ಗಣಪ ಹೋದ, ಜೋಕುಮಾರ ಬಂದ!
- ಸಂತೋಷ.ಬಿ.ನವಲಗುAದ
ಯಡ್ರಾಮಿ: ಭಾದ್ರಪದ ಮಾಸದ ಚೌತಿಯಂದು ಗಣಪನ ಹುಟ್ಟು ಆದರೆ, ಇದೇ ಮಾಸದ ಅಷ್ಟಮಿಯಂದು ಜೋಕುಮಾರಸ್ವಾಮಿ ಜನಿಸುತ್ತಾನೆ. ಗಣೇಶನ ಹಬ್ಬ ಧಾರ್ಮಿಕ ಮತ್ತು ರಾಷ್ಟçದ ಐಕ್ಯತೆ, ಸಾರುವಂತಿದ್ದರೆ, ಗ್ರಾಮೀಣ ಭಾಗದ ರೈತಾಪಿ ಜನತೆಯ ಪಾಲಿಗೆ ಸಮೃದ್ಧಿಯ ಮಳೆ-ಬೆಳೆ ತರುವಂತ ಜನಪದ ದೇವರಾಗಿದ್ದಾನೆ ಜೋಕುಮಾರಸ್ವಾಮಿ.
ಉತ್ತರ ಕರ್ನಾಟಕ ಭಾಗದಲ್ಲಿ ಇದೊಂದು ವಿಶಿಷ್ಟತೆಗೆ ಹೆಸರಾದ ಜನಪದ ಹಬ್ಬವೂ ಹೌದು. ಗ್ರಾಮದಲ್ಲಿನ ವಿಶ್ವಕರ್ಮರು ಮಣ್ಣಿನಿಂದ ತಯಾರಿಸಿದ ಜೋಕುಮಾರನನ್ನು ಬೇವಿನ ತಪ್ಪಲಿನ ಹೊದಿಕೆಯೊಂದಿಗೆ ಅಂಬಿಗ, ಕೋಲಿ, ಕಬ್ಬಲಿಗ ಇದೇ ಸಮುದಾಯಕ್ಕೆ ಸಂಬAಧಿಸಿದ ಒಳ ಸಮುದಾಯದ ಹೆಣ್ಣುಮಗಳು ಬಿದರಿನ ಬುಟ್ಟಿಯಲ್ಲಿಟ್ಟು ತಲೆಮೇಲೆ ಹೊತ್ತು ಗ್ರಾಮದ ಚಾವಡಿಕಟ್ಟೆಗೆ ತೆರಳುವಳು. ಅಲ್ಲಿಯೇ ಮೊದಲ ಪೂಜೆ ಮಾಡುವರು. ನಂತರ ಗೌಡರ ಮನೆಗೆ ಕರೆ ತಂದಾಗ ಅಲ್ಲಿ ಜೋಕುಮಾರನ ಬಾಯಿಗೆ ಬೆಣ್ಣೆ ಸವರಿ, ದವಸ ಧಾನ್ಯಗಳು ನೀಡುವರು. ನಂತರ ಗ್ರಾಮದ ರೈತರ ಮನೆಗಳಿಗೆ ತೆರಳಿ ಜೋಕುಮಾರನ ಹೊತ್ತು ತಂದ ಹೆಣ್ಣುಮಗಳು ಜೋಕುಮಾರನ ಜನನ, ಆತನ ಕೀಟಲೆ, ಪುಂಡಾಟಿಕೆ, ಸಾವಿನ ಬಗೆಗೆ ಜಾನಪದ ಸ್ವರೂಪದ ಹಾಡುಗಳನ್ನು ಹಾಡುವ ಮೂಲಕ ಜೋಕುಮಾರನ ಜೀವನ ವೃತ್ತಾಂತವನ್ನೇ ತಿಳಿಸುವಳು. ನಂತರ ಮನೆಯವರು ಜೋಕುಮಾರನ ಬುಟ್ಟಿಯಲ್ಲಿ ಧಾನ್ಯಗಳನ್ನು ಹಾಕುವ ಮೂಲಕ ವರ್ಷದ ಮಳೆ-ಬೆಳೆ ಉತ್ತಮವಾಗಿ ಬರಲಿ ಎಂದು ಭಕ್ತಿಯಿಂದ ಪ್ರಾರ್ಥಿಸುತ್ತಾರೆ.
