ಜಯಶ್ರೀ.ಜೆ. ಅಬ್ಬಿಗೇರಿ, ಉಪನ್ಯಾಸಕರು, ಬೆಳಗಾವಿ
ಈಗ ನಾನು ಹೇಳಲು ಹೊರಟಿರುವ ಘಟನೆ ನಡೆದದ್ದು ಜಪಾನಿನಲ್ಲಿ, ೧೯೨೧ ರ ಮೇ ತಿಂಗಳಲ್ಲಿ. ಕಿಯೋಕೊ ಎಂಬ ಮಹಿಳೆ ತನ್ನ ಪತಿಯನ್ನು ಬಹಳ ಪ್ರೀತಿಸುತ್ತಿದ್ದಳು. ಆದರೆ ವಿಧಿಯಾಟವೇ ಬೇರೆಯಿತ್ತು. ಕಿಯೋಕೋ ಪತಿಗೆ ಕುಷ್ಟರೋಗ ಬಂದಿತು. ನೆರೆ ಹೊರೆಯವರು ಅದು ಸಾಂಕ್ರಾಮಿಕ ರೋಗವೆಂದು ಅವರನ್ನು ಊರಿಂದ ಹೊರಗೆ ಹಾಕಿದರು. ಧೃತಿಗೆಡದ ಕಿಯೋಕೊ ತನ್ನ ಪತಿಯನ್ನು ಸುಮಾರು ೭೦೦ ಕಿ ಮೀ ದೂರದ ತನ್ನ ಹುಟ್ಟಿದೂರಿಗೆ ಕರೆದೊಯ್ಯಲು ನಿಶ್ಚಯಿಸಿದಳು. ಧೀರ್ಘ ಪ್ರಯಾಣಕ್ಕಾಗಿ ರೈಲು ಹತ್ತಿದಳು. ಊರಿನ ಅನುಭವದ ಚಿತ್ರಣಕ್ಕಿಂತ ರೈಲಿನ ಪ್ರಯಾಣ ವಿಭಿನ್ನವಾಗಿರಲಿಲ್ಲ. ಅಂದರೆ ರೈಲಿನ ಪಯಣಿಗರು ಆಕೆಯ ಪತಿಯೊಂದಿಗಿನ ಪಯಣವನ್ನು ವಿರೋಧಿಸುವುದಷ್ಟೇ ಅಲ್ಲ, ಅವರನ್ನು ರೈಲಿನಿಂದ ಹೊರಗೆ ಹಾಕಿದರು. ಕಿಯೋಕೊ ಸ್ಟೇಷನ್ ಮಾಸ್ಟರ್ ಹತ್ತಿರ ಸಹಾಯ ಯಾಚಿಸಿದಳು. ಸಾಂಕ್ರಾಮಿಕ ರೋಗಕ್ಕೊಳಗಾದವರಿಗೆ ರೈಲು ಪ್ರಯಾಣ ಮಾಡಲು ಅನುಮತಿ ನೀಡಲಾಗದೆಂದು ಸ್ಟೇಷನ್ ಮಾಸ್ಟರ್ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದನು.
ನಾವೆಲ್ಲ ಅಂದುಕೊಳ್ಳುವಂತೆ ೭೦೦ ಕಿ ಮೀ ಪ್ರಯಾಣ, ದೂರವೇ ಸರಿ. ಆದರೆ ಒಂದು ಅಚ್ಚರಿಯ ಸಂಗತಿಯೆಂದರೆ ಕಿಯೋಕೊ ತನ್ನ ಹಳ್ಳಿಯನ್ನು ಕಾಲ್ನಡಿಗೆಯಲ್ಲಿ ತಲುಪಲು ನಿರ್ಧರಿಸಿದಳು. ಕಾಲ್ನಡಿಗೆಯಲ್ಲಿ ತಲುಪುವುದು ಅಸಾಧ್ಯವಾಗಿತ್ತು. ಆದರೂ ಆಕೆ ತನ್ನ ಧೈರ್ಯವನ್ನು ಕಳೆದುಕೊಳ್ಳಲಿಲ್ಲ. ಆಕೆ ಒಂದು ಸೈಕಲ್ ರಿಕ್ಷಾ ಮತ್ತು ಕೆಲವು ಕಂಬಳಿಗಳನ್ನು ಖರೀದಿಸಿದಳು. ಪತಿಗೆ ಕಂಬಳಿ ಹೊದಿಸಿ ಆರಾಮಾಗಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿದಳು. ದಿನವೊಂದಕ್ಕೆ ೧೫ ಕಿ.ಮೀ.