ಉದಯರಶ್ಮಿ ದಿನಪತ್ರಿಕೆ
ಇಂಡಿ: ಪಟ್ಟಣದ ಉಪನೋಂದಣಾಧಿಕಾರಿ ಹಾಗೂ ವಿವಾಹ ನೋಂದಣಾಧಿಕಾರಿಗಳ ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ನಡೆಸಿರುವ ಮಿಂಚಿನ ದಾಳಿ ಇದೀಗ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಲೋಕಾಯುಕ್ತ ಅಧಿಕಾರಿಗಳು ಪ್ರಮುಖವಾಗಿ ಕಡತಗಳನ್ನು ಜಾಲಾಡಿದಾಗ ಕಚೇರಿಯಲ್ಲಿ ಸಾರ್ವಜನಿಕರ ಬರೋಬ್ಬರಿ ೨,೨೬೫ ಪೇಡಿ ಪತ್ರಗಳನ್ನು ಯಾವುದೇ ಸೂಕ್ತ ಕಾರಣಗಳಿಲ್ಲದೆ ಬಾಕಿ (ಪೆಂಡಿಂಗ್) ಇಡಲಾಗಿದೆ. ಪೇಡಿ ಪತ್ರಗಳನ್ನು ತಹಸೀಲ್ದಾರರ ಗಮನಕ್ಕೆ ತರಬೇಕಾಗಿತ್ತು. ಈ ಅಧಿಕಾರಿಗಳು ಜನರನ್ನು ಅಲೆದಾಡಿಸುವ ಉದ್ದೇಶದಿಂದ ತಹಸೀಲ್ದಾರ್ ಅವರಿಗೂ ಯಾವುದೇ ಮಾಹಿತಿ ನೀಡದೆ, ಎಲ್ಲಾ ಪೇಡಿ ಪತ್ರಗಳನ್ನು ತಮ್ಮ ಲಾಗಿನ್‌ನಲ್ಲೇ ಅಕ್ರಮವಾಗಿ ಇಟ್ಟುಕೊಂಡಿರುವುದು ಪತ್ತೆಯಾಗಿದೆ.
ಇಸಿ ಮತ್ತು ಮದುವೆ ಪ್ರಮಾಣಪತ್ರಗಳ ತಡೆಹಿಡಿತ:
ಸಾರ್ವಜನಿಕರಿಗೆ ಅತ್ಯಂತ ತುರ್ತಾಗಿ ಬೇಕಾಗುವ ಇಸಿ ಮತ್ತು ವಿವಾಹ ನೋಂದಣಿ ಪ್ರಮಾಣಪತ್ರಗಳನ್ನು ಕಾರಣವಿಲ್ಲದೆ ಎರಡು ತಿಂಗಳುಗಳ ಕಾಲ ಪೆಂಡಿಂಗ್ ಇಡಲಾಗಿದೆ. ಇದರ ಹಿಂದೆ ದೊಡ್ಡ ಮಟ್ಟದ ಲಂಚದ ಆಮಿಷವಿರುವ ಶಂಕೆ ವ್ಯಕ್ತವಾಗಿದೆ.
ಸರ್ಕಾರದ ನಿಯಮದಂತೆ ನೋಂದಣಿ ಶುಲ್ಕ ಮತ್ತು ಸ್ಕ್ಯಾನಿಂಗ್ ಶುಲ್ಕಗಳು ಆನ್‌ಲೈನ್ ಮೂಲಕವೇ ಪಾವತಿಯಾಗುತ್ತವೆ. ಆದರೆ ಲೋಕಾಯುಕ್ತ ಅಧಿಕಾರಿಗಳು ಕಚೇರಿಯ ಹಾರ್ಡ್ ಪ್ರತಿಯ ಪುಸ್ತಕ (ಲೆಡ್ಜರ್) ಮತ್ತು ಆನ್‌ಲೈನ್ ದಾಖಲೆಗಳನ್ನು ಹೋಲಿಕೆ ಮಾಡಿದಾಗ, ಎರಡೂ ಕಡೆ ಬೇರೆ ಬೇರೆ ಲೆಕ್ಕಗಳು ಸಿಕ್ಕಿವೆ. ಹಣದ ಮರುಪಾವತಿ ಮತ್ತು ಸಂಗ್ರಹಣೆಯಲ್ಲಿ ಗೋಲ್ಮಾಲ್ ನಡೆದಿರುವುದು ಇದರಿಂದ ತಿಳಿಯುತ್ತಿದೆ.
