ವಿಜಯಪುರದ ಸ್ವಪ್ನಾ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯಲ್ಲಿ ವೈದ್ಯರ ದಿನಾಚರಣೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಸ್ವಪ್ನಾ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯಲ್ಲಿ ಜು.1ರಂದು ವೈದ್ಯರ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ವೈದ್ಯರಾದ ಡಾ.ಸುಧೀರ್ ರೇಶ್ಮಿ ಅವರು ಮಕ್ಕಳಿಗೆ ಆರೋಗ್ಯದ ಮಹತ್ವವನ್ನು ವಿವರಿಸಿದರಲ್ಲದೇ, ವಿಶೇಷ ಚೇತನತೆ ಹೊಂದಿದ ಮಕ್ಕಳಿಗೆ ಆರೋಗ್ಯದ ಬಗ್ಗೆ ಸದಾ ಜಾಗೃತರಾಗಿರಬೇಕು ಎಂದು ಸಲಹೆ ನೀಡಿದರು.
“ಆರೋಗ್ಯವೇ ಜೀವನದ ಮೂಲಧಾರೆಯಾಗಿದೆ. ವಿಶೇಷ ಮಕ್ಕಳಿಗೆ ಆರೈಕೆ ಮತ್ತು ಪೋಷಣೆಯಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕು. ಸರಿಯಾದ ಆಹಾರ, ಸಮಯಪಾಲನೆಯು ಅವರಿಗೆ ಉತ್ತಮ ಭವಿಷ್ಯ ರೂಪಿಸಲು ಸಹಕಾರಿಯಾಗುತ್ತದೆ” ಎಂದು ಡಾ.ರೇಶ್ಮಿ ಹೇಳಿದರು.
ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಎಲ್ಲಾ ಅಧ್ಯಾಪಕರು, ಸಿಬ್ಬಂದಿಗಳು ಡಾ. ಸುಧೀರ್ ರೇಶ್ಮಿ ಅವರಿಗೆ ಪುಷ್ಪಗುಚ್ಛ ನೀಡಿ ಗೌರವಿಸಿದರು. ಬಳಿಕ ಮಕ್ಕಳಿಗೆ ಸಿಹಿ ಹಂಚಿ ದಿನಾಚರಣೆಯನ್ನು ಹರ್ಷೋತ್ಸಾಹದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ಶಾಲಾ ಆಡಳಿತ ಮಂಡಳಿ ವೈದ್ಯರಿಗೆ ಧನ್ಯವಾದಗಳನ್ನು ತಿಳಿಸಿ, ಅಂತಹ ಸಾರ್ಥಕ ಕಾರ್ಯಕ್ರಮಗಳು ಮುಂದುವರೆಯಲಿ ಎಂಬ ಆಶಯ ವ್ಯಕ್ತಪಡಿಸಿದರು.