ನಷ್ಟು ಪ್ರಯಾಣ ಆರಂಭಿಸಿದಳು. ಎಡವಿ ಬಿದ್ದಾಗ ಮೇಲೆಕ್ಕೆತ್ತಲು ಯಾರೂ ಮುಂದಾಗಲಿಲ್ಲ. ಪ್ರಯಾಣದುದ್ದಕ್ಕೂ ಸುತ್ತಲ ಜನರ ಟೀಕೆ ಅಸಹಕಾರದಂಥ ತೊಂದರೆಗಳನ್ನು ಅನುಭವಿಸಿದಳು. ಇದಿಷ್ಟು ಸಾಲದೆಂಬಂತೆ ಅತಿ ಚಳಿಯ ಪ್ರಕೃತಿ ವಿಕೋಪ ಬೇರೆ. ಇವೆಲ್ಲ ಸಂಕಷ್ಟಗಳನ್ನು ಎದೆಗಾರಿಕೆಯಿಂದ ಎದುರಿಸಿ ಹಲವಾರು ತಿಂಗಳುಗಳ ಅವಿರತ ಪರಿಶ್ರಮದಿಂದ ತನ್ನ ಪತಿಯೊಂದಿಗೆ ಹಳ್ಳಿಯನ್ನು ತಲುಪಿದಳು. ನಾವು ಆಕೆಯ ಸ್ಥಿತಿಯಲ್ಲಿದಿದ್ದರೆ ಎಂದೊಮ್ಮೆ ಊಹಿಸಿಕೊಂಡರೆ ಪಲಾಯನವೇ ಗತಿ ಎಂದುಕೊಳ್ಳುತ್ತೇವಲ್ಲವೇ? ಆದರೆ ಕಿಯೊಕೋಳ ಹಾಗೆ ದೊಡ್ಡದನ್ನು ಚಿಕ್ಕ ಚಿಕ್ಕದಾಗಿ ಭಾಗ ಮಾಡಿ ಕಾರ್ಯ ನಿರ್ವಹಿಸಲು ಮುಂದಾದಾಗ ಧೈರ್ಯ ಗಟ್ಟಿಯಾಗುತ್ತದೆ. ಧೈರ್ಯದ ಟಿಸಿಲು ನೂರಾರು ದಿಕ್ಕಿಗೂ ಚಾಚಿಕೊಳ್ಳುತ್ತದೆ.
ಚಿಕ್ಕದನ್ನು ನಿರ್ವಹಿಸುವುದರಲ್ಲಿದೆ ದೊಡ್ಡ ಯಶಸ್ಸು! ಇದರ ಒಳಾರ್ಥವನ್ನು ಇನ್ನಷ್ಟು ತಿಳಿಯೋದಕ್ಕೆ ಮುಂದಕ್ಕೆ ಓದಿ.
ಸಣ್ಣವುಗಳ ಒಟ್ಟು ರಾಶಿ ದೊಡ್ಡದು
ಬಹಳಷ್ಟು ಬಾರಿ ನಮಗೆಲ್ಲ ಅನಿಸೋದು ದೊಡ್ಡ ದೊಡ್ಡ ಕಾರ್ಯಗಳಲ್ಲಿ ಯಶಸ್ವಿಯಾಗಿ ನಿರ್ವಹಿಸುವುದರಲ್ಲಿ ದೊಡ್ಡ ಯಶಸ್ಸು ಅಡಗಿದೆ ಅಂತ. ಸ್ವಲ್ಪ ನಿಧಾನವಾಗಿ ಆಲೋಚಿಸಿದರೆ ದೊಡ್ಡದು ಯಾವುದರಲ್ಲಿ ಅಡಗಿದೆ ಎಂಬುದು ತಿಳಿಯುತ್ತದೆ. ದೊಡ್ಡದು ಮೂಲತಃ ಏನನ್ನು ಒಳಗೊಂಡಿದೆ ಎಂಬುದು ಇಲ್ಲಿ ಮೂಲ ಪ್ರಶ್ನೆ. ತೀರ ಸರಳ ಉತ್ತರವೆಂದರೆ ಚಿಕ್ಕ ಪುಟ್ಟಗಳ ಮೊತ್ತವೇ ದೊಡ್ಡದು.ಇನ್ನೂ ಸರಳವಾಗಿ ಹೇಳಬೇಕೆಂದರೆ ‘ಹನಿ ಹನಿ ಕೂಡಿದರೆ ಹಳ್ಳ ತೆನೆ ತೆನೆ ಕೂಡಿದರೆ ಬಳ್ಳ.’ ಹಾಗೆಯೇ ಸಣ್ಣ ಪುಟ್ಟವುಗಳ ಒಟ್ಟು ರಾಶಿಯೇ ದೊಡ್ಡದು. ಬದುಕಿನ ಚಿಕ್ಕ ಚಿಕ್ಕ ಅಂಶಗಳೇ ನಮ್ಮೆದುರಿಗೆ ನಿಂತು ಸವಾಲು ಹಾಕಿ ಸೆಡ್ಡು ಹೊಡೆಯುತ್ತವೆ. ಹಲವೊಂದು ಸಲ ಚಿಕ್ಕ ವಿಷಯಗಳು ನಮ್ಮ ಮೇಲೆ ದೊಡ್ಡ ಪರಿಣಾಮ ಬೀರುವುದು ನಮ್ಮ ಗಮನಕ್ಕೆ ಬೀಳದೇ ಇರುವುದಿಲ್ಲ. ಚಿಕ್ಕದಾಗಿ ಹೇಳಬೇಕೆಂದರೆ ‘ಸಣ್ಣ ಮುಗ್ಗರಿಸುವಿಕೆಯು ದೊಡ್ಡ ಬೀಳುವಿಕೆಯನ್ನು ತಡೆಯಬಲ್ಲುದು.’
