ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಕೀಲ್ ಬಾಗಮಾರೆ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಮೂಲಕ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಲ್ಪಸಂಖ್ಯಾತ ಬಾಹುಳ್ಯವುಳ್ಳ ವಾರ್ಡ್ಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿದ್ದು, ಕೂಡಲೇ ಆದ್ಯತೆ ಮೇರೆಗೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಕೀಲ್ ಬಾಗಮಾರೆ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಅವರನ್ನು ಶನಿವಾರ ಭೇಟಿ ಮಾಡಿ ಲಿಖಿತ ಮನವಿ ಸಲ್ಲಿಸಿದರು.
ಈ ಸಮಸ್ಯೆಯ ಬಗ್ಗೆ ವಿವರಣೆ ನೀಡಿದ ಶಕೀಲ್ ಬಾಗಮಾರೆ, ಅಲ್ಪಸಂಖ್ಯಾತ ಬಾಹುಳ್ಯವಿರುವ ವಾರ್ಡ್ಗಳಲ್ಲಿ ರಸ್ತೆ ಕಾಮಗಾರಿಗಳು ಮರೀಚಿಕೆಯಾಗಿವೆ, ಕಾಮಗಾರಿ ಆರಂಭವಾದರೂ ಅದು ಪೂರ್ಣವಾಗಿಲ್ಲ, ಇನ್ನೂ ಕೆಲವೆಡೆ ಕಾಮಗಾರಿಯೇ ಆರಂಭವಾಗಿಲ್ಲ, ಇದರಿಂದಾಗಿ ಸಾರ್ವಜನಿಕರು ನಿತ್ಯ ತೊಂದರೆ ಎದುರಿಸುವಂತಾಗಿದೆ ಎಂದರು.
ಅತಾವುಲ್ಲಾ ಸರ್ಕಲ್‌ನಿಂದ ಜಾಮೀಯಾ ಮಸೀದಿ ರಸ್ತೆ ಕಾಮಗಾರಿ ಅನೇಕ ತಿಂಗಳುಗಳಿಂದ ಸ್ಥಗಿತಗೊಂಡಿದೆ, ದಿನನಿತ್ಯ ಈ ರಸ್ತೆ ಅವಲಂಬಿಸಿ ಸಾವಿರಾರು ಪ್ರಯಾಣಿಕರು ತೊಂದರೆ ಎದುರಿಸುವಂತಾಗಿದೆ, ಬಡ ಆಟೋ ಚಾಲಕರು ಈ ಭಾಗಕ್ಕೆ ಆಟೋ ಓಡಿಸಿದರೆ ಅವರ ಆಟೋಗಳು ಸಹ ಹಾಳಾಗಿ ದೈನಂದಿನ ಉಪಜೀವನಕ್ಕೂ ಹೊಡೆತ ಬೀಳುತ್ತಿದೆ ಎಂದರು.
ಅದೇ ತೆರನಾಗಿ ಕೇಂದ್ರ ಬಸ್ ನಿಲ್ದಾಣ ಬಳಿಯ ಚರ್ಚ್ನಿಂದ ಎ.ಪಿ.ಜೆ ಅಬ್ದುಲ ಕಲಾಂ ರಸ್ತೆ ಸಹ ಅಭಿವೃದ್ಧಿಯಿಂದ ವಂಚಿತವಾಗಿದೆ, ಯಾವುದೇ ಕಾಮಗಾರಿ ಆರಂಭಿಸದೇ ರಸ್ತೆಯನ್ನು ತಿಂಗಳ ಕಾಲ ಅಸ್ಥಿರವಾಗಿ ಬಿಡುವುದರಿಂದ ಸಾರ್ವಜನಿಕರಿಗೆ ನಿರಂತರವಾಗಿ ತೊಂದರೆ ಉಂಟಾಗುತ್ತಿದೆ. ಇದರಿಂದ ಸಂಚಾರ ಅಡಚಣೆಯ ಜೊತೆಗೆ ಅಪಘಾತಗಳು ಸಂಭವಿಸುತ್ತಿವೆ ಎಂದರು.
ಆದ್ದರಿಂದ, ಬಾಕಿ ಉಳಿದಿರುವ ರಸ್ತೆ ಕಾಮಗಾರಿಗಳನ್ನು ತಕ್ಷಣ ಪುನರಾರಂಭಿಸುವಂತೆ ಒತ್ತಾಯಿಸಿ ಮನವಿ ಮಾಡಿಕೊಂಡರು.

