ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಅವಿಮುಕ್ತ ಕ್ಷೇತ್ರ ಯರನಾಳ ಗ್ರಾಮದ ಸಂಸ್ಥಾನ ವಿರಕ್ತಮಠದ ಕರ್ತೃ ಜಗದ್ಗುರು ಲಿಂ.ಪಂಪಾಪತಿ ಶಿವಯೋಗಿಗಳ ಜಾತ್ರಾಮಹೋತ್ಸವದಂಗವಾಗಿ ಗುರುವಾರ ಶ್ರೀಮಠದ ಗುರುಸಂಗನಬಸವ ಸ್ವಾಮೀಜಿಯವರ ಪಾದಪೂಜಾ ನೆರವೇರಿದ ನಂತರ ಸಿಂಹಾಸನಾರೋಹಣ ಕಿರೀಟಧಾರಣೆ ಭಕ್ತರ ಜಯಘೋಷದೊಂದಿಗೆ ಜರುಗಿತು.
ಈ ವೇಳೆ ಶ್ರೀಮಠದ ಗುರುಸಂಗನಬಸವ ಸ್ವಾಮೀಜಿ ಮಾತನಾಡಿ, ಯರನಾಳ ವಿರಕ್ತಮಠವು ಸದಾ ಕಾಲ ಭಕ್ತರೊಂದಿಗೆ ಇದ್ದುಕೊಂಡು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕಾರ್ಯ ಮಾಡುತ್ತಾ ಬಂದಿದೆ. ಶ್ರೀಮಠದ ಪಂಪಾಪತಿ ಶಿವಯೋಗಿಗಳು, ದಯಾನಂದ ಸ್ವಾಮೀಜಿ, ಬಾಲಲೀಲಾ ಮಹಾಂತ ಶಿವಯೋಗಿಗಳು, ಬಂಥನಾಳದ ಸಂಗನಬಸವ ಶಿವಯೋಗಿಗಳ ಸನ್ಮಾರ್ಗದಲ್ಲಿ ನಾವು ನಡೆಯುತ್ತಿದ್ದು. ಶ್ರೀಮಠವು ಸದಾ ಬಡವರ ಸೇವೆ, ಭಕ್ತರೊಂದಿಗೆ ಇದೆ ಎಂದರು.
ಜಮಖಂಡಿ ಓಲೇಮಠದ ಆನಂದ ದೇವರು ಮಾತನಾಡಿ, ಪ್ರತಿಯೊಬ್ಬರೂ ಉತ್ತಮ ಜೀವನ ತಮ್ಮದಾಗಿಸಿಕೊಳ್ಳಬೇಕು. ಸಂಸಾರದಲ್ಲಿ ನಡೆಯುವ ಸಣ್ಣಪುಟ್ಟ ಜಗಳ ಎಂದಿಗೂ ಬೀದಿ ಬಾರದಂತೆ ನೋಡಿಕೊಳ್ಳಬೇಕು. ಶ್ರೀಮಠವು ಆದರ್ಶ ದಂಪತಿಗಳನ್ನು ಗುರುತಿಸಿ ಸನ್ಮಾನಿಸುತ್ತಿರುವದು ಶ್ಲಾಘನೀಯ ಎಂದರು.
ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ, ಹೂವಿನಹಿಪ್ಪರಗಿಯ ದ್ರಾಕ್ಷಾಯಣಿ ಅಮ್ಮನವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಆಳಂದದ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಣ್ಣೂರಿನ ಸಂಗಯ್ಯ ಹಿರೇಮಠ ಇತರರು ಇದ್ದರು. ಕಾರ್ಯಕ್ರಮದಲ್ಲಿ ಕೆರಕಲಮಟ್ಟಿಯ ಭೀಮಪ್ಪ ತಳವಾರ, ಧಾರವಾಡದ ರಮೇಶ ಕೆಂಭಾವಿ, ಬಸವನಬಾಗೇವಾಡಿಯ ಶರಣಪ್ಪ ಬೆಲ್ಲದ ದಂಪತಿಗಳನ್ನು ಆದರ್ಶ ದಂಪತಿಗಳೆಂದು ಶ್ರೀಮಠದಿಂದ ಸನ್ಮಾನಿಸಲಾಯಿತು.
ಬಸವರಾಜ ಜಾಲಗೇರಿ ಸ್ವಾಗತಿಸಿದರು. ಸಾಹಿತಿ,ಶಿಕ್ಷಕಿ ಗಿರಿಜಾ ಪಾಟೀಲ ನಿರೂಪಿಸಿದರು.