ಅಲಕ್ಷ್ಯ ಸಲ್ಲ
ಬದುಕಿನ ಹೆದ್ದಾರಿಯಲ್ಲಿ ಹೆಗ್ಗುರುತು ಮೂಡಿಸುವ ಭರದಲ್ಲಿ ಸಣ್ಣ ವಿಷಯಗಳ ಮೇಲೆ ಮನಸ್ಸು ನಿಲ್ಲುವುದೇ ಇಲ್ಲ. ಹಿರಿಯರು ಗುರುಗಳು ಹಿತೈಷಿಗಳು ಹೇಳುವ ಸಣ್ಣ ಪುಟ್ಟದನ್ನು ಅಚ್ಚುಕಟ್ಟಾಗಿ ಆಲಿಸುವ ತಾಳ್ಮೆ ತೋರುವುದು ಅಪರೂಪ. ಸಣ್ಣದನ್ನು ನಿರ್ಲಕ್ಷಿಸಿ ತಾವೆಂಥ ದೊಡ್ಡ ತಪ್ಪು ಮಾಡಿದರು ಎನ್ನುವ ವಿಷಯಗಳನ್ನು ಪೋಷಕರು ಹೇಳತೊಡಗಿದರೆ, ‘ಇವ್ರದು ಯಾವಾಗಲೂ ಇದೇ ಕಥೆ ಚಿಕ್ಕದನ್ನೇ ದೊಡ್ಡದಾಗಿ ಹೇಳುತ್ತಾರೆಂದು ಗೊಣಗಿಕೊಳ್ಳುತ್ತೇವೆ. ಒಲ್ಲದ ಮನಸ್ಸಿನಿಂದ ಮುಖಕ್ಕೆ ಮುಖ ಕೊಟ್ಟು ಕುಳಿತುಕೊಳ್ಳುತ್ತೇವೆ. ಆ ಕಿವಿಯಿಂದ ಕೇಳಿ ಈ ಕಿವಿಯಿಂದ ಬಿಟ್ಟರಾಯಿತೆಂದು ಸ್ವಲ್ಪ ಹೊತ್ತು ಕೂತು ಅಲ್ಲಿಂದ ಕಾಲು ಕೀಳುವಲ್ಲಿ ಯಶಸ್ವಿಯಾಗುತ್ತೇವೆ. ಒಮ್ಮೊಮ್ಮೆಯಂತೂ ಅವರು ಹೇಳುವ ಮೊದಲೇ ಇಲ್ಲದ ನೆಪಗಳನ್ನು ಒಡ್ಡಿ ಮೆಲ್ಲನೆ ಜಾರಿಕೊಂಡು ಬಿಡುತ್ತೇವೆ.ಅವರೇಕೆ ನಮ್ಮನ್ನುದ್ದೇಶಿಸಿ ಇದೆಲ್ಲ ಹೇಳುತ್ತಿದ್ದಾರೆ ಎಂದು ಪ್ರಶ್ನಿಸಿಕೊಳ್ಳುವ ವ್ಯವಧಾನವನ್ನೂ ತೋರುವುದಿಲ್ಲ. ಕೆಲವೊಮ್ಮೆ ತೋರಿದರೂ ಅದು ಈಗ ಅಷ್ಟು ಮುಖ್ಯವಲ್ಲ ಎಂದೆನಿಸಿ ಬಿಡುತ್ತದೆ. ಚಿಕ್ಕ ಸಂಗತಿಗಳತ್ತ ಚಿತ್ತ ಹರಿಸುವತ್ತ ವಿಫಲರಾದರೆ ದೊಡ್ಡ ಅನಾಹುತಗಳಿಗೆ ಈಡಾಗುವ ಪ್ರಸಂಗಗಳು ಇಲ್ಲದಿಲ್ಲ. ಹಿರಿಯರು ಹೇಳುವ ಅನುಭವಗಳನ್ನು ಹೀಗೆ ಕೇಳಿಸಿಕೊಂಡು ಹಾಗೆ ಬಿಟ್ಟುಬಿಡದೇ ಇಂದಿನ ದಿನಮಾನಕ್ಕೆ ಹೊಂದಿಕೊಳ್ಳುವಂತೆ ಹೇಗೆ ಈ ಸಂಗತಿಗಳಲ್ಲಿ ನಾವು ಗಮನ ಹರಿಸಬೇಕೆಂದು ಆಲೋಚಿಸಬೇಕು.
