ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟ ವಿಕಲಚೇತನ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲು ಬಸವ ಜನ್ಮ ಸ್ಥಳ ಬಸವನಬಾಗೇವಾಡಿಯಿಂದ ರಾಜ್ಯದ ವಿಧಾನಸೌಧದವರೆಗೂ ವಿಕಲಚೇತನರ ಬೈಕ್ ರ್‍ಯಾಲಿ ಮೂಲಕ ಹಮ್ಮಿಕೊಂಡಿರುವ ವಿಧಾನಸೌಧ ಚಲೋ ಚಳುವಳಿ ಮಂಗಳವಾರ ಆರಂಭಗೊಂಡಿತು.
ಬೈಕ್ ರ್‍ಯಾಲಿ ಆರಂಭಿಸುವ ಮುನ್ನ ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ(ಬಸವೇಶ್ವರ) ದೇವರಿಗೆ ವಿಕಲಚೇತನರು ವಿಶೇಷ ಪೂಜೆ ಸಲ್ಲಿಸಿದರು. ತಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸುವಂತೆ ಘೋಷಣೆ ಕೂಗಿದರು.
ನಂತರ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಹಾರಿವಾಳ ಬೈಕ್ ರ್‍ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ವಿಕಲಚೇತನರಿಗೆ ಸರ್ಕಾರ ಎಲ್ಲ ರಂಗಗಳಲ್ಲಿ ಅವಕಾಶ ನೀಡುವಂತಾಗಬೇಕು. ಇದರಿಂದಾಗಿ ಅವರು ಜೀವನ ಸುಗಮವಾಗಿ ಸಾಗಿಸಲು ಸಾಧ್ಯ. ವಿಕಲಚೇತನರ ಬೇಡಿಕೆಗಳು ನ್ಯಾಯಯುತವಾಗಿವೆ. ಇವರ ಬೇಡಿಕೆಗಳನ್ನು ಈಡೇರಿಸಲು ಇಂತಹ ಬಿರು ಬಿಸಿಲಿನಲ್ಲಿಯೂ ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿಯಿಂದ ರಾಜ್ಯದ ರಾಜಧಾನಿ ಬೆಂಗಳೂರುವರೆಗೂ ಬೈಕ್ ಮೂಲಕ ತೆರಳುತ್ತಿದ್ದಾರೆ. ಇವರು ಹೋಗುವ ಮಾರ್ಗದಲ್ಲಿ ನಮ್ಮ ಕರವೇ ಕಾರ್ಯಕರ್ತರು ಸಹಾಯ-ಸಹಕಾರ ನೀಡುವಂತೆ ಮಾಡಲಾಗುವುದು. ಇವರ ಪ್ರತಿಭಟನೆ ಕರವೇ ಸದಾ ಬೆಂಬಲ ವ್ಯಕ್ತಪಡಿಸುತ್ತದೆ. ಸರ್ಕಾರ ಇವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.
ಅಂಗವಿಕಲರ ಒಕ್ಕೂಟದ ಮುಖಂಡ ಮಲ್ಲಿಕಾರ್ಜುನ ಬಿರಾದಾರ ಮಾತನಾಡಿ, ಅಂಗವಿಕಲರ ಒಕ್ಕೂಟವು ವಿಕಲಚೇತನ ಹಕ್ಕಿಗಾಗಿ ಕಳೆದ ೨೫ ವರ್ಷಗಳಿಂದ ಸರ್ಕಾರಕ್ಕೆ ನಮ್ಮ ಹಕ್ಕೋತ್ತಾಯವನ್ನು ಮಂಡಿಸುತ್ತಾ ಬಂದಿದೆ. ಇದರಲ್ಲಿ ಯಶಸ್ವಿಯೂ ಆಗಿದೆ. ನಮ್ಮ ಬೇಡಿಕೆಗಳಾದ ಪ್ರತಿ ತಿಂಗಳು ವಿಕಲಚೇತನರಿಗೆ ರೂ. ೬ ಸಾವಿರ ಮಾಶಾಸನ ಏಕರೂಪದಲ್ಲಿ ಹೆಚ್ಚಳ ಮಾಡಬೇಕು. ವಿಕಲಚೇತನರಿಗೆ ಬ್ಯಾಕ್‌ಲಾಗ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಬೇಕು. ವಿಕಲಚೇತನರಿಗೆ ರಾಜಕೀಯ ಮೀಸಲಾತಿ ನೀಡಬೇಕು. ವಿಕಲಚೇತನರಿಗೆ ಹಾಗೂ ಅವರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಮತ್ತು ನವೋದಯ, ಸೈನಿಕ, ಕಿತ್ತೂರರಾಣಿ ಚನ್ನಮ್ಮ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ವ್ಯಾಸಂಗಕ್ಕೆ ಮೀಸಲಾತಿ ಕಲ್ಪಿಸಬೇಕು. ವಿಕಲಚೇತನರಿಗೆ ಎಸ್‌ಸಿ,ಎಸ್‌ಟಿ ಸಮಾನರು ಎಂದು ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದ್ದನ್ನು ಜಾರಿಗೆ ತರಬೇಕು. ವಿಕಲಚೇತನರಿಗೆ ರಾಜ್ಯಾದ್ಯಂತ ಉಚಿತ ಬಸ್ ಪಾಸ್ ನೀಡಬೇಕು. ವಿಕಲಚೇತನರಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು. ವಿಆರ್‌ಡಬ್ಲೂ, ಎಂಆರ್‌ಡಬ್ಲೂ ಹುದ್ದೆಗಳನ್ನು ಖಾಯಂಗೊಳಿಸಬೇಕು. ಸರ್ಕಾರದ ವಿವಿಧ ಇಲಾಖೆಯಲ್ಲಿ ಹೊರಗುತ್ತಿಗೆ ನೇಮಕಾತಿ ಮಾಡಿಕೊಳ್ಳುತ್ತಿರುವ ಮುಖ್ಯಸ್ಥರಿಗೆ ಹಾಗೂ ಏಜೆನ್ಸಿಗೆ ಶೇ. ೫ ರಷ್ಟು ವಿಕಲಚೇತನರನ್ನು ಕಡ್ಡಾಯವಾಗಿ ನೇಮಕಾತಿ ಮಾಡಿಕೊಳ್ಳಲು ಆದೇಶ ನೀಡಬೇಕು. ವಿಕಲಚೇತನರಿಗೆ ಎಸ್‌ಸಿ, ಎಸ್‌ಟಿ ಅವರಿಗೆ ನೀಡುವ ಭೂ ಯೋಜನೆಯನ್ನು ವಿಕಲಚೇತನರಿಗೂ ಜಾರಿಗೆ ತರಬೇಕೆಂಬ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಆಗ್ರಹಿಸಿದರು.
ರಾಜ್ಯ ಅಂಗವಿಕಲರ ಒಕ್ಕೂಟದ ತಾಲೂಕಾ ಘಟಕದ ಅಧ್ಯಕ್ಷ ನಾಗು ಕರಭಂಟನಾಳ ಮಾತನಾಡಿ, ನಮ್ಮ ಬೈಕ್ ರ್‍ಯಾಲಿ ನಿಡಗುಂದಿ, ಹುನಗುಂದ, ಇಲಕಲ್ಲ, ಕುಷ್ಟಗಿ, ಹೊಸಪೇಟೆ, ಚಿತ್ರದುರ್ಗ, ತುಮಕೂರ ಮಾರ್ಗವಾಗಿ ಮಾ.೨೧ ರಂದು ಬೆಂಗಳೂರಿಗೆ ತಲುಪಲಿದೆ. ವಿಧಾನಸೌಧಕ್ಕೆ ತೆರಳಿದ ನಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವದು ಎಂದರು.
ಈ ಸಂದರ್ಭದಲ್ಲಿ ಶಿವಾನಂದ ಈರಕಾರ ಮುತ್ಯಾ, ಬಸವರಾಜ ಶಂಕ್ರೆಪ್ಪಗೋಳ, ನಾಗೇಶ ಗಬ್ಬೂರ, ಅಮೀನಪ್ಪ ಹೊಸಮನಿ, ಬಾಬು ಅತ್ತಾರ, ಮಂಜುನಾಥ ಮದರಕಿ, ರಮೇಶ ಉಕ್ಕಲಿ, ಇರ್ಪಾನ ರಗಟಿ, ರವಿ ಉಕ್ಕಲಿ, ಬಸವರಾಜ ಧರ್ಮರ, ಕರಿಯಪ್ಪ ಡೋಣೂರ, ಸುಭಾಸ ಹುಲಿಬೆಂಚಿ, ಬಸವರಾಜ ರಾಂಪುರ, ಕವಿತಾ ಗಬ್ಬೂರ, ರಾಜು ಹಾರಿವಾಳ ಇತರರು ಇದ್ದರು.