ಲೇಖನ
– ವೀಣಾ ಹೇಮಂತಗೌಡ ಪಾಟೀಲ್
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ವಯಸ್ಸಾದ ತಂದೆ ತಾಯಿ ಆ ಮನೆಯಲ್ಲಿ ಇಬ್ಬರೇ. ಮುಂಜಾನೆ ನಿತ್ಯ ಕರ್ಮಗಳನ್ನು ಪೂರೈಸಿ ವಾಕಿಂಗ್ ಹೋಗುವ ಅವರಿಬ್ಬರೂ ಮನೆಗೆ ಬಂದು ಜೊತೆಯಾಗಿಯೇ ಅಡುಗೆ ಮಾಡಿ ತಿಂಡಿಯ ಬದಲು ಊಟ ಮಾಡಿ ಬಿಡುತ್ತಾರೆ. ಆತ ಆಫೀಸಿಗೆ ಹೊರಟರೆ ಆಕೆ ಕಾಲು ಚಾಚಿಕೊಂಡು ಕುಳಿತು ಪೇಪರ್ ಓದುತ್ತಾಳೆ.
ಸ್ವಲ್ಪ ಹೊತ್ತಿನ ನಂತರ ಮನೆ ಕೆಲಸದಾಕೆ ಬಂದು ಇಡೀ ಮನೆಯ ಕಸಗುಡಿಸಿ ನೆಲ ಒರೆಸಿ, ಪಾತ್ರೆ ತೊಳೆದು ಹೋಗುವವರೆಗೂ ಆಕೆಯ ಹಿಂದೆ ಮುಂದೆ ಓಡಾಡಿ ಆಕೆಗೆ ಬೇಕಾದುದನ್ನು ಒದಗಿಸುವುದು ಮನೆಯ ಯಜಮಾನಿಯ ಕೆಲಸ. ಮಧ್ಯಾಹ್ನ ಆಕೆ ಬೇಕಾದರೆ ಒಂದಷ್ಟು ಊಟ ಮಾಡುತ್ತಾರೆ, ಇಲ್ಲವಾದರೆ ಒಂದು ಕಪ್ಪು ಚಹಾ ಮಾಡಿಕೊಂಡು ಕುಡಿದು ಒಂದು ಸಣ್ಣ ನಿದ್ದೆಯನ್ನು ತೆಗೆದು ಏಳುತ್ತಾಳೆ. ಸಂಜೆ ಗಂಡ ಮನೆಗೆ ಬರುವ ವೇಳೆಗೆ ಕಸ ಗುಡಿಸುವ ಆಕೆ ತಲೆ ಬಾಚಿಕೊಂಡು ಕೈ ಕಾಲು ಮುಖ ತೊಳೆದು ದೇವರಿಗೆ ದೀಪ ಮುಡಿಸಿ ಕಾಫಿ ಡಿಕಾಕ್ಷನ್ ಹಾಕಿಡುತ್ತಾರೆ. ಪತಿ ಮನೆಗೆ ಬಂದ ಕೂಡಲೇ ಕೈ ಕಾಲು ಮುಖ ತೊಳೆದು ಏನಾದರೂ ಕುರುಕಲು ತಿಂಡಿಯನ್ನು ಎರಡು ತಟ್ಟೆಗೆ ಹಾಕಿ ತರುತ್ತಾಳೆ. ಇಬ್ಬರೂ ತಿಂಡಿ ತಿಂದು ಕಾಫಿ ಕುಡಿದು ಜೊತೆಯಾಗಿ ತರಕಾರಿ, ದಿನಸಿ ಸಾಮಾನುಗಳನ್ನು ತರಲು ಹೊರಗೆ ಹೋಗುತ್ತಾರೆ. ಮರಳಿ ಬಂದ ನಂತರ ಆಕೆ ಅಡುಗೆ ಮಾಡಿದರೆ ಆತ ಅಂದಿನ ದಿನಪತ್ರಿಕೆಯ ಮೇಲೆ ಕಣ್ಣಾಡಿಸುತ್ತಾರೆ.
