ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಇಲ್ಲಿಯ ಉದ್ಯಾನದ ಹೊರಬಾಜು ಪ್ರಿವೆಡ್ಡಿಂಗ್ ಸೇರಿದಂತೆ ನಾನಾ ಫೋಟೋಶೂಟ್ ಗೆ ೧೦೦೦ ರೂ ಶುಲ್ಕ ನಿಗದಿಪಡಿಸಿದ್ದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬುಧವಾರ ಇಲ್ಲಿಯ ಮುಖ್ಯ ಎಂಜಿನಿಯರ್ ಕಚೇರಿಯ ಮುಂದೆ ಪ್ರತಿಭಟಿಸಿ ಮನವಿ ಸಲ್ಲಿಸಿದರು.
ಆಲಮಟ್ಟಿಯ ಡ್ಯಾಂ ಸರ್ಕಲ್ ನಿಂದ ಆಲಮಟ್ಟಿಯ ಪೆಟ್ರೋಲ್ ಪಂಪ್ ವರೆಗೆ ರಸ್ತೆಯುದ್ದಕ್ಕೂ ಹಚ್ಚಿರುವ ವಿವಿಧ ಗಿಡಗಳ ಸುಂದರ ಜಾಗವಿದೆ. ಸುಮಾರು ಒಂದೂವರೆ ಕಿ.ಮೀವರೆಗೂ ಈ ನೋಟ ಅದ್ಭುತವಾಗಿದೆ. ಇಲ್ಲಿ ಫೋಟೋಶೂಟ್ ಗೆ ಹೇಳಿ ಮಾಡಿಸಿದ ತಾಣ ಇದಾಗಿದೆ. ಅದಕ್ಕಾಗಿ ನಿತ್ಯ ಹಲವಾರು ಜೋಡಿಗಳ ಪ್ರಿವೆಡ್ಡಿಂಗ್ ಫೋಟೋ ಶೂಟ್ ನಡೆಯುತ್ತವೆ.
ಉದ್ಯಾನದ ಹೊರಗಡೆ ಇದ್ದದ್ದರಿಂದ ಇಲ್ಲಿಯವರೆಗೆ ಫೋಟೋ ಶೂಟ್ ಗೆ ಶುಲ್ಕ ಇರಲಿಲ್ಲ. ಆದರೆ ಕಳೆದ ಫೆ.೧೫ ರಿಂದ ಪ್ರಿವೆಡ್ಡಿಂಗ್ ಶೂಟಿಂಗ್ ಗೆ ಒಂದು ಜೋಡಿ ಒಂದು ಸಾವಿರ ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ, ಉದ್ಯಾನದ ಹೊರಗಡೆಯ ಸೌಂದಯ್ಯಕ್ಕೆ ಶುಲ್ಕ ಯಾಕೆ? ಎಂಬುದು ಪ್ರತಿಭಟನಾಕಾರರ ಆರೋಪವಾಗಿದೆ.
ಆಲಮಟ್ಟಿಯ ಫೋಟೋಶೂಟ್ ನಿಂದ ಆಲಮಟ್ಟಿಯ ಉದ್ಯಾನಗಳ ಬಗ್ಗೆ ಪ್ರಚಾರ ಆಗುತ್ತದೆ. ಹೀಗಾಗಿ ಫೋಟೋಶೂಟ್ ಗೆ ಶುಲ್ಕ ನಿಗದಿಗೊಳಿಸಬಾರದು ಎಂದು ಅವರು ಆಗ್ರಹಿಸಿದರು.
ಉಪಮುಖ್ಯ ಎಂಜಿನಿಯರ್ ಐ.ಎಲ್. ಕಳಸಾ ಮನವಿ ಸ್ವೀಕರಿಸಿದರು.
ವೇದಿಕೆಯ ಅಧ್ಯಕ್ಷ ಪತ್ತೇಸಾಬ್ ಚಾಂದ್, ಬಸವರಾಜ ಹೆರಕಲ್, ಮುನ್ನಾ ಶಿಂಧೆ, ಯಲಗೂರೇಶ ಮೇಟಿ, ರಫೀಕ್ ಅಥಣಿ, ಶಿವು ಕೊಳ್ಳಾರ, ಚಂದ್ರ ಮಾದರ, ಶಿವಾನಂದ ಕೊಳ್ಳಿ ಮತ್ತೀತರರಿದ್ದರು.

