ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ವಿರಕ್ತಮಠದ ಶಿವಾನುಭವ ಮಂಟಪದಲ್ಲಿ ಹಾವೇರಿ ಜಿಲ್ಲೆಯ ಸವಣೂರ ತಾಲೂಕಿನ ಮಾವೂರಿನ ಬಾಲಲೀಲಾ ಸಂಗಮೇಶ್ವರ ನಾಟ್ಯ ಸಂಘವು ಹಿರಿಯ ಕಲಾವಿದ ಶಿವಲಿಂಗಯ್ಯ ಹಿರೇಮಠ ಅವರ ಮಗನ ಶಿಕ್ಷಣದ ಸಹಾಯರ್ಥವಾಗಿ ಭಾನುವಾರ ಸಂಜೆ ಪ್ರದರ್ಶನಗೊಂಡ ಬಂಜೆ ತೊಟ್ಟಿಲು ನಾಟಕ ಪ್ರೇಕ್ಷಕರನ್ನು ಮನಸೂರೆಗೊಂಡಿತ್ತು.
ನಾಟಕದಲ್ಲಿ ಕಲಾವಿದರಾದ ಅನಿತ ಹುಬ್ಬಳ್ಳಿ, ಶಶಿಕುಮಾರ ಜೀವಾಪುರ, ಮಂಜು ಹುಬ್ಬಳ್ಳಿ, ಶಿವಲಿಂಗಸ್ವಾಮಿ ಮಾವೂರು, ಚನ್ನವೀರಯ್ಯ, ಈರಣ್ಣ ಮೈಂದರಗಿ, ಸಾವಿತ್ರಮ್ಮ ದಾವಣಗೇರಿ, ಮಹಾದೇವಿ ದಾವಣಗೇರಿ, ಪ್ರೇಮಾಬಾಯಿ ತಾಳಿಕೋಟಿ, ಮಂಜುಳಾ ಹಾವೇರಿ ಮನೋಜ್ಞವಾಗಿ ಅಭಿನಯಿಸಿದರು.
ನಾಟಕಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ರಂಗಭೂಮಿಯ ನಾಟಕಗಳನ್ನು ನೋಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಮಾಜಿಕ ಪ್ರeಯನ್ನು ಬೆಳೆಸಲು ನಾಟಕಗಳು ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ಆಧುನಿಕತೆಗೆ ಕಲೆಗಳು ಸೊರಗುತ್ತಿವೆ ಎಂಬ ಮನೋಭಾವ ಬೇಡ. ಕಲೆಗೆ ಸದಾ ಬೆಲೆ ಇರುತ್ತದೆ ಎಂದರು.
ಹಿರಿಯ ಕಲಾವಿದ ಶಿವಲಿಂಗಯ್ಯ ಹಿರೇಮಠ ಅವರ ಮಗನ ಶಿಕ್ಷಣ ಸಹಾಯರ್ಥವಾಗಿ ಈ ನಾಟಕ ಪ್ರದರ್ಶನವಾಗುತ್ತಿದೆ. ಇದಕ್ಕೆ ಎಲ್ಲರೂ ತನು-ಮನ-ಧನದಿಂದ ಸಹಾಯ ಮಾಡಬೇಕೆಂದರು.
ಹಿರಿಯ ನ್ಯಾಯವಾದಿ ಬಿ.ಕೆ.ಕಲ್ಲೂರ ಮಾತನಾಡಿ, ಇಂದು ಟಿವ್ಹಿ ಧಾರವಾಹಿ ಹಾವಳಿದಿಂದಾಗಿ ಕಲಾವಿದರ ಬದುಕು ದುಸ್ತರವಾಗುತ್ತಿದೆ. ಕಲಾವಿದರ ಬದುಕು ಸಾಗಿಸಲು ಎಲ್ಲರೂ ಸಹಾಯ-ಸಹಕಾರ ನೀಡಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ ಮಾತನಾಡಿದರು.
ನ್ಯಾಯವಾದಿ ರವಿ ರಾಠೋಡ, ಶಿಕ್ಷಕ ಬಸವರಾಜ ಬಿದರಕುಂದಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಸವೇಶ್ವರ ದೇವಾಲಯ ಅಂತರಾಷ್ಟ್ರೀಯ ಶಾಲೆಯ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಅನಿಲ ಅಗರವಾಲ, ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಬಸವರಾಜ ಗೊಳಸಂಗಿ, ಬಸವೇಶ್ವರ ಸೇವಾ ಸಮಿತಿ ಸದಸ್ಯ ಎಂ.ಜಿ.ಆದಿಗೊಂಡ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಜನಪದ ಗಾಯಕ ಬಸವರಾಜ ಹಾರಿವಾಳ, ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ, ನಿವೃತ್ತ ಸೈನಿಕ ರುದ್ರಗೌಡ ಬಿರಾದಾರ, ಮುಖಂಡರಾದ ಸಂಕನಗೌಡ ಪಾಟೀಲ, ಪ್ರಕಾಶ ಕುಲಕರ್ಣಿ ಇತರರು ಇದ್ದರು. ಅರುಣ ಬಸಾಪುರ ಪ್ರಾರ್ಥಿಸಿದರು. ಕೊಟ್ರೇಶ ಹೆಗ್ಡಾಳ ಸ್ವಾಗತಿಸಿದರು. ಮಹಾಂತೇಶ ಸಂಗಮ ನಿರೂಪಿಸಿದರು. ಶಿವಲಿಂಗಯ್ಯ ಹಿರೇಮಠ ವಂದಿಸಿದರು.