ಲೇಖನ:- ಸಂತೋಷ್ ರಾವ್ ಪೆರ್ಮುಡಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ-೫೭೪೧೯೮ದೂ: ೯೭೪೨೮೮೪೧೬೦
ಉದಯರಶ್ಮಿ ದಿನಪತ್ರಿಕೆ
ದ್ವಿಚಕ್ರ ವಾಹನವೆಂದರೆ ಕ್ರೇಜ್‌ಗೆ ಬೀಳುವ ಯುವಕ ಯುವತಿಯರು ಸುಪ್ರೀಂ ಕೋರ್ಟ್ ಇತ್ತೀಚೆಗೆ ಜಾರಿಗೆ ತಂದ ದ್ವಿಚಕ್ರ ವಾಹನ ಸವಾರಿಯ ಸಂದರ್ಭದಲ್ಲಿ ಸವಾರರಿಗೆ ‘ಹೆಲ್ಮೆಟ್ ಕಡ್ಡಾಯ’ವಾಗಿ ಧರಿಸಬೇಕೆಂಬ ನಿಯಮ ಜಾರಿಗೆ ತಂದಾಗ ಮುಖ ಸಿಂಡರಿಸಿದ್ದು ಸುಳ್ಳಲ್ಲ. ಹೆಲ್ಮೆಟ್ ಧಾರಣೆಯಿಂದ ಅಪಘಾತಗಳಾದಾಗ ನೇರ ತಲೆಗೆ ಏಟಾಗಿ ಪ್ರಾಣಾಪಾಯ ಆಗದಿರಲಿ ಎಂಬ ಕಾರಣಕ್ಕಾಗಿ ಸಂಪೂರ್ಣ ತಲೆಯನ್ನು ರಕ್ಷಿಸಬಲ್ಲ (ಈuಟಟ ಅoveಡಿeಜ) ಹೆಲ್ಮೆಟ್‌ಗಳನ್ನು ಧರಿಸುವಂತೆ ನ್ಯಾಯಾಲಯ ಶಿಫಾರಸ್ಸು ಮಾಡಿದೆ. ಅದರರರ್ಥ ಸಂಪೂರ್ಣ ಸವಾರರ ತಲೆಯನ್ನು ಮುಚ್ಚುವ, ISI ಗುರುತಿರುವ ಹೆಲ್ಮೆಟ್‌ಗಳನ್ನೇ ಕಾನೂನು ಪ್ರಕಾರ ಪ್ರತಿಯೊಬ್ಬ ಸವಾರ ಹಾಗೂ ಹಿಂಬದಿ ಸವಾರ ಇಬ್ಬರೂ ಧರಿಸಬೇಕು. ಆದರೆ ಇಂದಿನ ದಿನಗಳಲ್ಲಿ ಯುವ ಜನತೆಯ ಮನಃಸ್ಥಿತಿಯನ್ನು ನೋಡಿದರೆ ನಮ್ಮ ತಲೆಯ ಕಾಳಜಿ ನಮಗೆ ಇರುವುದಕ್ಕಿಂತ ಹೆಚ್ಚಾಗಿ ಸಂಚಾರಿ ಪೋಲೀಸರಿಗೇ ಇರುವಂತೆ ಕಾಣುತ್ತಿದೆ. ಏಕೆಂದರೆ ದ್ವಿಚಕ್ರ ವಾಹನ ಸವಾರರಲ್ಲಿ ಕೇವಲ ೫% ರಿಂದ ೮% ಮಂದಿಯಷ್ಟೇ ತಮ್ಮ ಜೀವದ ಬಗ್ಗೆ ಕಾಳಜಿಯಿಂದ ಹೆಲ್ಮೆಟ್ ಧರಿಸಿಕೊಂಡು ದ್ವಿಚಕ್ರ ವಾಹನ ಚಲಾಯಿಸಿದರೆ, ೯೦% ರಿಂದ ೯೨% ಮಂದಿ ಸವಾರರು ಸಂಚಾರಿ ಪೋಲೀಸರ ಭಯ ಅಥವಾ ದಂಡ ಕಟ್ಟಬೇಕೆಂಬ ಕಾರಣಕ್ಕೆ ಹೆಲ್ಮೆಟ್ ಧರಿಸುತ್ತಿರುವುದು ಕಂಡುಬರುತ್ತಿದೆ. ನಮ್ಮ ಜೀವದ ಬಗ್ಗೆ ನಮಗೆ ಕಾಳಜಿ ಮತ್ತು ಪ್ರಜ್ಞೆ ಮೂಡುವುದು ಎಂದೋ ದೇವರೇ ಬಲ್ಲ. ಹೆಚ್ಚಿನ ಹೆಲ್ಮೆಟ್‌ಗಳು ಕೇವಲ ಪೋಲೀಸರನ್ನು ಅಥವಾ ಕಾನೂನನ್ನು ಓಲೈಸಲಷ್ಟೇ ಸೂಕ್ತವಾಗಿವೆಯೇ ವಿನಃ ಯಾವುದೇ ಕಾರಣಕ್ಕೂ ಅಪಘಾತಗಳ ಸಂದರ್ಭದಲ್ಲಿ ಸವಾರನ ತಲೆಯನ್ನು (ಪ್ರಾಣವನ್ನು) ಕಾಯಲಾರವು. ಏಕೆಂದರೆ ಬಹುತೇಕ ಹೆಲ್ಮೆಟ್‌ಗಳು ಕೇವಲ ಟೋಪಿಯ ತರವಿದ್ದು ಇದು ಕಾನೂನಿನ ಪ್ರಕಾರ ಮಾನ್ಯವೂ ಅಲ್ಲ. ಹಾಗಾದರೆ ಹೆಲ್ಮೆಟ್‌ಗಳನ್ನು ಖರೀದಿಸುವ ಪೂರ್ವದಲ್ಲಿ ಏನೆಲ್ಲಾ ಅಂಶಗಳನ್ನು ಸವಾರರು ಗಮನಿಸಬೇಕೆಂದು ನೋಡೋಣ
ರಸ್ತೆಯಲ್ಲಿ ಸಾಗುತ್ತಿದ್ದರೆ ರಸ್ತೆಯ ಬದಿಯಲ್ಲಿ ಎಲ್ಲೆಂದರಲ್ಲಿ ಅಗ್ಗದ ಹೆಲ್ಮೆಟ್‌ಗಳನ್ನು ಮಾರಾಟ ಮಾಡುತ್ತಿರುವುದನ್ನು ಹಾಗೂ ಅವುಗಳನ್ನು ಸವಾರರು ಮುಗಿಬಿದ್ದು ಖರೀದಿಸುವುದನ್ನು ನಿತ್ಯ ನಾವು ನೋಡುತ್ತೇವೆ. ಇಂತಹ ಕಳಪೆ ಹೆಲ್ಮೆಟ್‌ಗಳನ್ನು ಸಂಚಾರಿ ಪೋಲೀಸರು ಕಾರ್ಯಾಚರಣೆ ನಡೆಸಿ ಒಡೆದು ಹಾಕಿದ ಘಟನೆಯೊಂದು ನಮಗೆಲ್ಲಾ ನೆನಪಿದೆ. ಏಕೆಂದರೆ ಇವುಗಳನ್ನು ಪರಿಶೀಲಿಸಿದಾಗ ಇವುಗಳ ಒಳಭಾಗವು ಸಂಪೂರ್ಣವಾಗಿ ರಾಸಾಯನಿಕಗಳಿಂದ ಕೂಡಿದ್ದು ಧರಿಸಲು ಯೋಗ್ಯವಲ್ಲವೆಂದು ಸಾಬೀತಾಗಿದೆ. ಇಂತಹ ಹೆಲ್ಮೆಟ್‌ಗಳನ್ನು ಧರಿಸಿದರೂ ಒಂದೇ, ಧರಿಸದೇ ಇದ್ದರೂ ಒಂದೇ ಎನ್ನಬಹುದು. ISI ಗುರುತಿಲ್ಲದ ಹೆಲ್ಮೆಟ್ ಧಾರಣೆಯಿಂದ ಅಪಾಯವೇ ಜಾಸ್ತಿ ಎಂದು ತಜ್ಞರು ಹೇಳುತ್ತಾರೆ.
