ಬೂದಿಹಾಳ ಏತ ನೀರಾವರಿ ಯೋಜನೆ | ಕ್ರಿಯಾಶೀಲ ವೇದಿಕೆ ವತಿಯಿಂದ ಡಿಸಿಎಂ ಡಿ.ಕೆ.ಶಿವಕುಮಾರ ಗೆ ಮನವಿ
ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಪೀರಾಪೂರ – ಬೂದಿಹಾಳ ಏತ ನೀರಾವರಿ ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ತಾಳಿಕೋಟಿ ತಾಲೂಕಿನ ಪೀರಾಪೂರ ಬೂದಿಹಾಳ ಏತ ನೀರಾವರಿ ಯೋಜನೆ ಕ್ರಿಯಾಶೀಲ ವೇದಿಕೆ ವತಿಯಿಂದ ನೀರಾವರಿ ಸಚಿವ ಡಿ.ಕೆ.ಶಿವಕುಮಾರ ಅವರಿಗೆ ಬೆಂಗಳೂರಿನಲ್ಲಿ ಬುಧವಾರ ಮನವಿ ಅರ್ಪಿಸಿದರು.
ಈ ಯೋಜನೆಗಾಗಿ ಸರಕಾರ ಈಗಾಗಲೇ ಸುಮಾರು ರೂ. ೮೦೦ ಕೋಟಿಯಷ್ಟು ದುಡ್ಡು ವ್ಯಯ ಮಾಡಿದೆಯಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಇನ್ನೂ ಕೇವಲ ಹೊಲಗಾಲುವೆಯ ೧೦ ಪ್ರತಿಶತ ಕೆಲಸ ಮಾತ್ರ ಬಾಕಿ ಇದ್ದು, ಈ ಕಾಮಗಾರಿಯನ್ನು ಇದೇ ಬೇಸಿಗೆಯಲ್ಲಿ ತ್ವರಿತಗತಿಯಲ್ಲಿ ಮಾಡಿಕೊಡಬೇಕು ಮತ್ತು ಇನ್ನೂ ಕೇವಲ ರೂ.೧೭೦ ರಿಂದ ರೂ.೨೦೦ ಕೋಟಿಯಷ್ಟು ಹಣಕಾಸು ಮಂಜೂರು ಮಾಡಿಕೊಟ್ಟರೆ ಈ ಭಾಗದ ೫೦೬೦೭ ಎಕರೆ ಕೃಷಿ ಭೂಮಿ ನೀರಾವರಿಗೆ ಒಳಪಡುತ್ತದೆ ಎಂದು ಮನವಿ ಮಾಡಲಾಯಿತು.
ಈಗಾಗಲೇ ಈ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಶೋಚನೀಯವಾಗಿದ್ದು. ಹಳ್ಳಿಗಳ ಜನರು ಬೆಂಗಳೂರು, ಬಾಂಬೆ, ಗೋವಾ, ಪುನಾ, ರತ್ನಾಗಿರಿ, ಪಣಜಿ, ಕರಾಡಗಳಿಗೆ ಕೆಲಸಕ್ಕೆ ಗುಳೆ ಹೋಗುತ್ತಿದ್ದಾರೆ. ಈ ಯೋಜನೆ ಪರಿಪೂರ್ಣ ಅನುಷ್ಠಾನವಾದಲ್ಲಿ ಈ ಭಾಗದ ೩೮ ಹಳ್ಳಿಗಳಲ್ಲಿ ೨ ಲಕ್ಷ ಕೃಷಿ ಜೊತೆಗೆ ಕೃಷಿ ಪೂರಕ ಉದ್ಯೋಗ ಸೃಷ್ಟಿಯಾಗುತ್ತವೆ. ಕನಿಷ್ಠ ೩೫೦ ಕೋಟಿಯಿಂದ ೪೫೦ ಕೋಟಿ ಅಂದಾಜು ಕೃಷಿ ಉತ್ಪನ್ನ ಮಾರುಕಟ್ಟೆಗೆ ಬರುತ್ತದೆ. ಆದ್ದರಿಂದ ತ್ವರಿತಗತಿಯಲ್ಲಿ ಸರಕಾರ ಈ ಯೋಜನೆ ಪರಿಪೂರ್ಣ ಮಾಡಿಕೊಟ್ಟರೆ ಈ ೩೮ ಹಳ್ಳಿಗಳು ಆರ್ಥಿಕವಾಗಿ ಸಬಲೀಕರಣ ಹೊಂದಲು ಅನುವು ಮಾಡಿ ಕೊಟ್ಟಂತಾಗುತ್ತದೆ ಎಂದು ವಿನಂತಿಸಿದರು.
ಈ ವೇಳೆ ಪ್ರಮುಖರಾದ ಪ್ರಭುಗೌಡ ಬಿರಾದಾರ ಅಸ್ಕಿ, ಹನುಮಗೌಡ ಎನ್.ಬಿರಾದಾರ, ಕಾಶೀನಾಥ ಎಂ.ತಳವಾರ, ಮಲ್ಲಣ್ಣ ಕೆ.ಹಿರೇಕುರುಬರ, ಸಂಗನಗೌಡ ಚ.ನಾಗರೆಡ್ಡಿ, ಮಹಾದೇವ ಕೆ. ವಾಲೀಕಾರ, ಸಿದ್ದನಗೌಡ ಎನ್.ಬಿರಾದಾರ, ರುದ್ರುಗೌಡ ಎಸ್. ಬಿರಾದಾರ, ಶಿವಪುತ್ರ ಚೌದ್ರಿ ನೀರಲಗಿ, ಗುರುರಾಜ ಎಂ.ಪಡಶೆಟ್ಟಿ ಸೇರಿದಂತೆ ಇತರರು ಇದ್ದರು.