ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಎಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಘಟಕ ಕರೆಯ ಮೇರೆಗೆ ಎಂ.ಇ.ಎಸ್. ಪುಂಡಾಟಿಕೆ ವಿರುದ್ದ ನೀಡಲಾದ ಕರ್ನಾಟಕದ ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುವ ಕುರಿತು ಹಮ್ಮಿಕೊಂಡ ಜಿಲ್ಲಾಧ್ಯಕ್ಷ ಶೇಷರಾವ್ ಮಾನೆ ಅವರ ನೇತೃತ್ವದಲ್ಲಿ ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಘಟಕ ಹಾಗೂ ಜಿಲ್ಲಾ ಮಹಿಳಾ ಘಟಕಗಳ ಪರವಾಗಿ ಎಮ್.ಇ.ಎಸ್. ಸಂಘಟನೆಯ ಪ್ರತಿಕೃತಿ ದಹನ ಮಾಡಿ ಪ್ರತಿಭಟಿಸಲಾಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಗೌರವಾಧ್ಯಕ್ಷ ಎಮ್.ಎಮ್. ಖಲಾಸಿ ಯವರು ಮಾತನಾಡಿ, ಕನ್ನಡ ಅಸ್ಮಿತೆ ಉಳಿಯಲು ಬೆಳೆಯಲು ಜನ್ಮತಳೆದ ರಾಜ್ಯದ ಕನ್ನಡಪರ ಸಂಘಟನೆಗಳು ನಾಡು, ನುಡಿ, ಜಲ, ಪರಿಸರ ಸಂರಕ್ಷಣೆಗೆ ಬದ್ದವಾಗಿ ಶಾಂತಿಯುತ ಕಾರ್ಯಾಚರಣೆ ಸಹಿಸದೆ ಎಮ್.ಇ.ಎಸ್. ಪುಂಡರ ಗುಂಡಾವರ್ತನೆ ಉಗ್ರವಾಗಿ ಖಂಡಿಸಿದರು.
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಬೌಮ, ಇದಕ್ಕೆ ದಕ್ಕೆ ತಂದ ಎಮ್.ಇ.ಎಸ್. ಹತ್ತಿಕ್ಕಿವ ನಿಟ್ಟಿನಲ್ಲಿ ನಾವು ಕನ್ನಡಿಗರು ಸುಮ್ಮನಿರಲು ಸಾಧ್ಯವಿಲ್ಲ. ಇನ್ನು ಮುಂದೆ ನಮ್ಮ ತಾಳ್ಮೆಯನ್ನು ಪರೀಕ್ಷಸಿದರೆ ರಾಜ್ಯ ಮಟ್ಟದ ಉಗ್ರ ಸ್ವರೂಪದ ಹೋರಾಟವನ್ನು ಹಮ್ಮಿಕೊಳ್ಳಲಾಗುವದು ಎಂದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಕರವೇ ಜಿಲ್ಲಾಧ್ಯಕ್ಷ ಶೇಷರಾವ್ ಮಾನೆ ಮಾತನಾಡಿ, ಕನ್ನಡಿಗರಿಗೆ ರೈಲ್ವೆ ಇಲಾಖೆಯಿಂದ, ಬ್ಯಾಂಕ್ ಉದ್ಯೋಗ ಸೇರಿದಂತೆ ಇನ್ನಿತರ ಅನೇಕ ಕೇಂದ್ರ ಸರ್ಕಾರದ ಉದ್ಯೋಗಾವಕಾಶ ವಂಚನೆಯಿಂದ ಹಾಗೂ ಕಾವೇರಿ,ಕೃಷ್ಣೆ,ಮಹಾದಾಯಿ ಯೋಜನೆಯಿಂದ ವಂಚಿತರಾದ ಕನ್ನಡಿಗರ ಅಸ್ಮಿತೆಯ ಹಿತದೃಷ್ಟಿಯಿಂದ ಕನ್ನಡಪರ ಸಂಘಟನೆಗಳ ಮಾಡುವ ಹೋರಾಟ ೭ ಕೋಟಿ ಕನ್ನಡಿಗರ ಬೇಡಿಕೆಗಳನ್ನು ಶೀಘ್ರದಲ್ಲಿ ಈಡೇರಿಸಬೇಕೆಂದರು.
ಸಾಹಿತಿ ಇಂದುಮತಿ ಲಮಾಣಿ ಮಾತನಾಡಿ, ನಾಡಲ್ಲಿ ಎಮ್.ಇ.ಎಸ್.ನವರ ಪುಂಡಾಟಿಕೆ ಪದೇ ಪದೇ ನಡೆಯುವುದನ್ನು ನೋಡಿಕೊಂಡು ಕೆಲವು ಕನ್ನಡಪರ ಸಂಘಟನೆಗಳು ನೋಡಿ ನೋಡದಂತೆ ಮೌನ ವಹಿಸುವದು ಖಂಡನೀಯ. ಇಂತಹ ಪುಂಡಾಟಿಕೆಯ ಸಂಘಟನೆಯನ್ನು ಗಡಿಪಾರು ಮಾಡಬೇಕು ಎಂದರು.
ಈ ಸಮಯದಲ್ಲಿ ರಾಜ್ಯ ಸಂಚಾಲಕರಾದ ಸಾಧಿಕ ಶೇಖ, ಜಿಲ್ಲಾ ಮುಖಂಡರುಗಲಾದ ಮೈನುದ್ದೀನ ವಾಲಿಕಾರ, ಡಾ.ಎನ್.ಆಯ್.ಪಟೇಲ, ಆರ್.ಎಚ್.ಕೇಶವಾಪೂರ, ವಸಂತರಾವ ಕುಲಕರ್ಣಿ, ಕೆ.ಕೆ. ಬನ್ನಟ್ಟಿ, ಪ್ರಕಾಶ ನಡುವಿನಕೇರಿ, ಹಾಗೂ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆಯಾದ ಭಾರತಿ ಟಂಕಸಾಲಿ, ಜಿಲ್ಲಾ ಪದಾಧಿಕಾರಿಗಳಾದ ಜಯಶ್ರೀ ಸುರಪೂರ, ವಿಜಯಾ ಬಿರಾದಾರ, ಮಂಗಲಾ ರಾಠೋಡ, ಕವಿತಾ ರಾಠೋಡ, ರೇಣುಕಾ ಕಟ್ಟಿ, ಕಲ್ಲವ್ವ ಹೊಸಮನಿ, ಜಯಶ್ರೀ ನಂದಿಕೋಲ, ಕಲ್ಪನಾ ಹೊಸಮನಿ, ಭಾರತಿ ಕುಂದನಗಾರ, ಸುರೇಶ ಆರ್. ಹೊಸಮನಿ, ಮೋಹನ ರಾಠೋಡ, ಪ್ರೊ. ದೊಡ್ಡಣ್ಣ ಬಜಂತ್ರಿ ಸುಮಾರು ೨೦೦ಕ್ಕೂ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.

