀರಿನ ಸಂಗ್ರಹ: 87 ಟಿಎಂಸಿ ಅಡಿ (ಶೇ 70.68)

