ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಆಲಮಟ್ಟಿ ಜಲಾಶಯಕ್ಕೆ ಹತ್ತಿಕೊಂಡಿರುವ ಗ್ಯಾಲರಿ ಬಳಿ ಶುಕ್ರವಾರ ನಸುಕಿನ ಜಾವ ಕಂಡಿದ್ದ ೫ ಅಡಿ ಉದ್ದದ ಮೊಸಳೆಯನ್ನು ಪ್ರಾದೇಶಿಕ ಅರಣ್ಯ ಇಲಾಖೆಯ ಮೊಸಳೆ ರಕ್ಷಕರು ಹಿಡಿದು ಕೃಷ್ಣಾ ನದಿಗೆ ಬಿಟ್ಟರು.
ಶುಕ್ರವಾರ ನಸುಕಿನ ಜಾವ ಕೆಎಸ್ ಐಎಸ್ ಎಫ್ ಪೊಲೀಸರು ಗಸ್ತು ತಿರುಗುವಾಗ ಮೊಸಳೆ ಕಂಡಿದೆ. ಅದು ಸಮೀಪದ ಉದ್ಯಾನದೊಳಗೆ ಪ್ರವೇಶಿಸಬಾರದು ಎಂಬ ಉದ್ದೇಶದಿಂದ ಅದರ ಚಲನವಲನದ ಮೇಲೆ ಪೊಲೀಸರು ನಿಗಾ ಇಟ್ಟಿದ್ದರು.
ನಂತರ ೧೧ ಗಂಟೆ ಸುಮಾರು ಆಗಮಿಸಿದ ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿಗಳು , ಅರಣ್ಯ ದಿನಗೂಲಿ ಕಾರ್ಮಿಕರು, ಪೊಲೀಸರು ಸೇರಿ ಮೊಸಳೆ ಸೆರೆ ಹಿಡಿದರು.
ಅದನ್ನು ನಂತರ ಬೇನಾಳ ಬಳಿ ಇರುವ ಕೃಷ್ಣೆಯ ಹಿನ್ನೀರಿಗೆ ಒಯ್ದು ಮೊಸಳೆಯನ್ನು ಸುರಕ್ಷಿತವಾಗಿ ನದಿಗೆ ಬಿಟ್ಟರು.
ಉಪವಲಯ ಅರಣ್ಯಾಧಿಕಾರಿ ಶ್ರೀಕಾಂತ ಘೋರ್ಪಡೆ, ಪೊಲೀಸ್ ಇನ್ಸಪೆಕ್ಟರ್ ಶಿವಲಿಂಗ ಕುರೆನ್ನವರ, ಅಹ್ಮದ್ ಸಂಗಾಪುರ, ವಿಠ್ಠಲ ಜಾಧವ, ಮೊಸಳೆ ರಕ್ಷಕ ನಾಗೇಶ ಮೋಪಗಾರ, ವಿರೂಪಾಕ್ಷಿ ಮಾದರ ಸೇರಿ ಕೆಎಸ್ ಐಎಸ್ ಎಫ್ ಪೊಲೀಸರು ಕಾರ್ಯಾಚರಣೆಯಲ್ಲಿ ತೊಡಗಿದ್ದರು.
ಮೊಸಳೆ ನಸುಕಿನ ಜಾವ ಕಂಡರೂ ಪ್ರಾದೇಶಿಕ ಅರಣ್ಯ ಇಲಾಖೆ ಸಿಬ್ಬಂದಿ ವಿಳಂಬವಾಗಿ ಬಂದರು ಎಂಬ ಆರೋಪ ಕೇಳಿ ಬಂತು.