ಅಡ್ಡಡ್ಡ ಮಳೆ ಬಂದು, ದೊಡ್ಡ ದೊಡ್ಡ ಕೆರೆ ತುಂಬಿ ನನಕುಮಾರ|ಗೊಡ್ಡಗಳೆಲ್ಲ ಹೈನಾಗಿ ಜೋಕುಮಾರ||
ಬಿತ್ತಿದ ಹೊಲದಾಗ ಹೊಕ್ಕು ಚೆಂಡಾಡ್ಯಾನ ನನಕುಮಾರ| ಜೇಷ್ಠಿಯ ಮಗ ಕುಮರಯ್ಯ ಜೋಕುಮಾರ ||
ಈ ರೀತಿಯ ಪದ್ಯಗಳನ್ನು ಹಾಡುವುದರೊಂದಿಗೆ ಜೋಕುಮಾರನನ್ನು ಪೂಜಿಸುತ್ತಾರೆ. ಜೋಕುಮಾರ ಬಂದರೆ ಮಳೆ ತಂದೇ ತರುತ್ತಾನೆ ಹಾಗೂ ಸಮೃದ್ಧಿಯ ಫಸಲು ನೀಡುತ್ತಾನೆಂಬ ಬಲವಾದ ನಂಬಿಕೆ ಈಗಲೂ ರೈತರಲ್ಲಿದೆ. ಕೇವಲ ಏಳು ದಿನ ಮಾತ್ರ ಜೋಕುಮಾರನ ಜೀವಿತಾವಧಿ. ಬದುಕಿದ ಏಳು ದಿನಗಳಲ್ಲಿ ಸ್ತಿçÃಯರನ್ನು ಮೋಹಿಸುತ್ತಾನೆ. ಜೋಕುಮಾರ (ಉಡಾಳ, ಕೀಟಲೆ) ನ ಅತಿಯಾದ ಸ್ತಿçÃವ್ಯಾಮೋಹಿತನಕ್ಕೆ ಬೇಸತ್ತ ಕೇರಿಯ ಹೆಂಗಸರಿAದಲೇ ಸಾವಿಗೀಡಾಗುತ್ತಾನೆ ಎಂಬ ಪೌರಾಣಿಕ ಕಥೆ ತಿಳಿಸುತ್ತದೆ. ಇದಲ್ಲದೇ ಭಿನ್ನ ನೆಲೆಯಲ್ಲಿ ಜೋಕುಮಾರನ ಕಥೆ ನಿರೂಪಿತವಾಗಿದೆ. ಏಳು ದಿನಗಳ ಕಾಲ ಗ್ರಾಮದ ಎಲ್ಲ ಮನೆಗಳಿಗೂ ಜೋಕುಮಾರನನ್ನು ಕರೆದುಕೊಂಡು ಹೋದ ನಂತರ ಕೊನೆಗೆ ಅನಂತನ ಹುಣ್ಣಿಮೆಯಂದು ಮಡಿವಾಳನ ಕಟ್ಟೆಯಲ್ಲಿ ಹೆಂಗಸರೆಲ್ಲ ಸೇರಿ ಒನಕೆಯಿಂದ ಹೊಡೆದು ಜೋಕುಮಾರನ ಅಂತ್ಯ ಹಾಡುವ ವಾಡಿಕೆ ಬೆಳೆದು ಬಂದಿದೆ. ಊರ ಜನರು ನೀಡಿದ ದವಸ ಧಾನ್ಯಗಳಲ್ಲಿ ವಿಶ್ವಕರ್ಮರಿಗೆ ಒಂದು ಪಾಲು ನೀಡಿ, ಉಳಿದ ಧಾನ್ಯಗಳನ್ನು ಚಾಜದ ಮನೆಯವರೆಲ್ಲ ಸೇರಿ ಹಂಚಿಕೊAಡು ನುಚ್ಚು, ಜೋಳದ ಕಡುಬು, ಪುಂಡಿಪಲ್ಯೆ ತಯಾರಿಸಿಕೊಂಡು ಭಕ್ತಿಯಿಂದ ಕೊನೆಯ ನೈವೇದ್ಯ ಅರ್ಪಿಸಿ ಭಕ್ತಿ ಮೆರೆಯುತ್ತಾರೆ.
ಸದ್ಯ ಈ ಜನಪದ ಹಬ್ಬ ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ಕಾಣಲು ಸಾಧ್ಯವಿದೆ ಎನ್ನಬಹುದು. ಹೀಗಾಗಿಯೇ ಗ್ರಾಮೀಣರ ಇಡೀ ಬದುಕು ಜನಪದವಾಗಿಯೇ ಬೆಳೆದು ಬಂದಿದ್ದಕ್ಕೆ ಜೋಕುಮಾರನ ಆಚರಣೆ ಒಂದು ನಿದರ್ಶನವಾಗಿ ಇಂದಿಗೂ ನಿಲ್ಲುತ್ತದೆ.