ಗ್ರಾಮದ ತುಂಬೆಲ್ಲಾ ರಂಗೋಲಿಯ ಚಿತ್ತಾರ | ತೆರೆದ ವಾಹನದಲ್ಲಿ ಮೆರವಣಿಗೆ | ಹಳೆಯ ವಿದ್ಯಾರ್ಥಿಗಳಿಂದ ಮಾನವ ಸರಪಳಿ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಗ್ರಾಮದ ತುಂಬೆಲ್ಲಾ ರಂಗೋಲಿಯ ಚಿತ್ತಾರ, ಹಳೆ ವಿದ್ಯಾರ್ಥಿಗಳಿಂದ ಮಾನವ ಸರಪಳಿ ನಿರ್ಮಿಸಿ, ತಮ್ಮ ನೆಚ್ಚಿನ ವಿಜ್ಞಾನ ಶಿಕ್ಷಕ ರವಿ ಚಿನಗುಂಡೆ ದಂಪತಿಗೆ ತೆರೆದ ಜೀಪಿನಲ್ಲಿ ಕೂಡಿಸಿ ಡೊಳ್ಳುಗಳ ನಿನಾದದ ಮಧ್ಯೆ ಮೆರವಣಿಗೆ.
ಇದು ಸಮೀಪದ ಗಣಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ದಶಕಗಳ ಕಾಲ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ರವಿ ಚಿನಗುಂಡೆ ಅವರ ಬೀಳ್ಕೊಡುಗೆ ಸಮಾರಂಭದ ದೃಶ್ಯ.
ಗ್ರಾಮೀಣ ಭಾಗದಲ್ಲಿ, ವಿಜ್ಞಾನ ಕಲಿಕೋಪಕರಣಗಳ ತಯಾರಿಕೆಯ ಕಾರ್ಖಾನೆಯಂತಿದ್ದ, ಹಲವು ವಿಜ್ಞಾನ ಶಿಕ್ಷಕರಿಗೆ ಮಾರ್ಗದರ್ಶಿಯಾಗಿದ್ದ, ವಿಜ್ಞಾನವನ್ನು ಸರಳವಾಗಿ ವೈಜ್ಞಾನಿಕ ಉಪಕರಣಗಳ ಮೂಲಕ ಬೋಧಿಸಿ, ಎಲ್ಲರಿಗೂ ಅರ್ಥವಾಗುವಂತೆ ಮಾಡುತ್ತಿದ್ದ, ವಿಜ್ಞಾನ ಕಲಿಕಾ ಉಪಕರಣಗಳ ತಯಾರಿಕೆಯಲ್ಲಿ ಜಿಲ್ಲೆಯಲ್ಲಿಯೇ ಮುಂಚೂಣಿಯಲ್ಲಿದ್ದ ವಿಜ್ಞಾನ ಶಿಕ್ಷಕ ರವಿ ಚಿನಗುಂಡೆ ಅವರ ಕಾರ್ಯವೈಖರಿಯನ್ನು ಇಡೀ ಗ್ರಾಮವೇ ಕೊಂಡಾಡಿತು.
ಹಳೆ ವಿದ್ಯಾರ್ಥಿಗಳು, ಪ್ರಸ್ತುತ ಕಲಿಯುತ್ತಿರುವ ವಿದ್ಯಾರ್ಥಿಗಳು, ಗ್ರಾಮಸ್ಥರು, ತಾಲ್ಲೂಕಿನ ನಾನಾ ಕಡೆಯಿಂದ ಆಗಮಿಸಿದ್ದ ಶಿಕ್ಷಕ ಸಮೂಹವೇ ನೆರದಿತ್ತು.
ಗ್ರಾಮೀಣ ಜನರಲ್ಲಿ ಮೂಢನಂಬಿಕೆ ತೊಲಗಿಸಲು ಇವರು ಪವಾಡ ಬಯಲು ಕಾರ್ಯಕ್ರಮ ನಡೆಸಿದರು. ಉರಗ ಸಂರಕ್ಷಣೆಗಾಗಿ ಹಾವುಗಳ ಪ್ರಾತ್ಯಕ್ಷಿಕೆ ಹಾಗೂ ಜಾಗೃತಿ ಕಾರ್ಯಕ್ರಮ ನಡೆಸಿದರು, ಯೋಗ ತರಬೇತುದಾರರಾಗಿ ಶಾಲೆಯ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿದರು, ಪರಿಸರ ರಕ್ಷಣೆಗಾಗಿ ಶಾಲೆ, ಗ್ರಾಮದ ಬೀದಿಗಳಲ್ಲಿಯೂ ಸಸಿಗಳನ್ನು ನೆಟ್ಟು ಸಂರಕ್ಷಿಸುವ ಜವಾಬ್ದಾರಿ ವಿದ್ಯಾರ್ಥಿಗೆ ಕಲಿಸಿದರು. ಯಾವುದೇ ವಿಜ್ಞಾನ ವಸ್ತುಪ್ರದರ್ಶನವಿರಲಿ, ವಿಜ್ಞಾನ ಉಪನ್ಯಾಸ ಗೋಷ್ಠಿಗಳಿರಲಿ ಇವರ ಶಾಲೆಯ ವಿದ್ಯಾರ್ಥಿಗಳೇ ಮುಂದೆ.
ಬಹುಮುಖ ಪ್ರತಿಭೆಯ ಶಿಕ್ಷಕ ರವಿ ಚಿನಗುಂಡೆ ವರ್ಗಾವಣೆಯಾಗಿದ್ದಕ್ಕೆ ನೂರಾರು ಜನರು, ಸಂಘಟನೆಗಳು, ಹಳೆ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರುಗಳಿಗೆ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ರಮೇಶ ಕುಂಬಾರ, ಎಸ್.ಎನ್. ಹಿರೇಮಠ, ಬಸವರಾಜ ಹಂಚಲಿ, ಮಹೇಶ ಗಾಳಪ್ಪಗೋಳ, ಅಶೋಕ ಸತ್ತಿಗೌಡರ, ರಾಘವೇಂದ್ರ ಕುಲಕರ್ಣಿ, ಶಿವನಗೌಡ ಪಾಟೀಲ, ಟಿ.ಟಿ. ಯಾದವ, ಸಚಿನ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ರವಿ ಚಿನಗುಂಡೆ ಅವರ ಕಾರ್ಯವೈಖರಿ ಕುರಿತು ಮಾತನಾಡಿದರು.
ರಮೇಶ ಪೂಜಾರಿ, ಎಂ.ಸಿ.ಶೇಠ, ಉತ್ತಮ ಪಾಟೀಲ, ಅನಿಲ ಪೋತೆ, ಎಸ್.ಬಿ.ತಿಮ್ಮಾಪುರ, ಬಿ.ಎಸ್. ಇಜೇರಿ ಮತ್ತೀತರರು ಇದ್ದರು.

