ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಜಾನಪದ, ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದು ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.
ತಾಲೂಕಿನ ನಾಗೂರ ಗ್ರಾಮದಲ್ಲಿ ಆಯೋಜಿಸಿದ್ದ ಉತ್ತರ ಕರ್ನಾಟಕ ಯೂಟ್ಯೂಬ್ ಹಾಸ್ಯ ಕಲಾವಿದ ದಿ.ಬಸಯ್ಯ ಹಿರೇಮಠರ ಸ್ಮರಣೆ ಹಾಗೂ ಗುರುನಮನ ಕಾರ್ಯಕ್ರಮದಲ್ಲಿ ಅತಿಥಿ ಸ್ಥಾನ ವಹಿಸಿ ಮಾತನಾಡಿದ ಅವರು,
ಕರ್ನಾಟಕವು ಸಾಂಸ್ಕೃತಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ರಾಜ್ಯದಲ್ಲಿ ಬಸವನಬಾಗೇವಾಡಿ ತಾಲೂಕು ಜಾನಪದ ಸೇರಿದಂತೆ ವಿವಿಧ ಕಲಾಕ್ಷೇತ್ರಗಳಿಗೆ ಹಲವು ಕೊಡುಗೆ ನೀಡಿದೆ. ಇಲ್ಲಿ ಕಲೆಯ ಆರಾಧಕರು ಇದ್ದಾರೆ. ಸ್ಥಳೀಯ ಕಲಾವಿದರಿಗೆ ಮಾನ್ಯತೆ ನೀಡಿ ಸಹಕಾರ ಕೊಟ್ಟರೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಮುಖಂಡರಾದ ಸಂಗನಗೌಡ ಚಿಕ್ಕೊಂಡ, ಪುರಸಭೆ ಮಾಜಿ ಅಧ್ಯಕ್ಷ ಜಗದೀಶ ಕೊಟ್ರಶೆಟ್ಟಿ, ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಹಾರಿವಾಳ ಮಾತನಾಡಿ, ವೃತ್ತಿ ಕಲಾವಿದರು ತಮ್ಮ ಕಲೆಯ ಪ್ರದರ್ಶನ ನೀಡುವ ಮೂಲಕ ಬದುಕನ್ನು ಕಟ್ಟಿಕೊಂಡಿದ್ದಾರೆ. ಇನ್ನೂ ಕೆಲವು ಕಲಾವಿದರು ಪ್ರವೃತ್ತಿಯಾಗಿ ಕಲೆಗಳನ್ನು ಅಳವಡಿಸಿಕೊಂಡಿದ್ದಾರೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸದೃಢವಾಗಬೇಕು ಎಂದರು.
ವಿರಕ್ತ ಮಠದ ಸಿದ್ದಲಿಂಗ ಸ್ವಾಮೀಜಿ ಸಾನಿದ್ಯ ವಹಿಸಿದ್ದರು. ಅಪ್ಪು ಮುರಾಳ ಚಂದ್ರಶೇಖರ ಮುಳವಾಡ, ಹೈದರ ಚಪ್ಪರಬಂದ ಇತರರು ವೇದಿಕೆಯಲ್ಲಿದ್ದರು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಕಲಾವಿದರು ದಿ. ಬಸಯ್ಯ ಹಿರೇಮಠರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಂಗೀತ ಕಾರ್ಯಕ್ರಮ ನೀಡಿದರು. ಬಂದೇನವಾಜ ವಾಲೀಕಾರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