ಓಡಬೇಡಿ ಎದುರಿಸಿ
ಕಿಯೊಕೋ ಸಾಹಸಮಯ ಕಥೆಯಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾಳಿನ ಹಡಗು ಇನ್ನೇನು ದಿಢೀರನೇ ಮುಳುಗುತ್ತದೆ ಎನ್ನುವಂಥ ಸಂದರ್ಭದಲ್ಲೂ ತನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟಳು. ಇನ್ನೊಬ್ಬರ ನೆರವಿಗಾಗಿ ಕಾಯಲಿಲ್ಲ. ದೂರವೆನಿಸಿದ ಪಯಣವನ್ನು ಚಿಕ್ಕದಾಗಿ ವಿಭಟಿಸಿ ಪ್ರತಿನಿತ್ಯ ಇಂತಿಷ್ಟು ಪಯಣಿಸಲೇಬೇಕೆಂದು ಛಲದಿಂದ ಗುರಿ ತಲುಪಿದಳು. ಸಂಕಟದ ಸಂದರ್ಭದಲ್ಲಿ ದೊಡ್ಡ ಆಘಾತವೆರಗಿದೆ ಎಂದು ಹೌಹಾರಿದರೆ ಬದುಕು ಕೈ ಮೀರಿ ಹೋಗುತ್ತದೆ. ದೊಡ್ಡದೆನಿಸುವುದನ್ನು ಚಿಕ್ಕ ಚಿಕ್ಕದಾಗಿ ವಿಭಜಿಸಿ ಪ್ರಯತ್ನಕ್ಕೆ ಕೈ ಹಾಕಿದರೆ ದೊಡ್ಡದೆಂದುಕೊಂಡ ಕೆಲಸವೂ ತುಂಬ ಸುಲಭವಾಗಿ ಮುಗಿದು ಹೋಗುತ್ತದೆ. ಇಲ್ಲಿ ಸ್ಪಷ್ಟವಾಗಿ ತಿಳಯಲೇಬೇಕಾದ ಅಂಶವೆಂದರೆ ಚಿಕ್ಕದನ್ನು ಹೇಗೆ ಚೊಕ್ಕವಾಗಿ ನಿರ್ವಹಿಸುತ್ತೇವೆ ಎನ್ನುವುದು ನಮ್ಮ ದೊಡ್ಡ ಯಶಸ್ಸನ್ನು ನಿರ್ಧರಿಸುತ್ತದೆ. ಓಡಬೇಡಿ ಎದುರಿಸಿ ಎನ್ನುವ ಅಮೂಲ್ಯ ಸಂದೇಶವನ್ನು ಆಕೆ ನಮಗೆ ನೀಡುತ್ತಾಳೆ. ಯಶಸ್ಸಿನ ಬಗ್ಗೆ ಯೋಚಿಸುವಾಗೆಲ್ಲ ಚಿಕ್ಕದು ಅಗತ್ಯವೆನಿಸುವುದೇ ಇಲ್ಲ.
