ಹುಲ್ಯಾಳ ಗ್ರಾಮದಲ್ಲಿ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಶಿಸ್ತು ಮತ್ತು ಶಿಕ್ಷಣ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಉನ್ನತ ಶಿಕ್ಷಣ ಪಡೆಯುವ ಮೂಲಕ ಸಮಾಜ ಹಾಗೂ ಶಿಕ್ಷಣ ಸಂಸ್ಥೆ ಹಿರಿಮೆ ಹೆಚ್ಚಿಸಬೇಕೆಂದು ಹುಲ್ಕಾಳ ಗ್ರಾಮದ ಪಿಕೆಪಿಎಸ್ ನಿರ್ದೇಶಕ ಮಂಜುನಾಥ ಗಲಗಲಿ ಹೇಳಿದರು.
ತಾಲೂಕಿನ ಹುಲ್ಯಾಳ ಗ್ರಾಮದ ಕಾಡಸಿದ್ದೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಏಳನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಧುನಿಕ ತಂತ್ರಜ್ಞಾನ ಯುಗದಲ್ಲಿ ಕಾಲಮಾನಕ್ಕೆ ತಕ್ಕಂತೆ ನಮ್ಮ ಜೀವನ ಕ್ರಮವನ್ನು ಕೂಡ ಪರಿವರ್ತಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಮಕ್ಕಳಿಗೆ ತಿಳಿಹೇಳಿದರು.
ಸಾಹಿತಿ, ನಿವೃತ್ತ ಶಿಕ್ಷಕ ಗುರುನಾಥ ಸುತಾರ ಮಾತನಾಡಿ, ಪಠ್ಯದೊಂದಿಗೆ ಪಠ್ಯತರ ಚಟುವಟಿಕೆಯಲ್ಲಿ ಮಕ್ಕಳು ಕ್ರಿಯಾಶೀಲರಾಗುವ ಮೂಲಕ ಗುರುಹಿರಿಯರನ್ನು ಗೌರವದಿಂದ ಕಾಣಬೇಕು ಎಂದರು.
ಸಂಸ್ಥೆ ಅಧ್ಯಕ್ಷ ಮಲ್ಲಪ್ಪ ತುಬಚಿ, ಸದಸ್ಯರಾದ ಪರಪ್ಪ ನೀಲವಾಣಿ, ಹಣಮಂತ ಮಂಡಗಣಿ, ಉಮೇಶ ಕೋರಿ, ಶ್ರೀಶೈಲ ಪೂಜಾರ, ನಿಂಗಪ್ಪ ದಬಾಳಿ, ಜೆ ಟಿ ಆಲಗುಂಡಿ, ಮುಖ್ಯಗುರು ಎಸ್.ಎಸ್. ಹೂಲಿಹಾಳ ಉಪಸ್ಥಿತರಿದ್ದರು.
ಶಿಕ್ಷಕ ಸಿ.ಎನ್.ಛಲವಾದಿ ಸ್ವಾಗತಿಸಿದರು. ಜಿ.ಎಸ್.ಪಡಸಲಗಿ ನಿರೂಪಿಸಿದರು. ಐ. ಆರ್. ಹುಣಸ್ಕಾಳ ವಂದಿಸಿದರು.