ಅಡುಗೆ ಮುಗಿದು ಊಟ ಮಾಡುವ ಹೊತ್ತಿಗೆ ಅವರಿಗೆ ಮಕ್ಕಳ ಫೋನ್ ಬರುತ್ತದೆ. ಅವರೊಂದಿಗೆ ಮಾತನಾಡಿ ಮನೆಯ ಬಾಗಿಲನ್ನು ಭದ್ರ ಪಡಿಸಿ ಅವರಿಬ್ಬರೂ ನಿದ್ರೆಗೆ ಜಾರುತ್ತಾರೆ. ಎಷ್ಟು ಚೆನ್ನಾಗಿದೆ ಅವರಿಬ್ಬರ ಸಂಸಾರ ಎಂದು ಅನ್ನಿಸುತ್ತದೆ ಅಲ್ಲವೇ? ನಿಜ.. ಜೀವನದ ಸಂಧ್ಯಾಕಾಲದಲ್ಲಿ ಹೀಗೆ ಜೊತೆಯಾಗಿ ಓಡಾಡುವ ಒಬ್ಬರಿಗೊಬ್ಬರು ಆಸರೆಯಾಗಿ ನಿಲ್ಲುವ ಆ ದಂಪತಿಗಳಿಗೆ ಒಳಗೊಳಗೆ ಕೊರೆಯುವ ಒಂದು ನೋವಿನ ಸಂಗತಿಯೆಂದರೆ ಹೇಳಿಕೊಳ್ಳಲು ಮೂರು ಜನ ಮಕ್ಕಳಿದ್ದರೂ ಒಬ್ಬರು ಕೂಡ ತಮ್ಮ ಬಳಿ ಇಲ್ಲ ಎಂಬುದು.
ಇನ್ನು ಹಳ್ಳಿಯಲ್ಲಿರುವ ಬಹುತೇಕ ಎಲ್ಲ ಮನೆಗಳಲ್ಲಿಯೂ ಇದೇ ಹಾಡು ಇದೇ ಪಾಡು. ತಮ್ಮ ರೈತಾಪಿ ಬದುಕಿನ ಕಷ್ಟಗಳು ತಮ್ಮ ಮಕ್ಕಳನ್ನು ಬಾಧಿಸದಿರಲಿ ಎಂಬ ಅಪೇಕ್ಷೆಯಿಂದ ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಒತ್ತು ಕೊಟ್ಟು ಅವರನ್ನು ಓದಿಸಿ ವಿದ್ಯಾವಂತರನ್ನಾಗಿಸಿ ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಮಾಡಿರುವ ಪಾಲಕರಿಗೆ ಒಂಟಿತನದ ಬಾಧೆ ಕಾಡುತ್ತದೆ. ಯಾವಾಗಲೋ ಒಮ್ಮೆ ತಮಗೆ ರಜೆ ಸಿಕ್ಕಾಗ ಬಂದು ಹೋಗುವ ಮಕ್ಕಳ ದಾರಿ ಕಾಯುವುದಷ್ಟೇ ಅವರ ಕೆಲಸವಾಗಿದೆ. ಆಗಾಗ ಹಬ್ಬ,ಹುಣ್ಣಿಮೆಗಳಿಗೆ ಬರುತ್ತಿದ್ದ ಮಕ್ಕಳು ಇದೀಗ ಮದುವೆಯಾಗಿ ತಮ್ಮದೇ ಸಂಸಾರ,
ಮನೆ, ಮಕ್ಕಳು ಎಂದು ವ್ಯಸ್ತರಾಗಿರುವಾಗ ಊರಿಗೆ ಬರುವುದಾದರೂ ಹೇಗೆ?
