ಕಲಿಸಿದ ಶಿಕ್ಷಕರನ್ನು ಗೌರವಿಸಿದ ರ‍್ಯಾಂಕ್ ವಿದ್ಯಾರ್ಥಿ ಪ್ರಜ್ವಲ್ | ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ್ ಕೌಲಗಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಕ್ಕಳ ಸಾಧನೆಯ ಹಿಂದೆ ಶಿಕ್ಷಕರ ಶ್ರಮ ಇರುತ್ತದೆ ಎನ್ನುವುದನ್ನು ಅರಿತುಕೊಂಡು ಅವರನ್ನು ಅಭಿಮಾನ ಗೌರವದಿಂದ ಸತ್ಕರಿಸುವ ಜನಗಳು ಬಹಳ ವಿರಳ. ಆದರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನನ್ನ ಮಗ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದುಕೊಂಡಿದ್ದಾನೆ ಎಂದರೆ ಅದರ ಹಿಂದಿರುವ ಪ್ರೇರಕ ಶಕ್ತಿ ಕಲಿಸಿದ ಗುರುಗಳು. ಅವರನ್ನು ಸತ್ಕರಿಸುವುದು ನಮ್ಮ ಆಧ್ಯ ಕರ್ತವ್ಯ ಎಂದು ಶಾಲೆಗೆ ಬಂದು ಶಿಕ್ಷಕರಿಗೆ ಸನ್ಮಾಸಿನಿಸಿದ್ದು ನಿಜಕ್ಕೂ ಹೃದಯ ಸ್ಪರ್ಷಿಯಾಗಿದೆ. ಈ ಸಂಸ್ಕಾರವನ್ನು ಭಾರತೀಯ ಪರಂಪರೆ ನಮಗೆ ಬಳುವಳಿಯಾಗಿ ನೀಡಿದೆ ಎಂದು ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ್ ಕೌಲಗಿ ಹೇಳಿದರು.
ಆದರ್ಶನಗರದ ಎಕ್ಸಲಂಟ್ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ, ೨೦೨೫ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ, ಪ್ರಜ್ವಲ್ ಪತ್ತಾರ ನ ಪಾಲಕರು ಆಯೋಜನೆ ಮಾಡಿದ್ದ ಗುರುನಮನ ಕಾರ್ಯಕ್ರಮವನ್ನುದ್ದೇಶಿ ಮಾತನಾಡಿದ ಅವರು; ಪ್ರಜ್ವಲ್ ಪತ್ತಾರ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು ಕೇವಲ ನಮ್ಮ ಸಂಸ್ಥೆಗೆ ಮಾತ್ರವಲ್ಲ ಇಡೀ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದೆ. ಇವನ ಈ ಸಾಧನೆಯ ಹಿಂದೆ ಶಿಕ್ಷಕರ ಶ್ರಮವಿದೆ. ಅದನ್ನು ಗುರುತಿಸಿ ಗೌರವ ವಂದನೆ ಕಾರ್ಯಕ್ರಮ ಆಯೋಜನೆ ಮಾಡಿರುವುದು ಅವರ ಹೃದಯ ಶ್ರೀಮಂತಿಕೆಯನ್ನು ತೋರಿಸುತ್ತದೆ. ಶಿಕ್ಷಕರನ್ನು ಗೌರವಿಸುವ ಸತ್ಪರಂಪರೆ ನಮ್ಮೆಲ್ಲರ ಗೌರವವನ್ನು ಹೆಚ್ಚಿಸುತ್ತದೆ ಎಂದರು.
ಕಾರ್ಯಕ್ರಮವನ್ನುದ್ಧೇಶಿಸಿ ಮಾತನಾಡಿದ ಪ್ರಜ್ವಲ್ ಪತ್ತಾರ ತಂದೆ ರಾಜಶೇಖರ ಪತ್ತಾರ; ಎಕ್ಸಲಂಟ್ ಶಿಕ್ಷಣ ಸಂಸ್ಥೆಯು ಮಕ್ಕಳಿಗೆ ಕೇವಲ ಪಠ್ಯ ಬೋದನೆಯನ್ನು ಮಾತ್ರ ಮಾಡುವುದಿಲ್ಲ. ಬದಲಿಗೆ ಅವರ ಸರ್ವಾಂಗೀಣ ಅಭಿವೃದ್ಧಿಯ ಕಡೆಗೆ ಪ್ರೋತ್ಸಾಹ ನೀಡುತ್ತಾರೆ. ಇದು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಕ್ಕೆ ತರುವುದಕ್ಕೆ ನೆರವಾಗುತ್ತದೆ. ಎಕ್ಸಲಂಟನಲ್ಲಿ ಕಲಿತ ವಿದ್ಯಾರ್ಥಿಗೆ ಸ್ಪರ್ಧಾ ಜಗತ್ತನ್ನು ಎದುರಿಸುವ ಸಾಮರ್ಥ್ಯ ಬರುತ್ತದೆ. ಮಕ್ಕಳ ಆಸಕ್ತಿ, ಅಭಿರುಚಿಗಳನ್ನು ಅರಿತು ಪಾಠಮಾಡುವ ಇಲ್ಲಿನ ಶಿಕ್ಷಕರು ಹೆಜ್ಜೆ ಹೆಜ್ಜೆಗೂ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುತ್ತಾರೆ. ಅದರಿಂದಾಗಿಯೇ ಇಂದು ನಮ್ಮ ಮಗ ಈ ಮಟ್ಟದಲ್ಲಿ ಫಲಿತಾಂಶ ಪಡೆದುಕೊಳ್ಳುವುದಕ್ಕೆ ನೆರವಾಯಿತು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಎಕ್ಸಲಂಟ ಸಂಸ್ಥೆಯ ಗೌರವ ಸದಸ್ಯ ರಾಜಶೇಖರ ಕೌಲಗಿ; ಎಕ್ಸಲಂಟ ಸಂಸ್ಥೆಯು ಗುಣಮಟ್ಟದ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಸ್ಥಾಪಿತವಾಗಿದೆ. ಸಂಸ್ಥೆಯ ವಿವಿಧ ಅಂಗಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ದಾಖಲೆ ಮಟ್ಟದ ಫಲಿತಾಂಶವನ್ನು ತಂದುಕೊಟ್ಟಿರುತ್ತಾರೆ. ಈ ವರ್ಷವಂತೂ ಎಲ್ಲ ವಿಭಾಗಗಳಲ್ಲೂ ರ‍್ಯಾಂಕ್‌ಗಳ ಸುರಿಮಳೆಯೇ ಆಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರು ಎಂ. ಐ. ಬಿರಾದಾರ, ರಾಜೇಶ್ವರಿ ಪತ್ತಾರ, ಕುಮಾರ. ಪ್ರಜ್ವಲ. ಪತ್ತಾರ, ಪಿ. ಬಿ. ಖೇಡಗಿ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿಭಾಗದ ಶಿಕ್ಷಕರನ್ನು ಸನ್ಮಾನಿಸಲಾಯಿತು.