ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಬ್ರಹ್ಮಾಂಡದಲ್ಲಿ ಶೇ೭೫ ರಷ್ಟು ನೀರಿದ್ದರೂ ನಾವು ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಪ್ರತಿಯೊಬ್ಬರೂ ನೀರನ್ನು ಮಿತವಾಗಿ ಬಳಸುವ ಮೂಲಕ ನೀರಿನ ಸಮಸ್ಯೆಯನ್ನು ತಡೆಯಲು ಮುಂದಾಗಬೇಕು ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರೂ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ ಕರೆ ನೀಡಿದರು.
ಪಟ್ಟಣದ ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಪುರಸಭೆ ಹಾಗೂ ಇತರ ಎಲ್ಲ ಸರಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಜಲ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೀರಿಲ್ಲದೇ ನಮ್ಮ ಜೀವನವಿಲ್ಲ. ನೀರಿನ ಅಭಾವ ಉಂಟಾದಲ್ಲಿ ಮುಂದಿನ ಪೀಳಿಗೆಗೆ ಸಾಕಷ್ಟು ಹೊಡೆತ ಬೀಳಲಿದೆ ಎಂಬ ಅರಿವು ಪ್ರತಿಯೊಬ್ಬರಲ್ಲಿ ಮೂಡಬೇಕು ಎಂಬ ಉದ್ದೇಶದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೀರಿನ ಪ್ರಾಮುಖ್ಯತೆ ಮತ್ತು ಸಂರಕ್ಷಣೆಗಾಗಿ ಕೃಷಿ ಹೊಂಡದಂತಹ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ಅವುಗಳ ಪ್ರಯೋಜನಗಳನ್ನು ಪಡೆದುಕೊಳ್ಳುವ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರದಾರ ಮಾತನಾಡಿ ನೀರನ್ನು ಸಂರಕ್ಷಿಸುವದು ಪ್ರತಿಯೊಬ್ಬರ ಮೂಲಭೂತ ಕರ್ತವ್ಯ. ಹಿಮನದಿಗಳ ರಕ್ಷಣೆ ಎಂಬ ಥೀಮ್ ಮೂಲಕ ಸಿಹಿ ನೀರಿನ ರಕ್ಷಣೆಗಾಗಿ ಸರ್ಕಾರ ಮುಂದಾಗಿದೆ. ಬೆಳೆಯುತ್ತಿರುವ ನಗರಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಹತ್ವಾಕಾಂಕ್ಷೆಯ ಯೋಜನೆಗಳ ಮೂಲಕ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿವೆ. ನಲ್ಲಿಗಳಿಗೆ ಟ್ಯಾಪ್ ಅಳವಡಿಸುವ ಮೂಲಕ ನೀರು ಪೋಲಾಗುವದನ್ನು ಪ್ರತಿಯೊಬ್ಬರು ತಡೆಯಬೇಕು ಎಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಮಾತನಾಡಿದರು.
ತಾಲೂಕು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಕಿರಿಯ ಸಿವಿಲ್ ನ್ಯಾಯಾಧೀಶರಾದ ಸಂಪತ್ತಕುಮಾರ ಬಳೂಲಗಿಡದ, ಕ್ಷೇತ್ರ ದೈಹಿಕ ಶಿಕ್ಷಣಾಧಿಕಾರಿ ಬಿ.ವಾಯ್.ಕವಡಿ, ಅಪರ ಸರ್ಕಾರಿ ವಕೀಲ ಎಚ್.ಎಲ್.ಸರೂರ, ಎಪಿಪಿ ಬಸವರಾಜ ಆಹೇರಿ, ಹಿರಿಯ ನ್ಯಾಯವಾದಿಗಳಾದ ಎಂ.ಎಚ್.ಹಾಲಣ್ಣವರ, ಜೆ.ಎ.ಚಿನಿವಾರ, ಎಂ.ಎ.ಮುದ್ದೇಬಿಹಾಳ, ಆರ್.ಬಿ.ಪಾಟೀಲ, ಎಸ್.ಬಿ.ಬಾಚಿಹಾಳ ನ್ಯಾಯವಾದಿಗಳಾದ ಎಂ.ಬಿ.ಬಿರಾದಾರ, ಚೇತನ ಶಿವಶಿಂಪಿ ತಾಲೂಕು ಸೇವಾ ಸಮಿತಿಯ ಆಡಳಿತ ಸಹಾಯಕ ಅರವಿಂದ ಕುಂಬಾರ, ದಲಾಯತ ಮಹಾಂತೇಶ ಹಚರೆಡ್ಡಿ, ಸಾಹಿತಿ ಶಿವಪುತ್ರ ಅಜಮನಿ ಸೇರಿದಂತೆ ನ್ಯಾಯಾಲಯದ ಸಿಬ್ಬಂದಿ, ಪಕ್ಷಗಾರರು ಇದ್ದರು. ಪ್ರ.ಕಾರ್ಯದರ್ಶಿ ಪಿ.ಬಿ.ಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ನ್ಯಾಯವಾದಿ ಎಂ.ಎ.ಲಿಂಗಸೂರ ಕಾರ್ಯಕ್ರಮ ನಿರ್ವಹಿಸಿದರು. ಶ್ರೀದೇವಿ ರಾಜೂರ ವಂದಿಸಿದರು.