ಒಂದು ಗಳಿಗೆ ಯಾರ ಆರೋಗ್ಯದಲ್ಲಿ ವ್ಯತ್ಯಾಸವಾದರೂ ದಂಪತಿಗಳಿಗೆ ಭಯ. ತಮಗೇನಾದರೂ ಆದರೆ ಮುಂದೆ ಹೇಗೆ ಎಂಬ ಆತಂಕ? ಈ ಹಿಂದೆ ಹಬ್ಬ ಹುಣ್ಣಿಮೆಗಳಲ್ಲಿ ಮಾಡುತ್ತಿದ್ದ ಅಡುಗೆಯಲ್ಲಿ ಶೇಕಡ 50ರಷ್ಟು ಕಡಿತ. ಆಕೆಗೆ ಇತ್ತೀಚೆಗೆ ರಕ್ತದೊತ್ತಡ ಮತ್ತು ಯಜಮಾನನಿಗೆ ಮಧುಮೇಹ ಮತ್ತು ರಕ್ತದೊತ್ತಡ ಎರಡೂ ಒಟ್ಟೊಟ್ಟಿಗೆ ಬಂದಿವೆ. ಹಾಗಾಗಿ ಊಟ ತಿಂಡಿಗಳಲ್ಲಿ ಇಬ್ಬರು ಕಟ್ಟುನಿಟ್ಟು ಬಾಯಿ ಚಪಲ ಇಲ್ಲವೆಂದಿಲ್ಲ ಆದರೆ ಏನನ್ನಾದರೂ ಹೆಚ್ಚು ಕಮ್ಮಿ ತಿಂದು ಆರೋಗ್ಯ ತಪ್ಪಿದ್ದರೆ ನೋಡಿಕೊಳ್ಳುವವರು ಯಾರು ಎಂಬ ಭಯ.
ಈ ಹಿಂದೆ ತುಂಬಿದ ಮನೆಯಲ್ಲಿ ಗಂಡ ಕಚೇರಿ ಕೆಲಸ ಮಕ್ಕಳ ಪಾಠ ಪ್ರವಚನ ಎಂದು ಆಸಕ್ತಿ ವಹಿಸಿದರೆ ಹೆಂಡತಿ ಮಕ್ಕಳ ಅಡುಗೆ ಊಟ ತಿಂಡಿ ಅವರ ಶಾಲೆಯ ಮತ್ತು ಮನೆಯ ಎಲ್ಲಾ ಪಾಠ ಪ್ರವಚನಗಳ ಊಟ ತಿಂಡಿಯ ಕಾಳಜಿ ವಹಿಸುತ್ತಿದ್ದರು.

ತುಂಬಿದ ಕುಟುಂಬದಲ್ಲಿ ಮಕ್ಕಳ ಕಾಳಜಿ ಮಾಡಲು ಅಜ್ಜ ಅಜ್ಜಿ ಇರುತ್ತಿದ್ದರು. ಮಕ್ಕಳನ್ನು ದೇವಸ್ಥಾನಗಳಿಗೆ ಕರೆದೊಯ್ಯುವ ನಮ್ಮ ಸಂಪ್ರದಾಯ ರೀತಿ ನೀತಿಗಳನ್ನು ಹೇಳದೆಯೇ ತಮ್ಮ ಕೃತಿಯಿಂದಲೇ ತೋರಿಸುವ ಅಜ್ಜ ಅಜ್ಜಿಯರನ್ನು ಮೊಮ್ಮಕ್ಕಳು ತಮಗೇ ಅರಿವಿಲ್ಲದೆ ಅನುಸರಿಸುತ್ತಿದ್ದರು.
ಇನ್ನು ಮಕ್ಕಳನ್ನು ತಂದೆ ಇಲ್ಲವೇ ತಾಯಿ ಗದರಿಸಿದರೆ
ಅವರನ್ನು ಪಾಲಕರ ವೈಗುಳಗಳಿಂದ, ಹೊಡೆತಗಳಿಂದ ರಕ್ಷಿಸಲು ಮುದ್ದು ಮಾಡುತ್ತಲೇ, ಬುದ್ಧಿ ಹೇಳುವ ಚಿಕ್ಕಪ್ಪ ಚಿಕ್ಕಮ್ಮಂದಿರು ಇರುತ್ತಿದ್ದರು.
