ಕೋಟ್ಯಾಳದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನದ ಸಿಎಸ್ ಆರ್ ಅನುದಾನದಡಿ ಉನ್ನತೀಕರಿಸಿದ ಪ್ರೌಢ ಶಾಲಾ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೋಟ್ಯಾಳ ಗ್ರಾಮದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಸಂಸ್ಥೆಗಳ ಸಿ.ಎಸ್.ಆರ್ ಅನುದಾನದಡಿ ೩.೨೫ ಕೋಟಿ ರೂಪಾಯಿ ವೆಚ್ಚದಲ್ಲಿ, ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣಗೊಂಡಿದ್ದು, ಕೋಟ್ಯಾಳ ಸುತ್ತಮುತ್ತಲಿನ ಗ್ರಾಮಗಳ ನೂರಾರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಆಧುನಿಕ ಕಲಿಕಾ ವಾತಾವರಣವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಎಂ.ಬಿ. ಪಾಟೀಲ ಅವರು ಹೇಳಿದರು.
ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಸಂಸ್ಥೆಗಳ ಸಿ.ಎಸ್.ಆರ್ ಅನುದಾನದಡಿ ನಿರ್ಮಿಸಲಾದ ಸುಸಜ್ಜಿತ ನೂತನ ಸರ್ಕಾರಿ ಪ್ರೌಢ ಶಾಲಾ ಕಟ್ಟಡವನ್ನು ಶುಕ್ರವಾರ ವಿದ್ಯುಕ್ತವಾಗಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಜಗತ್ತಿನಲ್ಲಿ ದೊಡ್ಡದಾದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತನ್ನ ಆದಾಯದ ಮರುಹೂಡಿಕೆ ಮಾಡಿದ ಏಕೈಕ ವಿಮಾನ ನಿಲ್ದಾಣವಾಗಿದೆ. ಆ ಲಾಭಾಂಶದಲ್ಲಿ ಸಮಾಜಮುಖಿ ಕಾರ್ಯ ನಿರ್ವಹಿಸುವುದರಲ್ಲಿ ಸದಾ ಮುಂದಿರುವ ಈ ಸಂಸ್ಥೆ, ಕೋಟ್ಯಾಳದಲ್ಲಿ ಗುಣಮಟ್ಟದ ಹಾಗೂ ಸುಂದರ ಶಾಲಾ ಕಟ್ಟಡ ನಿರ್ಮಿಸಿಕೊಟ್ಟಿದೆ. ಗ್ರಾಮೀಣ ಪ್ರತಿಭೆಗಳಿಗೆ ಈ ಶಾಲಾ ಕಟ್ಟಡ ಅನುಕೂಲವಾಗಲಿದ್ದು, ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕೂ ಹೆಚ್ಚು ಒತ್ತು ನೀಡಿದರೆ, ಗ್ರಾಮೀಣ ಬಾಲಕಿಯರಿಗೆ ಈ ಶಾಲೆ ಭವಿಷ್ಯದ ದಿನಗಳಲ್ಲಿ ವರದಾನವಾಗಲಿದೆ ಎಂದರು.
ಹಾಗಾಗಿ ಹೆಣ್ಣು ಮಕ್ಕಳನ್ನು ಪೋಷಕರು ಕಡ್ಡಾಯವಾಗಿ ಶಾಲೆಗೆ ಕಳುಹಿಸಿಕೊಡಬೇಕು. ಭವಿಷ್ಯದ ದಿನಗಳಲ್ಲಿ ಅವರು ಇಂಜಿನೀಯರ್ ಹಾಗೂ ವೈದ್ಯರು ಒಳಗೊಂಡAತೆ ಉನ್ನತ ಹುದ್ದೆಗೇರಿ ಉಜ್ವಲ ಭಾರತ ನಿರ್ಮಾಣಕ್ಕೆ ಕೈಜೋಡಿಸಲಿ ಎಂದು ಸಚಿವರು ಆಶಿಸಿದರು.