ಯಶಸ್ಸಿನ ಉಡುಗೊರೆ
ಇನ್ನೂ ಒಂದು ಹೇಳಬೇಕಾದ ವಿಷಯವೆಂದರೆ ಸಣ್ಣದನ್ನು ನಿರ್ಲಕ್ಷಿಸುವುದು ಒಂದು ದೊಡ್ಡ ರೋಗ. ಜೀವನದಲ್ಲಿ ದೊಡ್ಡದೆನಿಸುವ ಸಾಧನೆ ಮಾಡಿದ ದೊಡ್ಡವರೆಲ್ಲ ಚಿಕ್ಕ ಪುಟ್ಟ ಸಂಗತಿಗಳತ್ತ ಚಿತ್ತ ಹರಿಸುವ ಕಲೆ ಬಲ್ಲವರಾಗಿದ್ದರು. ಅವರಲ್ಲಿ ಸಣ್ಣವುಗಳೆಡೆ ಶಿಸ್ತು ಸಮೃದ್ಧವಾಗಿತ್ತು. ಉದಾಹರಣೆಗೆ ಮುಂಜಾನೆದ್ದು ಒಂದು ಹತ್ತು ಹದಿನೈದು ನಿಮಿಷದ ಸಣ್ಣ ಜಾಗಿಂಗ್ ಉತ್ತಮ ಆರೋಗ್ಯಕ್ಕೆ ನೆರವಾಗಬಲ್ಲದು ಎಂದು ತಿಳಿದು ಅದನ್ನು ನಿತ್ಯ ಪಾಲಿಸುವುದಕ್ಕೆ ಅದೆಷ್ಟು ತೊಡಕುಗಳು ಸಾಲಾಗಿ ನಿಲ್ಲುತ್ತವೆ. ಸಂಕಲ್ಪಕ್ಕೆ ಬದ್ಧವಾಗಿ ತಪ್ಪದಂತೆ ನಡೆದುಕೊಳ್ಳುವುದು ಇಂಥ ಚಿಕ್ಕ ಪುಟ್ಟವುಗಳನ್ನು ನಿರ್ವಹಿಸುವುದರಿಂದಲೇ. ಎಲ್ಲೂ ನಿಲ್ಲದೇ ಓಡುವ ಚಟ ಹತ್ತಿಸಿಕೊಳ್ಳಬಾರದು. ‘ಮಂದಿ ಇಲ್ಲದ ರಾಜ್ಯ ಕಂದನಿಲ್ಲದ ಭಾಗ್ಯ ಬಂಧುವಿಲ್ಲದಾ ಮನೆತನವು ಜಗದೊಳಗೆ ಚೆಂದವೆಲ್ಲಂದ ಸರ್ವಜ್ಞ.’ {ಪ್ರಜೆಗಳಿಲ್ಲದ ರಾಜ್ಯ, ಮಗನಿಲ್ಲದ ಐಶ್ರ‍್ಯ ಆಪ್ತರಿಲ್ಲದ ಮನೆತನವು ಜಗದಲ್ಲಿ ಚೆಂದವಲ್ಲ. ಎನ್ನುತ್ತಾನೆ ಸರ್ವಜ್ಞ. ಅದಕ್ಕೆ ಮತ್ತೊಂದು ಜೋಡಿಸುವುದಾದರೆ, ಚಿಕ್ಕವುಗಳ ಚೊಕ್ಕ ನಿರ್ವಹಣೆ ಇಲ್ಲದೇ ದೊಡ್ಡದು ಶೋಭಿಸದು ಅಂತೆಯೇ ಸಾಧಿಸಲಾಗದು.)ಆಂಗ್ಲ ಗಾದೆಯಂತೆ, ‘ಉರುಳುವ ಕಲ್ಲಿಗೆ ಏನೂ ಅಂಟುವುದಿಲ್ಲ.’ ಸಣ್ಣದನ್ನು ಚೆನ್ನಾಗಿ ಮಾಡುವುದರಲ್ಲೇ ಯಶಸ್ಸಿನ ಉಡುಗೊರೆ ಅಡಗಿದೆ
ಸಣ್ಣ ತೊರೆಗಳು ಮಹಾನ್ ಸಮುದ್ರಗಳಾಗುವಂತೆ ಚಿಕ್ಕದಾದ ಚೊಕ್ಕ ಕೆಲಸಗಳು ಸಹ ಅಂತಿಮವಾಗಿ ದೊಡ್ಡ ಯಶಸ್ಸಿನ ಮಾರ್ಗವನ್ನು ರೂಪಿಸುತ್ತವೆ. ಜೀವನವು ದೊಡ್ಡದಲ್ಲದ ಆವರಣದಿಂದ ದೊಡ್ಡದಾದಷ್ಟು ಸಾಧಿಸುವ ಒಂದು ಕಲೆ. ಆ ಕಲೆಯನ್ನು ಚಿಕ್ಕದರ ಮೂಲಕ ಸಿದ್ಧಿಸಿಕೊಂಡರೆ ದೊಡ್ಡ ಯಶಸ್ಸು ನಮ್ಮೆಡೆ ನಗೆ ಬೀರುತ್ತದೆ.