ತುಬಚಿ-ಬಬಲೇಶ್ವರ ಏತನೀರಾವರಿ ಯೋಜನೆ ಜಾಕವಲ್ ನಿಂದ ನೀರು ಹರಿಸಲು ಅಡ್ಡಪಡಿಸುತ್ತಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತುಬಚಿ-ಬಬಲೇಶ್ವರ ಏತನೀರಾವರಿ ಯೋಜನೆಯ ಮೂಲಕ ತಿಕೋಟಾ ಭಾಗಕ್ಕೆ ನೀರು ಪೂರೈಸಬೇಕು, ಜಾಕವಲ್ ನಿಂದ ನೀರು ಹರಿಸಲು ಪದೇ ಪದೇ ಅಡ್ಡಪಡಿಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಉಪವಾಸ ಸತ್ಯಗ್ರಹ ಸೇರಿದಂತೆ ಉಗ್ರ ಹೋರಾಟ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.
ತಿಕೋಟಾ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಬೃಹತ್ ಪ್ರತಿಭಟನೆ ನಡೆಸಿದ ರೈತರು ತುಬಚಿ-ಬಬಲೇಶ್ವರ ಜಾಕವೆಲ್ ನಿಂದ ನೀರು ಬಿಡುಗಡೆಗೆ ಅಡ್ಡಿಪಡಿಸಿದ ರೈತರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡ ರೈತ ಮುಖಂಡ ಯಾಕೂಬ್ ಜತ್ತಿ, ತುಬಚಿ-ಬಬಲೇಶ್ವರ ಏತನೀರಾವರಿ ಯೋಜನೆಯಲ್ಲಿ ನಮಗೆ ಹಂಚಿಕೆಯಾದ ನಮ್ಮ ಪಾಲಿನ ಹಕ್ಕನ್ನು ಕೇಳುತ್ತಿದ್ದೇವೆ ಹೊರತು ಭಿಕ್ಷೆಯನ್ನು ಬೇಡುತ್ತಿಲ್ಲ. ಆದರೆ, ಜಮಖಂಡಿ ತಾಲೂಕಿನ ಕೆಲವು ದುಷ್ಟಶಕ್ತಿಗಳು ಈ ಭಾಗಕ್ಕೆ ನೀರು ಹರಿಸದಂತೆ ವ್ಯವಸ್ಥಿತ ಪಿತೂರಿ ಮಾಡುತ್ತಿದ್ದಾರೆ. ಇಂಥ ದುಷ್ಟ ಶಕ್ತಿಗಳು ಜಮಖಂಡಿ, ಅಥಣಿ ಹಾಗೂ ತಿಕೋಟಾ ತಾಲೂಕಿನ ಕೆಲವು ಗ್ರಾಮಗಳಿಗೆ ಹರಿಯಬೇಕಿರುವ ನೀರನ್ನು ವ್ಯವಸ್ಥಿತ ಪಿತೂರಿ ನಡೆಸಿ ತಡೆಯುತ್ತಿವೆ ಎಂದು ಅವರು ತಿಳಿಸಿದರು.
ಈ ಹಿಂದೆ ಪಡಸಲಗಿ ಹತ್ತಿರ ನಿರ್ಮಿಸಿದ ಕೆರೆ ತುಂಬುವ ಯೋಜನೆಗೂ ಕೂಡ ಈ ರೀತಿ ಅಡ್ಡಿ ಪಡಿಸಿ, ಇಡೀ ಯೋಜನೆಯನ್ನೇ ವಿಫಲಗೊಳಿಸಿದ ಜನರೇ ಇಂದು ಮತ್ತೆ ತುಬಚಿ-ಬಬಲೇಶ್ವರ ಯೋಜನೆಗೆ ಅಡ್ಡಿಪಡಿಸುತ್ತಿದ್ದಾರೆ. ನದಿಯಲ್ಲಿ ಹರಿಯುವ ಎಲ್ಲ ನೀರು, ನದಿ ಪಾತ್ರದ ಜನರಿಗೆ ಮಾತ್ರ ಎಂದು ಇವರು ಭಾವಿಸಿದಂತಿದೆ. ಈ ಹಿಂದೆ ಕಾನೂನು ಬಾಹಿರವಾಗಿ ಚಿಕ್ಕಪಡಸಲಗಿ ಬ್ಯಾರೆಜಿಗೆ ಕಾನೂನು ಬಾಹಿರವಾಗಿ ಆಲಮಟ್ಟಿ ಹಿನ್ನೀರನ್ನು ರಿವರ್ಸ್ ಪಂಪ್ ಮೂಲಕ ಎತ್ತಿ ಬಳಸಿದ್ದಲ್ಲದೇ, ಈ ಯೋಜನೆಗೆ ಸರಕಾರದ ಅನುದಾನ ಪಡೆದಿದ್ದಾರೆ. ಇಂಥವರ ವಿರುದ್ಧ ಉಗ್ರ ಕಾನೂನು ಕ್ರಮ ಕೈಗೊಂಡು ಕಠಿಣ ಶಿಕ್ಷೆ ನೀಡಬೇಕು ಎಂದು ಅವರು ಹೇಳಿದರು.
ಜಿ.ಪಂ ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ ಮಾತನಾಡಿ, ಎಂ.ಬಿ.ಪಾಟೀಲ ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ ಈ ಭಾಗದ ರೈತರ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮ ವಹಿಸಿ ವಿಜಯಪುರ ಮತ್ತು ಬಾಗಲಕೋಟ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಒದಗಿಸಿದ್ದಾರೆ. ಯಾವುದೇ ತಾರಮತ್ಯ ಮಾಡದೇ ಸಂಕಷ್ಟದ ಸಮಯದಲ್ಲಿ ಉಭಯ ಜಿಲ್ಲೆಗಳ ರೈತರಿಗೆ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಂಡಿದ್ದಾರೆ. ಆದರೂ, ಚಿಕ್ಕಪಡಸಲಗಿ ಭಾಗದ ರೈತರು ತಿಕೋಟಾ ತಾಲೂಕಿನ ಅನ್ನದಾತರ ಸಂಕಷ್ಟ ಅರ್ಥಮಾಡಿಕೊಳ್ಳದೆ ನೀರು ಬಿಡುಗಡೆಗೆ ಅಡ್ಡಿಯಾಗಿದ್ದಾರೆ ಎಂದು ಕಿಡಿ ಕಾರಿದರು.
ತಿಕೋಟಾ ರೈತ ಗೂಳಪ್ಪ ಪೂಜಾರಿ, ಲೋಹಗಾಂವ ರೈತ ಬಿ. ಎಸ್. ಗಸ್ತಿ, ತಿಕೋಟಾ ತಾ. ಪಂ ಮಾಜಿ ಅಧ್ಯಕ್ಷೆ ಪ್ರಭಾವತಿ ನಾಟಿಕಾರ, ಬಾಬಾನಗರ ರೈತ ಸಿದಗೊಂಡ ರುದ್ರಗೌಡರ ಮಾತನಾಡಿ, ಚಿಕ್ಕಪಡಸಲಗಿ ಭಾಗದ ಕೃತ್ಯ ದುರುದ್ದೇಶದಿಂದ ಕೂಡಿದೆ. ಕಳೆದ ಒಂದು ವರ್ಷದಿಂದ ಮೇಲಿಂದ ಮೇಲೆ ನೀರು ಹರಿಯಲು ಅಡ್ಡಿ ಪಡಿಸಲಾಗುತ್ತಿದೆ. ಅಧಿಕಾರಿಗಳು ಎರಡು ದಿನಗಳಲ್ಲಿ ನಮಗೆ ನೀರು ಹರಿಸದಿದ್ದರೆ ರಸ್ತೆ ತಡೆ ಸೇರಿದಂತೆ, ಜಾಕವೆಲ್ ಗೆ ತೆರಳಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ತಿಕೋಟಾ ತಹಸೀಲ್ದಾರ ಸುರೇಶ ಚವಲರ ಅವರಿಗೆ ರೈತ ಮುಖಂಡರು ಮನವಿ ಪತ್ರ ನೀಡಿದರು.
ಈ ವೇಳೆ ರೈತ ಮುಖಂಡರಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಶಂಕರಗೌಡ ಬಿರಾದರ, ಸುರೇಶ ಬಾಬಾನಗರ, ಗುರು ಮಾಳಿ, ಕೆ. ಆರ್. ಮೆಡೆಗಾರ, ಇಮ್ತಿಯಾಜ್ ಮುಲ್ಲಾ, ಮಲ್ಲಿಕಾರ್ಜುನ ಲೋಣಿ, ಈರಣ್ಣಗೌಡ ರುದ್ರಗೌಡ, ಜಗದೀಶಗೌಡ ಪಾಟೀಲ, ವಿಜುಗೌಡ ಪಾಟೀಲ, ಭೀಮು ನಾಟೀಕಾರ, ಆರ್. ಜಿ. ಯರನಾಳ, ಜಕ್ಕಪ್ಪ ಎಡವೆ, ರಾಮಜಿ ಮಿಸಾಳೆ, ಪ್ರಶಾಂತ ಜಂಡೆ, ಶಾಸಪ್ಪ ಹಂಚನಾಳ, ಕಾಶಿನಾಥಗೌಡ ಪಾಟೀಲ, ಲೇಪು ಕೊಣ್ಣೂರ, ಭಾಗೀರಥಿ ತೇಲಿ, ಕಸ್ತೂರಿ ಬಿರಾದಾರ, ರಮೇಶ ಜಂಬಗಿ, ಹಾಜಿಲಾಲ ಕೊಟ್ಟಲಗಿ, ಸಿದ್ದಾರ್ಥ ಪರನಾಕರ, ಬಾಳಪ್ಪ ಪೂಜಾರಿ, ರಾಜಕುಮಾರ ಚಾವರ, ಶ್ರೀಮಂತ ಬನ್ನೆನವರ, ಶಿವು ಪರೀಟ, ಯಮನಪ್ಪ ಮಲಕನವರ, ಪರಮೇಶ ಕಲಬಿಳಗಿ, ಮಮ್ಮು ಮುಜಾವರ ಮುಂತಾದವರು ಉಪಸ್ಥಿತರಿದ್ದರು.