ಬದಲಾದ ಕಾಲಘಟ್ಟದಲ್ಲಿ ಕುಟುಂಬಗಳು ವಿಘಟನೆಗೊಂಡು ಗಂಡ ಹೆಂಡತಿ ಮತ್ತು ಮಕ್ಕಳು ಮಾತ್ರ ಮನೆಯಲ್ಲಿ ಇರುವಂತಹ ಪರಿಸ್ಥಿತಿ ಏರ್ಪಟ್ಟಿದ್ದು ಎಲ್ಲರೂ ತಮ್ಮ ಮಕ್ಕಳು ಉನ್ನತ ಶಿಕ್ಷಣವನ್ನು ಗಳಿಸಿ ಒಳ್ಳೆಯ ಉದ್ಯೋಗವನ್ನು ಪಡೆದು ಬದುಕಿನಲ್ಲಿ ಮುನ್ನಡೆಯಲಿ ಎಂಬ ಆಶಯವನ್ನು ಹೊಂದಿದ್ದಾರೆ ಎಲ್ಲವೂ ಸರಿಯೇ ಆದರೆ ಮೇಲೆ ಏರುವ ಉನ್ನತ ಸ್ಥಿತಿಯನ್ನು ಪಡೆಯುವ ನಿಟ್ಟಿನಲ್ಲಿ ನಮ್ಮವರನ್ನೇ ನಾವು ಕಳೆದುಕೊಳ್ಳುವುದು ಎಷ್ಟರಮಟ್ಟಿಗೆ ನ್ಯಾಯ?
ಉನ್ನತ ವಿದ್ಯಾಭ್ಯಾಸ, ಒಳ್ಳೆಯ ನೌಕರಿ, ಓಡಾಡಲು ಕಾರು, ಕಂತಿನಲ್ಲಿ ಕೊಂಡ ಫ್ಲ್ಯಾಟ್ಗಳಲ್ಲಿ ವಾಸ ವಾರದ ಐದು ದಿನ ಬಿಡುವಿಲ್ಲದ ಸತತ ದುಡಿಮೆಯ ನಂತರ ವಾರಾoತ್ಯಗಳಲ್ಲಿ ಹೆಂಡತಿ ಮಕ್ಕಳೊಂದಿಗೆ ಹೊರಗಿನ ಸುತ್ತಾಟ, ಕೈಬೀಸಿ ಕರೆಯುವ ಮಾಲ್ಗಳು, ಚಿತ್ತಾಕರ್ಷಕ ಬಟ್ಟೆ ಬರೆಗಳನ್ನು, ಒಡವೆ ವಸ್ತುಗಳನ್ನು ಖರೀದಿಸಿ ಎಂದು ಹೇಳುವ ಜಾಹಿರಾತುಗಳು ಎಲ್ಲವೂ ಕೆಲ ವರ್ಷಗಳವರೆಗೆ ಚೆನ್ನಾಗಿಯೇ ಇರುತ್ತದೆ.
ಮುಂದೆ ಅವರ ಮಕ್ಕಳು ದೊಡ್ಡವರಾಗಿ ವಿದ್ಯಾಭ್ಯಾಸದ ನೆಪದಲ್ಲಿ ಗೂಡು ಬಿಟ್ಟ ಹಕ್ಕಿಯಂತೆ ಹಾರಿ ಹೋದಾಗ ಇವರಿಗೆ ಒಂಟಿತನ ಭಾಸವಾಗುತ್ತದೆ. ಈ ಹಿಂದೆ ಆಸೆಪಟ್ಟು ಕೊಂಡಿದ್ದ ಪ್ಲಾಟುಗಳು ಕೋಳಿಗೂಡಿನಂತೆ ಉಸಿರುಗಟ್ಟಿಸುವಂತೆ ಭಾಸವಾಗುತ್ತವೆ.
