ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ವಿಧಾನ ಪರಿಷತ್ತಿಗೆ ಆಯ್ಕೆಯಾಗಲು ನಾಲ್ಕು ಅಭ್ಯರ್ಥಿಗಳಿಗೆ ಅವಕಾಶವಿದ್ದು, ಅದರಲ್ಲಿ ಒಂದು ಕ್ಷೇತ್ರವನ್ನು ಪರಿಶಿಷ್ಟ ಕ್ಷೇತ್ರವನ್ನಾಗಿಸಿ ವಿಜಯಪುರದ ಪ್ರೋ.ರಾಜು ಆಲಗೂರ ಅವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆಮಾಡಬೇಕೆಂದು ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ ಕಾಂಗ್ರೆಸ್ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆ ಅಧಿಕಾರ ವಂಚಿತ ಜಿಲ್ಲೆ. ಇದು ಇಲ್ಲಿಯವರೆಗೆ ಯಾವುದೇ ನಾಮನಿರ್ದೇಶನವಾಗಿಲ್ಲ. ಕಾರಣ ಪರಿಶಿಷ್ಟ ಜಾತಿಗೆ ಸ್ಥಾನ ದೊರಕಿಸಿಕೊಡಬೇಕು. ರಾಜು ಆಲಗೂರ ಅವರು ಕಾಲೇಜಿನ ದಿನಗಳಲ್ಲಿಯೇ ದಲಿತ ಸಂಘಟನೆಯನ್ನು ಹುಟ್ಟು ಹಾಕಿ, ಜಿಲ್ಲಾ ಸಂಚಾಲಕರಾಗಿ ಸ್ವಾಭಿಮಾನ ಕಿಚ್ಚನ್ನು ಹುಟ್ಟು ಹಾಕಿದವರು. ೧೯೯೯ರಲ್ಲಿ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿ ಶಾಸಕರಾಗಿ ಸರಕಾರದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಇವರಿಗಿದೆ. ಇಂತಹವರನ್ನು ರಾಜಕೀಯ ಬೆಳವಣಿಗೆಯಲ್ಲಿ ಹತ್ತಿಕ್ಕುವಂತಹ ಕಾರ್ಯ ತೆರೆ ಮರೆಯಲ್ಲಿ ನಡೆದಿದೆ. ಪ್ರಸ್ತುತ ಎಂಎಲ್‌ಎ ಇದ್ದರೂ ೨೦೧೩, ೨೦೧೮ ಮತ್ತು ೨೦೨೩ರಲ್ಲಿ ಟಿಕೆಟ್ ವಂಚಿತರಾಗಿದ್ದರಿಂದ ಜಿಲ್ಲೆಯಲ್ಲಿ ದಲಿತರಿಗೆ ರಾಜಕೀಯ ನೆಲೆ ಇಲ್ಲದಂತಾಗಿದೆ. ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ದೊರೆತರು ಅವರನ್ನು ಗೆಲ್ಲದಂತೆ ಬಲಿಪಶುಮಾಡಲಾಯಿತು. ಕೆಲ ದಲಿತ ನಾಯಕರು ವ್ಯವಸ್ಥಿತ ಕೂಟ ರಚಿಸಿ ಸಮಾಜಕ್ಕೆ ಅನ್ಯಾಯ ಎಸಗಿದ್ದಾರೆ. ಈಗ ಪ್ರೋ.ಆಲಗೂರ ಅವರನ್ನು ಎಂಎಲ್‌ಸಿ ಆಯ್ಕೆಗೆ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಕಾಂತ ಸೋಮಜ್ಯಾಳ, ಶ್ರೀಶೈಲ ಜಾಲವಾದಿ, ಪರಶುರಾಮ ಕಾಂಬಳೆ, ಧರ್ಮ ಯಂಟಮಾನ, ಅಂಬಿಕಾ ಪಾಟೀಲ, ಶರಣಮ್ಮ ನಾಯಕ, ಶಾಂತೂ ರಾಣಾಗೋಳ, ರವಿ ಹೊಳಿ, ಶಿವಾನಂದ ಡೋಣೂರ, ಅಪ್ಪು ಮಾಡ್ಯಾಳ, ನೀಲಕಂಠ ಚಲವಾದಿ, ನವೀನ ಹೊಸಮನಿ, ದತ್ತು ನಾಲ್ಕಮಾನ ಸೇರಿದಂತೆ ಇತರರು ಇದ್ದರು.