ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸನಾತನ ಧರ್ಮದಲ್ಲಿ ಗುರುವಿಗೆ ಶ್ರೇಷ್ಠ ಸ್ಥಾನವಿದೆ. ಗುರುವಿನ ನಡೆ, ನುಡಿ, ಆಚಾರ, ವಿಚಾರ ಬಹಳ ದೊಡ್ಡದು. ತ್ರಿವಿಧ ದಾಸೋಹದ ಮೂಲಕ ನಾಡಿನ ಜ್ಞಾನದೀಪವಾಗಿ ಬೆಳಗಿದ ಪುಣ್ಯ ಸಂತರು ನಡೆದಾಡಿದ ದೇವರು ಡಾ. ಶ್ರೀ ಶಿವಕುಮಾರ ಸ್ವಾಮಿಗಳು ಎಂದು ಡಾ. ವಿ.ಡಿ. ಐಹೊಳ್ಳಿ ಹೇಳಿದರು.
ನಗರದ ವೀರಶೈವ ಲಿಂಗಾಯತ ಸಾಂಸ್ಕೃತಿಕ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಶಿವಾನುಭವ ಗೋಷ್ಠಿಯಲ್ಲಿ ಪೂಜ್ಯ ಡಾ. ಶಿವಕುಮಾರ ಸ್ವಾಮಿಗಳ ಬದುಕು ಕುರಿತು ಮಾತನಾಡಿದ ಅವರು ಪೂಜ್ಯರು ಜೀವನದ ಯಾವುದೇ ಹಂತದಲ್ಲಿದ್ದರೂ ತಮ್ಮ ಸತ್ಯ, ನಿಷ್ಠೆ, ಶ್ರದ್ದೆಯನ್ನು ಬಿಟ್ಟವರಲ್ಲ ಅವರು ಹೆಜ್ಜೆ ಇಟ್ಟ ಪ್ರತಿ ಜಾಗವನ್ನು ಪಾವನ ಮಾಡಿದ ಪುಣ್ಯ ಪುರುಷ ನಿಜವಾದ ಸಂತರು. ಡಾ. ಶಿವಕುಮಾರ ಮಹಾಶಿವಯೋಗಿಗಳು ನಾವು ಅವರ ವಿಚಾರಗಳನ್ನು ಮೆಲಕು ಹಾಕಿ ಗುರುವಿನ ತೇಜಸ್ಸನ್ನು ನಮ್ಮ ಬದುಕಿಗೆ ಅರ್ಪಿಸಿಕೊಳ್ಳಬೇಕಾಗಿದೆ ಎಂದರು.
ನಿರ್ದೇಶಕ ಎಂ.ಎಂ. ಅವರಾದಿ ಮಾತನಾಡಿ, ಬಸವಣ್ಣನವರ ತತ್ವಾದರ್ಶಗಳನ್ನು ಕಾಯಾ,ವಾಚಾ,ಮನಸಾ ಪಾಲಿಸಿದವರು ಪೂಜ್ಯ ಸಿದ್ಧಗಂಗಾ ಶ್ರೀಗಳು ಎಂದರು.
ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ, ದೇಶದ ಸಂಸ್ಕೃತಿಯನ್ನು ಜನಮನದಲ್ಲಿ ಬಿತ್ತಲು ಮಠಾಧೀಶರು ಮುಂದಾಗಿದ್ದರು. ಸಮಾಜದ ಸುಧಾರಣೆ ಶೈಕ್ಷಣಿಕ ಏಳ್ಗೆಗಾಗಿ ಮನಸ್ಸನ್ನು ಹೊಂದುವ ಕಾರ್ಯ ಮಠಗಳು ಮಾಡಿದವು. ಅದರಲ್ಲಿ ತುಮಕೂರು ಸಿದ್ಧಗಂಗಾ ಮಠ ಮೊದಲು. ಅನ್ನ, ಅಕ್ಷರ, ಆಶ್ರಯದ ಮೂಲಕ ಬಡ ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಬಿತ್ತುವ ಕಾರ್ಯ ಮಾಡಿದವು. ಮಠದ ಕಾರ್ಯಚಟುವಟಿಕೆಯೇ ಮಾದರಿ ಎಂದರು.
ಪ್ರದಾನ ಕಾರ್ಯದರ್ಶಿ ಬಿ.ಟಿ. ಈಶ್ವರಗೊಂಡ ಸ್ವಾಗತಿಸಿದರು. ಕೋಶಾಧ್ಯಕ್ಷ ಎಂ.ಜಿ. ಯಾದವಾದ ವಂದಿಸಿದರು. ಸಾಹಿತಿ ಸಂಗಮೇಶ ಬದಾಮಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸಹದೇವ ನಾಡಗೌಡರ, ಗುರುಲಿಂಗಪ್ಪ ಬಿರಾದಾರ, ಡಾ. ರಮೇಶ ತೇಲಿ, ಬಿ.ಡಿ. ಪಟ್ಟಣಶೆಟ್ಟಿ, ಶ್ರೀಮತಿ ಶಾರದಾ ಕೊಪ್ಪ, ಭೀಮಣ್ಣ ಭಜಂತ್ರಿ, ರವೀಂದ್ರ ಬ್ಯಾಕೋಡ, ಮಲ್ಲಿಕಾರ್ಜುನ ಅಮರಣ್ಣವರ, ಮಹಾದೇವ ಹಾಲಳ್ಳಿ, ಎಸ್.ಎನ್. ಶಿವಣಗಿ, ಡಾ. ಸಂಗಮೇಶ ಮೇತ್ರಿ, ವಿಠ್ಠಲ ತೇಲಿ, ಜಗದೀಶ ಮೋಟಗಿ, ಚಿದಾನಂದ ಪೋಳ ಉಪಸ್ಥಿತರಿದ್ದರು.