ನೀರಾವರಿ ಜಮೀನಿಗೆ ಒಣ ಬೇಸಾಯದ ಮೌಲ್ಯ: ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ!ಎಲ್ಲಕ್ಕಿಂತ ದೊಡ್ಡ ಹಗರಣ ಎಂದರೆ, ಕೋಟಿ ಕೋಟಿ ಬೆಲೆಬಾಳುವ ನೀರಾವರಿ ಜಮೀನುಗಳಿಗೆ ಒಣ ಬೇಸಾಯದ ಮೌಲ್ಯವನ್ನು ತೋರಿಸಿ ಖರೀದಿ ಪತ್ರಗಳನ್ನು ಸಿದ್ಧಪಡಿಸಲಾಗಿದೆ. ತಮಗೆ ಸಿಗುವ ಕಮಿಷನ್ ಆಸೆಗಾಗಿ ಅಧಿಕಾರಿಗಳು ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ ಮಾಡಿರುವುದು ದಾಖಲೆ ಸಮೇತ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದಿದೆ.
ತನಿಖೆ ಮುಂದುವರಿಕೆ: ಸದ್ಯ ಕಚೇರಿಯ ಸಂಪೂರ್ಣ ನಿಯಂತ್ರಣ ತನಿಖಾಧಿಕಾರಿಗಳ ಕೈಯಲ್ಲಿದ್ದು, ಇನ್ನು ಹತ್ತಾರು ಕರಾಳ ದಂಧೆಗಳು ಹೊರಬರುವ ಸಾಧ್ಯತೆ ಇದೆ.
ಗುರುವಾರದ ಮುಂದುವರೆದ ದಾಳಿಯಲ್ಲಿ ಲೋಕಾಯುಕ್ತ ಎಸ್.ಪಿ ಟಿ. ಮಲ್ಲೇಶಿ, ಡಿವೈಎಸ್‌ಪಿ ಮಲ್ಲಿಕಾರ್ಜುನ ತುಳಸಿಗೇರಿ, ಸಿಪಿಐ ಆನಂದ ಠಕ್ಕಣ್ಣನವರ, ಆನಂದ ಡೋಣಿ ಸೇರಿದಂತೆ ಲೋಕಾಯುಕ್ತ ಇಲಾಖೆಯ ಸಿಬ್ಬಂದಿಗಳಾದ ಆನಂದ ಪಡಶೆಟ್ಟಿ, ಶಂಕರ ಕಟ್ಟೆ, ಎ.ಎಚ್. ಗೋಲಗೇರಿ, ಎಂ.ಎನ್. ಪೂಜಾರಿ, ಎಸ್. ಆರ್. ಚಿಮ್ಮಲಗಿ, ಎಸ್.ಐ. ಹೊಕ್ರಾಣಿ, ಸಂತೋಶ ಅಮರಖೇಡ, ಎಸ್.ಎಂ. ಬಳಗಾನೂರ, ಎ.ಎ. ಮುಲ್ಲಾ. ಜಿ.ವೈ ಹಡಪದ, ಎಸ್.ಎಸ್. ಮುಂಜೆ, ಎಂ.ಎಸ್.ಸಲಗೊಂಡ, ಎಸ್.ಕೆ. ಚವ್ಹಾಣ, ವಿ.ಎ. ಅಕ್ಕಲಕೋಟ ಪಾಲ್ಗೊಂಡಿದ್ದರು.