ಕಡ್ಡಾಯವಾಗಿ ಹೆಲ್ಮೆಟ್ ಧರಿಸಲೇಬೇಕೆಂಬ ನಿಯಮವಿರುವುದರಿಂದ ಹೆಚ್ಚಿನ ಸವಾರರು ಮಾರುಕಟ್ಟೆಯಲ್ಲಿ ದೊರಕುವ ಯಾವುದಾದರೊಂದು ಹೆಲ್ಮೆಟ್ ಖರೀಧಿಸಿ ಧರಿಸುತ್ತಾರೆ. ಇವುಗಳ ಗುಣಮಟ್ಟದ ಬಗ್ಗೆ ಹಾಗೂ ತಮ್ಮ ತಲೆಯ ಬೆಲೆಯ ಬಗ್ಗೆ ಸವಾರರು ತಲೆಕೆಡಿಸಿಕೊಳ್ಳುವುದೇ ಇಲ್ಲ. ಹಾಗಾದರೆ ಎಂತಹ ಹೆಲ್ಮೆಟ್ ಖರೀದಿಸಬೇಕೆಂದು ನೋಡೋಣ.
ಸಂಪೂರ್ಣ ಮುಖ ಆವರಿಸಿದ ಹೆಲ್ಮೆಟ್
ಹೆಲ್ಮೆಟ್‌ನ್ನು ಖರೀದಿಸುವ ಪೂರ್ವದಲ್ಲಿ ಈ ಹೆಲ್ಮೆಟ್ ಸಂಪೂರ್ಣ ಮುಖ ಹಾಗೂ ತಲೆಯನ್ನು ಮುಚ್ಚುತ್ತದೆಯೇ ಎಂದು ಖಾತ್ರಿ ಪಡಿಸಿಕೊಳ್ಳಬೇಕು. ಆದರೆ ಇಂದಿನ ಯುವ ಜನತೆ ಹೆಚ್ಚು ಆಕರ್ಷಣೀಯವಾದ ಹೆಲ್ಮೆಟ್ ಖರೀದಿಗೆ ದುಂಬಾಲು ಬೀಳುತ್ತಾರೆ. ಒಂದು ವೇಳೆ ಈ ಆಕರ್ಷಣೀಯ ಹೆಲ್ಮೆಟ್ ಖಂಡಿತವಾಗಿಯೂ ಅಪಘಾತದ ಸಂದರ್ಭದಲ್ಲಿ ಸವಾರನ ತಲೆಯನ್ನು ಕಾಯಲಾರದು ಎಂಬುದನ್ನು ಮರೆಯಬಾರದು. ಅಪಘಾತವಾದಾಗ ಸವರರು ರಸ್ತೆಗೆ ಬಿದ್ದ ಸಂದರ್ಭದಲ್ಲಿ ನೇರವಾಗಿ ಏಟಾಗುವುದೇ ತಲೆಗೆ. ದೇಹದ ಎಲ್ಲೇ ಸಾಮಾನ್ಯವಾದ ಗಾಯಗಳಾದರೂ ಬದುಕುಳಿಯುವ ಸಾಧ್ಯತೆಗಳಿರುತ್ತದೆ. ಆದರೆ ರಸ್ತೆಗೆ ಬಿದ್ದಾಗ ತಲೆಗಾಗುವ ಗಾಯದಿಂದ ಸವಾರ ಬದುಕುಳಿಯುವುದೇ ಅಪರೂಪ ಎನ್ನಬಹುದು. ಅದ್ದರಿಂದ ಸಂಪೂರ್ಣ ತಲೆ ಹಾಗೂ ಮುಖವನ್ನು ರಕ್ಷಿಸುವ ಹೆಲ್ಮೆಟ್ ಖರೀದಿಸುವುದು ಉತ್ತಮ.
