ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ರಾಜ್ಯದಲ್ಲಿ ವಿದ್ಯುತ್ ವಿತರಣೆಯ ಖಾಸಗೀಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಟಾಟಾ ಕಂಪನಿಯು ಹಿಂದಕ್ಕೆ ಪಡೆದಿರುವುದು ಸಾರ್ವಜನಿಕ ವಲಯ, ಸಿಬ್ಬಂದಿ, ಕಾರ್ಮಿಕ ಸಂಘಟನೆಗಳು ಹಾಗೂ ವಿವಿಧ ರೈತ-ಜನಪರ ಸಂಘಟನೆಗಳ ನಿರಂತರ ಹೋರಾಟಕ್ಕೆ ಸಂದ ಮಹತ್ವದ ಗೆಲುವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ತಾಲೂಕಾಧ್ಯಕ್ಷ ಬಸವರಾಜ ರಂಜುಣಗಿ ಎಂದಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ವಿದ್ಯುತ್ ಖಾಸಗೀಕರಣದ ವಿರುದ್ಧ ಕಳೆದ ಕೆಲವು ತಿಂಗಳುಗಳಿಂದ ರಾಜ್ಯದಾದ್ಯಂತ ಪ್ರತಿಭಟನೆಗಳು, ಮನವಿ ಸಲ್ಲಿಕೆ, ಜಾಗೃತಿ ಅಭಿಯಾನಗಳು ಹಾಗೂ ವಿವಿಧ ರೀತಿಯ ಹೋರಾಟಗಳು ನಡೆಯುತ್ತಿದ್ದವು. ಸಾರ್ವಜನಿಕ ಸೇವೆಯಾದ ವಿದ್ಯುತ್ ವಿತರಣೆಯನ್ನು ಖಾಸಗೀಕರಣ ಮಾಡುವುದರಿಂದ ಜನಸಾಮಾನ್ಯರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಬಹುದು ಎಂಬ ಆತಂಕವನ್ನು ಹಲವು ಸಂಘಟನೆಗಳು ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಟಾಟಾ ಕಂಪನಿಯು ತನ್ನ ಅರ್ಜಿಯನ್ನು ಹಿಂದಕ್ಕೆ ಪಡೆದಿರುವ ಬೆಳವಣಿಗೆಗೆ ವಿವಿಧ ಕಾರ್ಮಿಕ ಸಂಘಟನೆಗಳು ಹಾಗೂ ಜನಪರ ಸಂಘಟನೆಗಳು ಸ್ವಾಗತ ವ್ಯಕ್ತಪಡಿಸಿದ್ದು, ಇದು ಜನರ ಏಕತೆ ಮತ್ತು ಹೋರಾಟದ ಶಕ್ತಿಗೆ ದೊರೆತ ಯಶಸ್ಸು. ಮುಂಬರುವ ದಿನಮಾನಗಳಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ತರುವ ಯಾವುದೇ ಕ್ರಮಗಳನ್ನು ಸರಕಾರಗಳು ಕೈಗೊಂಡರೆ ವಿರೋಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

