ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಜಾಯವಾಡಗಿ ಗ್ರಾಮದ ಆರಾಧ್ಯ ದೈವ ಸೋಮನಾಥೇಶ್ವರ, ಶಿವಪ್ಪ ಮುತ್ಯಾರ ಜಾತ್ರೆಯು ಮಾ.27 ರಿಂದ ಏ.3 ರವರೆಗೆ ನಡೆಯಲಿದೆ. ಜಾತ್ರೆಯ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಮಾ.27 ರಂದು ಪಲ್ಲಕ್ಕಿಯು ಗಂಗಸ್ಥಳಕ್ಕೆ ಹೋಗುವದು, ಮಾ.28 ರಂದು ವಿವಿಧ ವಾದ್ಯಗಳೊಂದಿಗೆ ಪಲ್ಲಕ್ಕಿಯನ್ನು ಜಾಯವಾಡಗಿ ಗ್ರಾಮಕ್ಕೆ ಬರಮಾಡಿಕೊಳ್ಳಲಾಗುವುದು. ರಾತ್ರಿ 10-30 ಗಂಟೆಗೆ ಜಾಯವಾಡಗಿ, ಬ್ಯಾಕೋಡ, ಕಾನ್ನಾಳ, ಸೋಲವಾಡಗಿ, ಅಗಸಬಾಳ, ಕಾಜಿಅಗಸಬಾಳ ಹಾಗೂ ಪಡೇಕನೂರ ಗ್ರಾಮಗಳ ಭಜನಾ ಮಂಡಳಿ ಹಾಗೂ ಭಕ್ತರಿಂದ ಶಿವಭಜನೆ ನಡೆಯುವುದು.
ಮಾ.29 ರಂದು ಕಾನ್ನಾಳ ಗ್ರಾಮದ ಸಜ್ಜನ ಬಂಧುಗಳು ಹಾಗೂ ಗ್ರಾಮದ ಭಕ್ತರೊಂದಿಗೆ ಕಳಸ, ಜಾಯವಾಡಗಿ ಗ್ರಾಮಸ್ಥರಿಂದ ಪಲ್ಲಕ್ಕಿಯು ವಿವಿಧ ವಾದ್ಯಗಳೊಂದಿಗೆ ದೇವಸ್ಥಾನಕ್ಕೆ ಆಗಮಿಸುವುದು. ಮಧ್ಯಾಹ್ನ 12 ಗಂಟೆಗೆ ಕಳಸವು ಶಿಖರಕ್ಕೆರುವುದು. ರಾತ್ರಿ 10-30 ಗಂಟೆಗೆ ನಾಟಕ ಪ್ರದರ್ಶನಗೊಳ್ಳಲಿದೆ.
ಮಾ.30 ರಂದು ಬೆಳಗ್ಗೆ ತೇರಿಗೆ ಅಲಂಕಾರ ನಡೆಯುವುದು. ನಂತರ ಬ್ಯಾಕೋಡ ಗ್ರಾಮಸ್ಥರು ತೆಗೆದುಕೊಂಡು ಬರುವ ಕಳಸ ಏರಿಸುವುದು, ಸೋಲವಾಡಗಿ ಗ್ರಾಮಸ್ಥರು ರಥದ ಮಿಣಿ, ಅಗಸಬಾಳ ಗ್ರಾಮಸ್ಥರು ರಥದ ಬೆಳ್ಳಿ ಛತ್ರಿ, ಚಾಮರದೊಂದಿಗೆ ದೇವಸ್ಥಾನಕ್ಕೆ ಆಗಮಿಸುವರು. ಸಂಜೆ 5 ಗಂಟೆಗೆ ಶ್ರೀಗಳ ನೇತೃತ್ವದಲ್ಲಿ ರಥಕ್ಕೆ ಪೂಜೆ ಸಲ್ಲಿಸಿದ ನಂತರ ರಥೋತ್ಸವ ನಡೆಯುವುದು. ರಾತ್ರಿ 10-30 ಗಂಟೆಗೆ ಅಜಾತ ನಾಗಲಿಂಗೇಶ್ವರ ಮಹಾತ್ಮೆ ನಾಟಕ ಪ್ರದರ್ಶನಗೊಳ್ಳುವುದು.
ಮಾ.31 ರಂದು ದನಗಳ ಜಾತ್ರೆ ಹಾಗೂ ಮಾರಾಟಕ್ಕೆ ಚಾಲನೆ ನೀಡಲಾಗುವುದು. ಬೆಳಿಗ್ಗೆ 8-30 ಗಂಟೆಗೆ ಭಾರವಾದ ಚೀಲ ಎತ್ತುವ ಸ್ಪರ್ಧೆ, 9-30 ಗಂಟೆಗೆ ಭಾರವಾದ ಚೀಲ ಸಾಗ ಹೊತ್ತುಕೊಂಡು ಹೋಗುವ ಸ್ಪರ್ಧೆ ನಡೆಯುವುದು. ರಾತ್ರಿ 10-30 ಗಂಟೆಗೆ ಅಣ್ಣ ಕೊಟ್ಟ ಮಾಂಗಲ್ಯ ನಾಟಕ ಪ್ರದರ್ಶನಗೊಳ್ಳಲಿದೆ.
ಏ.1 ರಂದು ವಡವಡಗಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯುವುದು. ಭಾರವಾದ ಗುಂಡು ಎತ್ತುವುದು, ಸಂಗ್ರಾಣಿ ಕಲ್ಲು ಸಾಗ ಎತ್ತುವುದು, ಸಂಗ್ರಾಣಿ ಕಲ್ಲು ಮೇಲೆ ಒತಗಲ್ಲ ಸ್ಪರ್ಧೆ ನಡೆಯುವುದು. ರಾತ್ರಿ 10-30 ಗಂಟೆಗೆ ಶಿವಶರಣೆ ಹೆಮರಡ್ಡಿ ಮಲ್ಲಮ್ಮ ಮಹಾತ್ಮೆ ನಾಟಕ ಪ್ರದರ್ಶನಗೊಳ್ಳುವುದು.
ಏ.2 ರಂದು ಮಧ್ಯಾಹ್ನ 3 ಗಂಟೆಗೆ ಜಂಗೀ ಕುಸ್ತಿ ಜರುಗುವುದು. ರಾತ್ರಿ 10-30 ಗಂಟೆಗೆ ವಾದಿ ಪ್ರತಿವಾದಿ ಗೀ ಗೀ ಪದಗಳ ಕಾರ್ಯಕ್ರಮ ನಡೆಯುವುದು. ಏ.3 ರಂದು ಸಂಜೆ 5 ಗಂಟೆಗೆ ಕಳಸ ಇಳಿಸುವುದು. ಪಲ್ಲಕ್ಕಿ, ಕಳಸ ರಥದ ಮಿಣಿ, ಛತ್ರಿ ಚಾಮರ ತಮ್ಮ ತಮ್ಮ ಸ್ವಗ್ರಾಮಗಳಿಗೆ ತೆರಳುವವು. ಜಾತ್ರೆಗೆ ಬರುವ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ ಎಂದು ದೇವಸ್ಥಾನ ಟ್ರಸ್ಟ್ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

