ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ತಾಲೂಕಿನ ಭಂಟನೂರ ಗ್ರಾಮದ ಶಂಕರಲಿಂಗ ದೇವರ ನೂತನ ಮೂರ್ತಿ ಪ್ರತಿಷ್ಠಾಪನೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮ ಮತ್ತು ಸಡಗರದಿಂದ ಜರುಗಿತು.
ಮೇ.೦೨ರಂದು ಶುಕ್ರವಾರ ದೇವಸ್ಥಾನಕ್ಕೆ ವಿದ್ಯುತ್ ಅಲಂಕಾರ, ತಳಿರು ತೋರಣಗಳಿಂದ ಸಿಂಗರಿಸಲಾಯಿತು. ಸಂಜೆ ೭ಗಂಟೆಗೆ ಗ್ರಾಮದ ದೇವರುಗಳಾದ ಶಂಕರಲಿಂಗ ಪಲ್ಲಕ್ಕಿ, ಗಂಗಿಲಿಂಗ ದೇವರ ಪಲ್ಲಕ್ಕಿ, ಲಕ್ಷ್ಮೀದೇವಿ ಪಲ್ಲಕ್ಕಿ, ಫಕೀರೇಶ್ವರ ಪಲ್ಲಕ್ಕಿ, ಗೊಲ್ಲಾಳೇಶ್ವರ ಪಲ್ಲಕ್ಕಿ ಈ ಎಲ್ಲ ದೇವರಗಳ ಪಲ್ಲಕ್ಕಿಗಳ ಭವ್ಯ ಮೆರವಣಿಗೆ ವಿವಿಧ ವಾಧ್ಯಗಳೊಂದಿಗೆ ಹೊರಗಿನ ದೇವಸ್ಥಾನಕ್ಕೆ ತಲುಪಿತು. ರಾತ್ರಿ ೧೦ ಗಂಟೆಗೆ ಭಜನೆಗಳು ಜರುಗಿದವು.
ಮೇ.೦೩ರಂದು ನಸುಕಿನಲ್ಲಿ ನೂತನ ಮೂರ್ತಿಗೆ ಮಹಾ ರುದ್ರಾಭಿಷೇಕ, ಆಗಮಿಸಿದ ಎಲ್ಲ ದೇವರುಗಳಿಗೆ ಮಹಾಪೂಜೆ ಮಂಗಳಾರುತಿ ಜರುಗಿತು. ಮುಂಜಾನೆ ೯ಗಂಟೆಗೆ ೧೦೧ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಬಳಿಕ ೧೦ಗಂಟೆಗೆ ಸಾರವಾಡದ ಬೊಂಬೆ ಕುಣಿತ, ಸಿಂದಗಿ ತಾಲೂಕಿನ ಬಸ್ತಿಹಾಳ, ಸುಂಗಠಾಣ ಗ್ರಾಮದ ಕಲಾವಿದರಿಂದ ಡೊಳ್ಳಿನ ವಾಲಗ, ಪ್ರಸಿದ್ಧ ಪುರವಂತರ ಸೇವೆಯೊಂದಿಗೆ, ಕಳಸದ ಭವ್ಯ ಮೆರವಣಿಗೆಯು ಮದ್ದು ಸುಡುವುದರೊಂದಿಗೆ ಸಾಗಿ ಅಗಸಿ ಮುಂದಿರುವ ಮೈದಾನಕ್ಕೆ ತಲುಪಿತು.
ಡೊಳ್ಳಿನ ವಾಲಗ ತಂಡ ಉತ್ಸವಕ್ಕೆ ಮೆರಗು ತಂದರೆ ಪುರವಂತರ ಸೇವೆ ಪ್ರೇಕ್ಷಕರಿಗೆ ಭಕ್ತಿ ಭಾವ ಮೂಡಿಸಿತು.ಗ್ರಾಮದ ಸಮಸ್ತ ನಾಗರಿಕರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಚಿಕ್ಕರೂಗಿಯ ಈರಣ್ಣ ಶಾಸ್ತಿçಗಳು ಪ್ರವಚನದ ಮೂಲಕ ಆದ್ಯಾತ್ಮಿಕತೆಯ ಜ್ಞಾನವನ್ನು ಉಣಬಡಿಸಿದರು. ಡಾ.ಗುರನಿಂಗಪ್ಪ ದಂಡೋತಿ, ನಿಂಗನಗೌಡ ದೇವರಮನಿ ಸಂಗೀತ ಸೇವೆ ನೀಡಿದರು. ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರಿಂದ ನೂತನ ಮೂರ್ತಿಯ ಪ್ರತಿಷ್ಠಾಪನಾ ಕಾರ್ಯಕ್ರಮ ಜರುಗಿತು. ನೂತನ ಮೂರ್ತಿ ಪ್ರತಿಷ್ಠಾಪನಾ ಮೆರವಣಿಗೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳ ಜನರು, ಭಕ್ತರು ಹಾಗೂ ಗ್ರಾಮಸ್ಥರು ಇದ್ದರು.