ಮತ್ತದೇ ಸಂಜೆ ಅದೇ ಏಕಾಂತ ಎಂದು ನಿಡುಸುಯ್ಯವ ಅವರುಗಳಿಗೆ ಇದೀಗ ತಮ್ಮ ಪಾಲಕರು ಅನುಭವಿಸಿರಬಹುದಾದ ಯಾತನೆಗಳ ಅರಿವಾಗುತ್ತದೆ. ಆದರೇನು ಪ್ರಯೋಜನ? ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವೇನು?
ನೋಡಿದಿರಾ ಸ್ನೇಹಿತರೆ! ಈ ಪರಿಸ್ಥಿತಿ ಯಾವ ತಂದೆ ತಾಯಿಗಳಿಗೂ ಬರಬಾರದು. ಕೇವಲ ಎರಡು ತಲೆಮಾರುಗಳಿಂದ ಈ ರೀತಿ ಯಾ ತೊಂದರೆಗಳನ್ನು ನಾವು ಕಾಣುತ್ತಿದ್ದೇವೆ. ಅದಕ್ಕೂ ಮುನ್ನ ಜನರು ತಾವು ಇರುವ ಸ್ಥಳಗಳಲ್ಲಿಯೇ ತಮ್ಮ ಕುಟುಂಬ ಪರಿವಾರದ ಸದಸ್ಯರೊಡನೆ ಹೊಂದಿಕೊಂಡು ಒಂದೇ ಸೂರಿನಡಿ ಕಷ್ಟ ಸುಖಗಳನ್ನು ಹಂಚಿಕೊಂಡು ಬದುಕುತ್ತಿದ್ದರು. ಒಕ್ಕಲುತನ ಪ್ರಧಾನವಾದ ಬದುಕಿನಲ್ಲಿ ಕೃಷಿ ಕೆಲಸಕ್ಕೆ, ಅದಕ್ಕೆ ಸಂಬಂಧಿಸಿದ ಉಳಿದೆಲ್ಲ ಗುಡಿ ಕೈಗಾರಿಕೆಗಳಾದ ಕುಂಬಾರ, ಬಡಿಗ, ಕಮ್ಮಾರ, ಅಕ್ಕಸಾಲಿಗ ನೀರು ಗಂಟಿ ಹೀಗೆ ಹತ್ತು ಹಲವು ಕೆಲಸಗಳನ್ನು ಮಾಡುವವರು ಕೂಡ ರೈತರಿಗೆ ಜೊತೆಯಾಗಿ ತಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಾ ಹಳ್ಳಿಗಳಲ್ಲಿ ಬದುಕುತ್ತಿದ್ದರು. ಆದರೆ ಎಲ್ಲಾ ಕೆಲಸಗಳನ್ನು ಯಂತ್ರಗಳೇ ನಿರ್ವಹಿಸುವಂತಹ ಪರಿಸ್ಥಿತಿ ಒದಗಿ ಬಂದಾಗ ಬಹಳಷ್ಟು ಜನ ನಿರುದ್ಯೋಗಿಗಳಾದರು. ಕೆಲವರು ತಮ್ಮ ಹಳೆಯ ಉದ್ಯೋಗಗಳಲ್ಲಿ ಮುಂದುವರೆದರು ಕೂಡ ಅವರಿಗೆ ಜೀವನವನ್ನು ನಿರ್ವಹಿಸಲು ಸಾಧ್ಯವಾಗುವಷ್ಟು ವರಮಾನ ದೊರೆಯದೆ ಹೋಯಿತು. ಪರಿಣಾಮವಾಗಿ ಜನರು ಉದ್ಯೋಗವನ್ನು ಅರಸಿ ಗುಳೆ ಹೋಗಲು ಆರಂಭಿಸಿದರು. ಕೈಗಾರೀಕರಣಗಳಿಂದ ಗುಡಿ ಕೈಗಾರಿಕೆಗಳು ಸಂಪೂರ್ಣವಾಗಿ ಮುಚ್ಚಿ ಹೋಗಿ ರೈತನು ಕೂಡ ತನ್ನ ಬೆಳಗೆ ಸರಿಯಾದ ಬೆಲೆಯನ್ನು ಪಡೆಯಲಾಗದೆ ಒಕ್ಕಲುತನದಿಂದ ವಿಮುಖನಾದನು.
