ಬಿ.ಎಸ್.ಯಡಿಯೂರಪ್ಪ ಪ್ರತಿಕೃತಿ ದಹನ | ಪಂಚಮಸಾಲಿ ಸಮುದಾಯದ ಆಕ್ರೋಶ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಬಿಜೆಪಿ ಧುರೀಣ ಬಸನಗೌಡ ಪಾಟೀಲ(ಯತ್ನಾಳ) ಅವರನ್ನು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿದ ಕ್ರಮ ಖಂಡನೀಯ ಎಂದು ಕೋರವಾರ ಗ್ರಾಮದ ಪಂಚಮಸಾಲಿ ಸಮುದಾಯದ ಧುರೀಣ ಬಾಪುಗೌಡ ಬಿರಾದಾರ ಹೇಳಿದರು.
ತಾಲ್ಲೂಕಿನ ಕೋರವಾರ ಗ್ರಾಮದಲ್ಲಿ ಗುರುವಾರ ಜರುಗಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ವಿಜಯಪುರ ನಗರ ಕ್ಷೇತ್ರ ಶಾಸಕ ಬಸನಗೌಡ ಪಾಟೀಲ(ಯತ್ನಾಳ) ಅವರನ್ನು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿದ ಕ್ರಮ ತಪ್ಪು. ಇದರ ಪರಿಣಾಮ ಬಿಜೆಪಿಗೆ ಮುಂದಿನ ದಿನಗಳಲ್ಲಿ ಬರುವ ತಾಲ್ಲೂಕು, ಜಿಲ್ಲಾ, ವಿಧಾನಸಭೆ, ಲೋಕಸಭೆಯ ಚುನಾವಣೆಗಳಲ್ಲಿ ಗೊತ್ತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಸಮುದಾಯದ ಯುವಕರು ಉಚ್ಚಾಟನೆಗೆ ಕಾರಣರಾದ ಬಿ.ಎಸ್.ಯಡಿಯೂರಪ್ಪ ಅವರ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಭೀಮನಗೌಡ ಕುಳೇಕುಮಟಗಿ, ಅಪ್ಪುಗೌಡ ಪೊಲೀಸ್‌ಪಾಟೀಲ, ಮಾಂತಗೌಡ ಪಾಟೀಲ, ರಾಜುಗೌಡ ಬಿರಾದಾರ, ಮಹೇಶ ಬಿರಾದಾರ, ನಿಂಗಣ್ಣ ಕೊಟ್ಟಗಿ, ಬಸು ಬಾದೊಡ್ಗಿ, ಗೌಡು ಬುಳ್ಳಾ, ಮಲ್ಲು ಬಿರಾದಾರ, ಹಣಮಂತ ನಾಗರಾಳ ಕಾಸು ಸುಂಬಡ, ಬಸು ನೆಲ್ಲಗಿ ಇದ್ದರು.

