ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಸಮೀಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಜಲದಿನ ಆಚರಣೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ವೀರೇಶ ಚೌದ್ರಿಯವರು ಇತ್ತೀಚಿಗೆ ನೀರಿನ ಅಭಾವ ಉಲ್ಬಣಿಸಿದ್ದು ಅದನ್ನು ನೀಗಿಸಲು ನಾವೆಲ್ಲ ಜಾಗೃತರಾಗಿ ನೀರಿನ ಸಂರಕ್ಷಣೆ ಮತ್ತು ಮಳೆನೀರಿನ ಕೊಯ್ಲುಗಳತ್ತ ಗಮನಹರಿಸಬೇಕಾಗಿದೆ ಎಂದರು.
ಶಾಲೆಯ ಮುಖ್ಯಗುರುಗಳಾದ ಮಹ್ಮದಶಫೀಕ ಮುಜಾವರ ಮಾತನಾಡಿ ವಿಶ್ವ ಜಲದಿನದ ಈ ವರ್ಷದ ವಿಷಯವಾದ ಮಂಜುಗಡ್ಡೆಗಳ ಸಂರಕ್ಷಣೆಯ ಬಗ್ಗೆ ವಿವರಿಸಿದರು.
ಸಿಹಿ ನೀರಿನ ಆಕರಗಳಾದ ಹಿಮನದಿಗಳನ್ನು ರಕ್ಷಿಸುವದು ನಮ್ಮೆಲ್ಲರ ಕರ್ತವ್ಯವಾಗಿದೆ. ಭೂಮಿಯ ಮೇಲೆ ಕುಡಿಯುವ ನೀರು ಕಡಿಮೆ ಪ್ರಮಾಣದಲ್ಲಿದ್ದು ಅದನ್ನು ಮಿತವಾಗಿ,ಪ್ರಜ್ಞಾಪೂರ್ವಕವಾಗಿ ಬಳಸಬೇಕು. ಮಳೆನೀರು ಕೊಯ್ಲನ್ನು ವೈಜ್ಞಾನಿಕವಾಗಿ ಕಾರ್ಯರೂಪಕ್ಕೆ ತಂದರೆ ಅಂತರ್ಜಲ ಮಟ್ಟವನ್ನು ಹೆಚ್ಚಿಸಬಹುದು ಎಂದರು.
ಗುರುಮಾತೆಯವರಾದ ರೇಣುಕಾ ಅಗಸರ ವಿಶ್ವ ಜಲದಿನದ ಅಂಗವಾಗಿ ಮಕ್ಕಳಿಗೆ ನೀರಿನ ಸಂರಕ್ಷಣೆ ವಿಷಯಾಧಾರಿತ ಚಿತ್ರಕಲಾ ಸ್ಪರ್ಧೆಯನ್ನು ನಡೆಸಿದರು. ಮಕ್ಕಳಲ್ಲಿ ನೀರಿನ ಮಿತಬಳಕೆಯ ಬಗ್ಗೆ ಅರಿವು ಮೂಡಿಸಿದರು.
ನೀರಿನ ಮೂಲಗಳನ್ನು ರಕ್ಷಿಸಲು,ಪರಸರ ಸಮತೋಲನದ ಸಂರಕ್ಷಣೆ ಮತ್ತು ಭವಿಷ್ಯದ ಪೀಳಿಗೆಗೆ ನೀರಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್.ಸಿ. ಸದಸ್ಯರಾದ ರಾಮನಗೌಡ ಚೌದ್ರಿ, ವೀರಗಂಟೆಪ್ಪ ಬ್ಯಾಕೋಡ, ಚಂದ್ರಶೇಖರ ಚೌದ್ರಿ, ಶರಣಪ್ಪ ಮಾದರ, ರಮೇಶ ದೊಡಮನಿ, ಶಿಕ್ಷಕರಾದ ಸುರೇಶ ಹೊಸಟ್ಟಿ, ಸಂತೋಷ ಹರೋಲಿ, ನಬಿಲಾಲ ಹಕೀಮ, ದರಿಯಾಬಾನು ಹಕೀಮ, ಅನೀತಾ ಕೆಂಭಾವಿ ಹಾಜರಿದ್ದರು.

