ಗ್ರಾಮೀಣ ಕೂಲಿಕಾರ್ಮಿಕರಿಗೆ ಯೋಜನೆಯಿಂದ ಮತ್ತಷ್ಟು ಅನುಕೂಲ | ಜಿಪಂ ಸಿಇಒ ರಿಷಿ ಆನಂದ್ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಬಿ-ಜಿ ರಾಮ್-ಜಿ ಯೋಜನೆಯಡಿ ಕೂಲಿ ದರವನ್ನು ೩೭೦ ರಿಂದ ೩೮೨ ರೂ ಹೆಚ್ಚಿಸಲಾಗಿದೆ. ಮಹಿಳೆ ಮತ್ತು ಪುರುಷ ಕೂಲಿಕಾರ್ಮಿಕರಿಗೆ ಸಮಾನ ಕೂಲಿ ನೀಡುವ ವ್ಯವಸ್ಥೆ ಮುಂದುವರಿಯಲಿದ್ದು, ಕೂಲಿ ಮೊತ್ತವನ್ನು ಕೆಲಸ ಪೂರ್ಣಗೊಂಡ ದಿನಾಂಕದಿಂದ ಗರಿಷ್ಠ ೧೫ ದಿನಗಳೊಳಗೆ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು ಎಂದು ಸಿಇಒ ತಿಳಿಸಿದ್ದಾರೆ.
ವಿಬಿ-ಜಿ ರಾಮ್-ಜಿ ಯೋಜನೆಯು ಜುಲೈ ೧ರಿಂದ ದೇಶಾದ್ಯಂತ ಜಾರಿಗೊಂಡಿದ್ದು, ಜಿಲ್ಲೆಯಲ್ಲೂ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಗತ್ಯವಿರುವ ಎಲ್ಲ ರೀತಿಯ ಪೂರ್ವ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರು ತಿಳಿಸಿದ್ದಾರೆ.
ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಭದ್ರತೆ ಒದಗಿಸುವುದರ ಜೊತೆಗೆ ಗ್ರಾಮಗಳ ಸಮಗ್ರ, ಗುಣಮಟ್ಟದ ಹಾಗೂ ಸ್ಯಾಚುರೇಷನ್ ಆಧಾರಿತ ಅಭಿವೃದ್ಧಿಯನ್ನು ಸಾಧಿಸುವ ಉದ್ದೇಶದಿಂದ ಈ ಹೊಸ ಯೋಜನೆ ಜಾರಿಗೊಂಡಿದೆ. ಈ ಯೋಜನೆಯಡಿ ಅರ್ಹ ಗ್ರಾಮೀಣ ಕುಟುಂಬಗಳಿಗೆ ಹಿಂದೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನೀಡಲಾಗುತ್ತಿದ್ದ ೧೦೦ ಮಾನವ ದಿನಗಳ ಬದಲಾಗಿ ೧೨೫ ಮಾನವ ದಿನಗಳ ಕಡ್ಡಾಯ ಉದ್ಯೋಗಾವಕಾಶ ಕಲ್ಪಿಸಲಾಗಿದ್ದು, ಗ್ರಾಮೀಣ ಜನರ ಜೀವನಮಟ್ಟ ಸುಧಾರಿಸಲು ಹಾಗೂ ಗ್ರಾಮಗಳ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ಆಯಾಮ ನೀಡಲಾಗುತ್ತಿದೆ ಎಂದು ರಿಷಿ ಆನಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