ಇದು ಸಮಸ್ಯೆಯ ಒಂದು ಮುಖವಾದರೆ ಆಧುನೀಕರಣದ ಭರದಲ್ಲಿ ಜನರು ಹೆಚ್ಚಿನ ಶಿಕ್ಷಣ, ಉದ್ಯೋಗಾವಕಾಶಗಳನ್ನು ಹುಡುಕಿ ಹಳ್ಳಿಯಿಂದ ಪಟ್ಟಣಗಳತ್ತ ಮುಖ ಮಾಡಿದರು. ಚಂದದ ಬದುಕಿನ ಆಶಯ ಅವರನ್ನು ತಮ್ಮ ಮೂಲದಿಂದ ಕಿತ್ತು ಬೇರೆಡೆ
ಬದುಕು ನಡೆಸಲು ಅನಿವಾರ್ಯವಾಯಿತು.
ಕುಟುಂಬಗಳು ಹೆಚ್ಚಿನ ಖಾಸಗಿತನವನ್ನು ಅಪೇಕ್ಷಿಸಿ ವಿಭಕ್ತ ಕುಟುಂಬಗಳಾಗಿ ಒಡೆದು ಹೋದವು. ಇದೀಗ ಪರಿಸ್ಥಿತಿ ವಿಪರೀತಕ್ಕೆ ಹೋಗಿದ್ದು ಪಾಲಕರು ಮತ್ತು ಮಕ್ಕಳು ಬೇರೆ ಊರಲ್ಲಿ ಇದ್ದು ಬೇರೆ ಮನೆಗಳಲ್ಲಿ ವಾಸಿಸುತ್ತಿರುವುದಕ್ಕಿಂತ ಹೆಚ್ಚಾಗಿ ಒಂದೇ ಊರಿನ ಎರಡು ವಿಭಿನ್ನ ಬಡಾವಣೆಗಳಲ್ಲಿ ಮನೆ ಮಾಡಿಕೊಂಡು ಬದುಕುವ ಪರಿಸ್ಥಿತಿ.
ಇದೊಂದು ರೀತಿಯ ಅತಂತ್ರ ಜೀವನ. ನಮ್ಮವರೊಂದಿಗೆ ಒಡನಾಡುವ ನಮ್ಮ ಪ್ರೀತಿ ವಿಶ್ವಾಸಗಳನ್ನು ಹಂಚಿಕೊಳ್ಳುವ, ಬದುಕಿನ ಎಲ್ಲ ಏರಿಳಿತಗಳನ್ನು ಜೊತೆಯಾಗಿ ಅನುಭವಿಸುವ ಜನರು ಈಗ ಕಾಣೆಯಾಗಿದ್ದಾರೆ.
ಪ್ರತಿ ಹಳ್ಳಿ ಮತ್ತು ಪುಟ್ಟ ಪಟ್ಟಣಗಳಲ್ಲಿನ ಜನರು ಉನ್ನತ ವಿದ್ಯಾಭ್ಯಾಸ ನೌಕರಿ ಎಂದು ಪರಸ್ಪರ ದೂರವಾಗಿದ್ದಾರೆ. ವಯಸ್ಸಾದ, ಮಾಗಿದ ಜೀವಿಗಳು ಮಾತ್ರ ಹಳ್ಳಿಯ ತಮ್ಮ ಮನೆಗಳ ಅಂಗಳದಲ್ಲಿ ಕುಳಿತುಕೊಂಡು ಈಗಾಗಲೇ ಮಸುಕಾಗಿರುವ ಕಣ್ಣುಗಳನ್ನು ಮತ್ತಷ್ಟು ಕಿರಿದಾಗಿಸಿಕೊಂಡು ಹಣೆಗೆ ಕೈ ಹಚ್ಚಿ ಕಾಯುತ್ತಿದ್ದಾರೆ ತಮ್ಮ ಮಕ್ಕಳ ಬರವಿಗಾಗಿ.