ಈ ಸುಸಜ್ಜಿತ ಶಾಲಾ ಕಟ್ಟಡವನ್ನು ಒಟ್ಟು ೩.೨೫ ಕೋಟಿ ರೂಪಾಯಿ ವೆಚ್ಚದಲ್ಲಿ, ೭,೦೦೦ ಚದರ ಅಡಿ ವಿಸ್ತೀರ್ಣದಲ್ಲಿ ಅತ್ಯಾಧುನಿಕವಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕಟ್ಟಡ ನಿರ್ಮಿಸಲಾಗಿದೆ. ಇದರೊಂದಿಗೆ ೮೦೦ ಚದರ ಅಡಿಯ ಹಳೆಯ ಕಟ್ಟಡದ ಪುನರುಜ್ಜೀವನ ಕಾರ್ಯವನ್ನು ಸಹ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಸಚಿವರು ನುಡಿದರು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಹರಿ ಮರಾರ ಮಾತನಾಡಿ, ಈ ಸುಂದರ ಕಟ್ಟಡ ವಿದ್ಯಾರ್ಥಿಗಳ ಭವ್ಯ ಭವಿತವ್ಯ ಬೆಳಗುವ ಜ್ಞಾನ ದೇಗುಲವಾಗಿದೆ. ನೀರಾವರಿಯಿಂದ ಈ ಭಾಗದ ರೈತರ ಬಾಳು ಸಮೃದ್ಧಿಗೊಳಿಸಿದ ಡಾ.ಎಂಬಿ ಪಾಟೀಲ ಅವರು ಶೈಕ್ಷಣಿಕ ಉನ್ನತಿಗಾಗಿ ಶ್ರಮಿಸುತ್ತಿದ್ದಾರೆ. ಅವರ ಶ್ರಮದ ಫಲವಾಗಿ ಈ ಕಟ್ಟಡ ಮೈದಳೆದಿದೆ ಎಂದರು.
ಮುಖ್ಯ ಹಣಕಾಸು ಅಧಿಕಾರಿ ಭಾಸ್ಕರ ಆನಂದರಾವ್, ಭೂಮಿ ದಾನ ಮಾಡಿದ ಶ್ರೀಮತಿ ಕಮಲಾ ಮುರುಗೇಶ ನಿರಾಣಿ, ಕ್ಷೇತ್ರ ಶಿಕ್ಷಣಾಧಿಕಾರಿಗ ಬಸವರಾಜ ತಳವಾರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಲಾ ಕಟ್ಟಡಕ್ಕೆ ಭೂಮಿ ದಾನ ನೀಡಿರುವ ಆನಂದರಾವ್ ಕುಲಕರ್ಣಿ, ಅನೀಲಕುಮಾರ ಪಾಟೀಲ, ವಿ.ಎಸ್ ಪಾಟೀಲ ಸೇರಿದಂತೆ ಹಲವು ಗಣ್ಯರು ಗ್ರಾಮಸ್ಥರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
“ನೀರಾವರಿಯಿಂದ ಭೂಮಿ ಬೇಡಿಕೆ ಹೆಚ್ಚಾಗಿದೆ. ಇಂದು ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ. ಇದಕ್ಕೆ ನೀರಾವರಿ ಯೋಜನೆ ಒಂದುಕಡೆಯಾದರೆ ಕೆರೆ ಹಾಗೂ ಹಳ್ಳ ತುಂಬುವುದು ಇನ್ನೊಂದೆಡೆ ನಡೆದಿದೆ. ಹಾಗಾಗಿ ಈ ಭಾಗದ ಜಮೀನಿನ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಪ್ರತಿ ಕಿಮೀ ಚೆಕ್ ಡ್ಯಾಂ ನಿರ್ಮಾಣ ಮಾಡಿ ನೀರು ಹಿಂಗಿಸಿ ಅಂತರ್ಜಲ ಮಟ್ಟ ಹೆಚ್ಚಿಸುವ ಯೋಜನೆ ಪ್ರಗತಿಯಲ್ಲಿದೆ. ಶಿಕ್ಷಣ, ಬಾಂದಾರ ನಿರ್ಮಾಣ, ನೀರಾವರಿ, ವಿದ್ಯುತ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ.”
– ಎಂ.ಬಿ.ಪಾಟೀಲ
ವಿಜಯಪುರ-ಬಾಗಲಕೋಟೆ ಉಸ್ತುವಾರಿ ಸಚಿವರು

