ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಿಕೋಟಾ ತಾಲ್ಲೂಕಿನ ಕೋಟ್ಯಾಳ ಗ್ರಾಮದ ಸರ್ಕಾರಿ ಶಾಲೆಯ ನೂತನ, ಸುಸಜ್ಜಿತ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದ್ದು ಗ್ರಾಮಸ್ತರಲ್ಲಿ ಸಂತಸ ತರಿಸಿದೆ.
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಫೌಂಡೇಶನ್ ನ ಸಿಎಸ್ಆರ್ ಅನುದಾನದಡಿ, ಸುಮಾರು ₹3.25 ಕೋಟಿ ವೆಚ್ಚದಲ್ಲಿ 7,000 ಚದರ ಅಡಿ ವಿಸ್ತೀರ್ಣದ ಅತ್ಯಾಧುನಿಕ ಹಾಗೂ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಿಸಲಾಗಿದೆ. ಜೊತೆಗೆ, 800 ಚದರ ಅಡಿ ವಿಸ್ತೀರ್ಣದ ಹಳೆಯ ಶಾಲಾ ಕಟ್ಟಡಕ್ಕೂ ಪುನಶ್ಚೇತನ ನೀಡಿ, ಸಂಪೂರ್ಣ ಶೈಕ್ಷಣಿಕ ಆವರಣವನ್ನು ಆಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ.
ಶಾಲೆಯಲ್ಲಿ 1 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸುಸಜ್ಜಿತ ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ. ಮಕ್ಕಳಲ್ಲಿ ನಾವೀನ್ಯತೆ ಮತ್ತು ಚಟುವಟಿಕೆ ಆಧಾರಿತ ಕಲಿಕೆಯನ್ನು ಪ್ರೋತ್ಸಾಹಿಸಲು ಸ್ಟೇಮ್’ಲ್ಯಾಬ್ ಹಾಗೂ ‘ನಲಿ-ಕಲಿ’ ಕೊಠಡಿಗಳನ್ನು ವಿಶೇಷವಾಗಿ ಸ್ಥಾಪಿಸಲಾಗಿದೆ.
ವಿದ್ಯಾರ್ಥಿಗಳ ಸುಲಭ ಕಲಿಕೆಗೆ ಪೂರಕವಾಗಿ 135 ಹೊಸ ಪೀಠೋಪಕರಣಗಳು, ಬಾಲಕ ಮತ್ತು ಬಾಲಕಿಯರಿಗಾಗಿ ಪ್ರತ್ಯೇಕ 10 ಸುಸಜ್ಜಿತ ಶೌಚಾಲಯ ಸೇರಿದಂತೆ ಆಧುನಿಕ ಸೌಲಭ್ಯವುಳ್ಳ ಅಡುಗೆ ಕೊಠಡಿ ಹಾಗೂ ವಿಶಾಲವಾದ ಊಟದ ಸಭಾಂಗಣವನ್ನು ಇಲ್ಲಿ ನಿರ್ಮಿಸಲಾಗಿದೆ.
ಕೋಟ್ಯಾಳದಲ್ಲಿಯೇ ಸುಸಜ್ಜಿತ ಶಾಲೆಯಾಗಿರುವುದರಿಂದ ಮಕ್ಕಳು ತಿಕೋಟಾಗೆ ಹೋಗಿ ಶಿಕ್ಷಣ ಪಡೆಯುವುದು ತಪ್ಪಲಿದೆ.
ಗ್ರಾಮೀಣ ಭಾಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಲಿ ಎಂಬ ಆಶಯದೊಂದಿಗೆ ನಿರ್ಮಿಸಲಾದ ಈ ಶಾಲೆ, ಸರ್ಕಾರಿ ಶಾಲೆಗಳ ಬಗ್ಗೆ ಹೊಸ ವಿಶ್ವಾಸ ಮೂಡಿಸಿ, ಮಕ್ಕಳ ಕನಸುಗಳಿಗೆ ಹೊಸ ರೆಕ್ಕೆ ನೀಡಲಿದೆ.
ನೂತನ ಶಾಲಾ ಕಟ್ಟಡವನ್ನು ಕಂಡ ಮಕ್ಕಳ ಕಣ್ಗಳಲ್ಲಿ ಮೂಡಿದ ಸಂತಸ ಮತ್ತು ಉತ್ಸಾಹ, ಈ ಯೋಜನೆಯ ಯಶಸ್ಸಿಗೆ ಜೀವಂತ ಸಾಕ್ಷಿಯಾಯಿತು.

