ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದ ಸಿಂದಗಿ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ಮಾಡುತ್ತಿರುವ ತ್ಯಾಜ್ಯ ವಿಲೇವಾರಿಯನ್ನು ಬೇರೆಡೆ ಸ್ಥಳಾಂತರಿಸುವಂತೆ ಆಗ್ರಹಿಸಿ ರೈತರು ಹಾಗೂ ಜಮೀನುಗಳ ಮಾಲೀಕರು ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯಕ್ಕೆ ಸೋಮವಾರ ಆಗಮಿಸಿದ ರೈತರು ಹಾಗೂ ಜಮೀನುಗಳ ಮಾಲೀಕರು ಪಟ್ಟಣ ಪಂಚಾಯಿತಿ ವಿಲೇವಾರಿ ಮಾಡುತ್ತಿರುವ ತ್ಯಾಜ್ಯದಿಂದ ತಮಗಾಗುತ್ತಿರುವ ತೊಂದರೆ ಕುರಿತು ತಹಶೀಲ್ದಾರರ ಗಮನ ಸೆಳೆದರು.
ಈ ಸಂದರ್ಭದಲ್ಲಿ ರೈತಪ್ರತಿನಿಧಿ ಅರವಿಂದ ನಾಯ್ಕೋಡಿ ಮಾತನಾಡಿ, ಪಟ್ಟಣ ಪಂಚಾಯಿತಿ ವಿಲೇವಾರಿ ಮಾಡುತ್ತಿರುವ ಪ್ಲಾಸ್ಟಿಕ್ ಕಾಗದಗಳು ಜಮೀನುಗಳಲ್ಲಿ ಹಾರಾಡಿ ಬೆಳೆಗಳಿಗೆ ಸುತ್ತಿಕೊಳ್ಳುತ್ತಿವೆ. ಇದರಿಂದ ಬೆಳೆಗಳ ಬೆಳವಣಿಗೆಯ ಮೇಲೆ ಪರಿಣಾಮವಾಗುತ್ತಿದೆ. ಅಲ್ಲದೆ ಹಸಿ ಕಸ ಮತ್ತು ಸತ್ತ ಪ್ರಾಣಿಗಳನ್ನು ಅಲ್ಲಿಯೇ ಎಸೆದಿರುವುದರಿಂದ ಇಡೀ ವಾತಾವರಣ ಗಬ್ಬು ವಾಸನೆಯಿಂದ ಕೂಡಿದೆ. ಇದರಿಂದ ಜಮೀನುಗಳ ಮನೆಗಳಲ್ಲಿ ವಾಸಿಸುವ ಕುಟುಂಬಗಳಿಗೆ ಅಸಹನೀಯವೆನಿಸಿದೆ.
ತ್ಯಾಜ್ಯ ವಿಲೇವಾರಿ ಮಾಡುವ ಸಿಬ್ಬಂದಿ ಕೆಲವು ಬಾರಿ ತ್ಯಾಜ್ಯಕ್ಕೆ ಬೆಂಕಿ ಹಚ್ಚುವುದರಿಂದ ಕಬ್ಬು ಬೆಳೆಗೆ ಬೆಂಕಿ ತಗಲುವ ಸಾಧ್ಯತೆಯಿದೆ. ತ್ಯಾಜ್ಯದ ಬೆಂಕಿಯಿಂದ ಇಡೀ ಪ್ರದೇಶ ಹೊಗೆಮಯವಾಗುತ್ತಿದೆ. ಅಲ್ಲದೇ ತ್ಯಾಜ್ಯ ತುಂಬಿದ ವಾಹನಗಳು ತುಂಬಿಕೊಂಡು ಬರುವಾಗ ರಸ್ತೆಯ ಎಡಬಲಗಳಲ್ಲಿ ಕಸ ಚೆಲ್ಲುತ್ತಿದೆ. ನಡೆದಾಡುವವರು ಇಂಥ ಕಸದ ಮೇಲೆಯೇ ಮುಗಿ ಮುಚ್ಚಿಕೊಂಡು ಬರುವಂತಾಗಿದೆ. ಈ ಎಲ್ಲ ಕಾರಣಗಳಿಂದ ಪಟ್ಟಣ ಪಂಚಾಯಿತಿಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ. ಈ ಬಾರಿಯಾದರೂ ತಾವು ಅಗತ್ಯ ಕ್ರಮ ವಹಿಸಿ ವಿಲೇವಾರಿ ಸ್ಥಳ ಬದಲಾಯಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.
ನಾಗರಾಜ ಸಂಗಣ್ಣವರ, ಶಾಂತಪ್ಪ ದೇವೂರ, ಪ್ರಕಾಶ ಡೋಣೂರ, ಎಸ್.ಬಿ.ಮೆಟಗಾರ, ಲಕ್ಷ್ಮಣ ಬಾಣಕಾರ, ಆರ್.ಎ.ಕೊಂಡಗೂಳಿ, ಐ.ಡಿ.ಮುಲ್ಲಾ, ಆರ್.ಬಿ.ಬಣಕಾರ, ಎಸ್.ಎಮ್.ವಾಲೀಕಾರ, ಜಿ.ಎಸ್.ಮೆಟಗಾರ ಇದ್ದರು.
“ತ್ಯಾಜ್ಯ ವಿಲೇವಾರಿ ಕುರಿತು ಪಂಚಾಯಿತಿ ಮುಖ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.”
– ಪ್ರಕಾಶ ಸಿಂದಗಿ
ತಹಶೀಲ್ದಾರ, ದೇವರಹಿಪ್ಪರಗಿ