ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಕೆರೂಟಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೈತರಿಗೆ ಬೆಳೆ ವಿಮೆ ಜಮೆಯಾಗದ ಹಿನ್ನೆಲೆಯಲ್ಲಿ, ರೈತರು ತಹಶೀಲ್ದಾರ ಕಾರ್ಯಾಲಯಕ್ಕೆ ಆಗಮಿಸಿ ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯಕ್ಕೆ ಮಂಗಳವಾರ ಆಗಮಿಸಿದ ಕೆರೂಟಗಿ ಗ್ರಾಮದ ರೈತರು ತಮ್ಮ ಖಾತೆಗಳಿಗೆ ಜಮೆಯಾಗದೇ ಇರುವ ಬೆಳೆ ವಿಮೆಯ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಸಿದ್ದು ಬುಳ್ಳಾ ಮಾತನಾಡಿ, ೨೦೨೪-೨೫ ನೇ ಸಾಲಿನಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ರೈತರು ತೊಗರಿ ಬೆಳೆ ಭಿತ್ತನೆ ಮಾಡಿದ್ದರು. ಆದರೆ ನಂತರ ಬಹುತೇಕ ಬೆಳೆ ಮಳೆ ಕೊರತೆ ಹಾಗೂ ಇನ್ನಿತರ ಪ್ರಕೃತಿ ವಿಕೋಪಗಳಿಗೆ ಒಳಗಾಗಿ ಫಸಲು ಬಾರದಂತಾಯಿತು. ಆದರೆ ರೈತರು ತೊಗರಿ ಬೆಳೆಯ ವಿಮೆ ತುಂಬಿದ್ದು, ಈಗ ವಿಮೆ ಪರಿಹಾರದ ಹಣ ಕೆಲವು ರೈತರಿಗೆ ಮಾತ್ರ ಜಮೆ ಆಗಿದೆ. ಇನ್ನೂಳಿದ ರೈತರು ವಿಮೆ ಹಣ ಪಾವತಿಸಿದ್ದರು ಸಹ ಅವರಿಗೆ ಯಾವುದೇ ವಿಮೆ ಪರಿಹಾರ ಬಂದಿರುವುದಿಲ್ಲ ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಮೇಶ ಮಸಬಿನಾಳ ಮಾತನಾಡಿ, ರೈತರ ಖಾತೆಗಳಿಗೆ ವಿಮೆಹಣ ಬಿಡುಗಡೆ ಮಾಡದೇ ಇರುವುದಕ್ಕೆ ಕಂಪನಿಗಳೇ ನೇರ ಕಾರಣ. ಆದ್ದರಿಂದ ತಹಶೀಲ್ದಾರರು ಈ ಕುರಿತು ಕೂಡಲೇ ಬೆಳೆ ವಿಮೆ ಕಂಪನಿಯೊಂದಿಗೆ ಮಾತನಾಡಿ ವಿಮೆ ಮಾಡಿಸಿದ ರೈತರ ಎಲ್ಲ ಖಾತೆಗಳಿಗೆ ಪರಿಹಾರವನ್ನು ಜಮೆ ಮಾಡಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ನಂತರ ರೈತರೊಂದಿಗೆ ಸೇರಿ ಧರಣಿ ಕುಳಿತರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಹಾಗೂ ಪಿಡಿಓ ಅವರು ರೈತರಿಗೆ ವಿಮೆ ವಿತರಣೆ ಕುರಿತು ಸಮಾಜಾಯಿಷಿ ನೀಡಲು ಪ್ರಯತ್ನಿಸಿದರು ಸಹ, ರೈತರ ಪ್ರಶ್ನೆಗಳಿಗೆ ಉತ್ತರಿಸಲು ವಿಫಲರಾದರು. ಕೊನೆಗೆ ವಿಮೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ೧೫ ದಿನಗಳ ಒಳಗಾಗಿ ಇದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಕಾಶ ಪಡಶೆಟ್ಟಿ, ಮಲಕಾಜಯ್ಯ ಹಿರೇಮಠ, ಮಲ್ಲು ಚಟ್ಟರಕಿ, ಶಂಕರಗೌಡ ಪಾಟೀಲ, ಸಿದ್ಧನಗೌಡ ಪೊಲೇಶಿ, ಅಂಬಾಬಾಯಿ ರಜಪೂತ, ಸೋಮಬಾಯಿ ಕರೆತಪ್ಪಗೋಳ, ಮಡೆವ್ವ ನಂದ್ಯಾಳ, ಕಲ್ಯಾಣಯ್ಯ ಹಿರೇಮಠ, ವಿನಾಯಕ ಹಿರೇಮಠ, ಮಹಾದೇವಪ್ಪ ಬರಗಲ್, ಸಿದ್ದಣ್ಣ ಪೂಜಾರಿ ಇದ್ದರು.