ISI ಮುದ್ರೆ ಇರುವ ಹೆಲ್ಮೆಟ್:
ಹೆಲ್ಮೆಟ್ ಖರೀದಿಯಲ್ಲಿ ಗಮನಿಸಬೇಕಾದ ಎರಡನೇ ಪ್ರಮುಖವಾದ ಅಂಶವೆಂದರೆ ಖರೀದಿಸುತ್ತಿರುವ ಹೆಲ್ಮೆಟ್ ISI (Iಟಿಜiಚಿಟಿ Sಣಚಿಟಿಜಚಿಡಿಜ Iಟಿsಣiಣuಣe) ನಿಂದ ಪ್ರಮಾಣೀಕರಿಸಲ್ಪಟ್ಟಿದೆಯೇ ಎಂದು ಖಚಿತಪಡಿಸಿಕೊಂಡು ಇದಕ್ಕೆ ಸಂಸ್ಥೆ ನೀಡುವ ಗ್ಯಾರಂಟಿಯನ್ನು ಪರಿಗಣಿಸುವುದು ಉತ್ತಮ. ISI ಮಾನ್ಯತೆಯಿರುವ ಹೆಲ್ಮೆಟ್ ಅತ್ಯಂತ ಗುಣಮಟ್ಟದಿಂದ ಕೂಡಿದ್ದು, ಸವಾರ ರಸ್ತೆಗೆ ಸಾಮಾನ್ಯವಾಗಿ ಬಿದ್ದಾಗ ತಲೆಗಾಗುವ ಬಹುತೇಕ ಗಾಯವನ್ನು ಈ ಹೆಲ್ಮೆಟ್ ತಡೆಯಬಲ್ಲುದು. ಈ ಪ್ರಮಾಣೀಕರಣವಿರುವ ಹೆಲ್ಮೆಟ್‌ಗಳಿಂದ ಅಪಘಾತಗಳ ಸಂದರ್ಭದಲ್ಲಿ ೯೦% ಸವಾರರ ತಲೆಗೆ ಸುರಕ್ಷತೆಯನ್ನು ನೀಡಬಲ್ಲುದು.
ರಸ್ತೆ ಬದಿಯಲ್ಲಿ ಮಾರಾಟವಾಗುವ
ಹೆಲ್ಮೆಟ್
ಟ್ರಾಫಿಕ್ ಪೋಲೀಸರಿಂದ ತಪ್ಪಿಸಿಕೊಳ್ಳುವ ಉದ್ದೇಶವಷ್ಟೇ ಹೊಂದಿರುವ ಬಹುತೇಕ ಸವಾರರು ನೂರು ರೂಪಾಯಿ ಉಳಿಸುವ ಉದ್ದೇಶದಿಂದ ಯಾವುದೇ ಸುರಕ್ಷತೆ ಇಲ್ಲದ ರಸ್ತೆ ಬದಿಯಲ್ಲಿ ಮಾರಾಟ ಮಾಡಲಾಗುವ ಕಳಪೆ ಗುಣಮಟ್ಟದ ಸಾಮಾನ್ಯ ಹೆಲ್ಮೆಟ್‌ಗಳನ್ನು ಖರೀದಿಸುತ್ತಾರೆ. ಇಂತಹ ಹೆಲ್ಮೆಟ್‌ಗಳ ಖರೀದಿಯಿಂದ ಸವಾರ ತನ್ನ ಜೀವಕ್ಕೆ ಸ್ವಯಂ ಅಪಾಯವನ್ನು ಆಹ್ವಾನಿಸಿದಂತೆ ಎನ್ನುವುದನ್ನು ಮರೆಯಬಾರದು. ಆದ್ದರಿಂದ ಎಂದಿಗೂ ರಸ್ತೆ ಬದಿಯಲ್ಲಿ ಮಾರಾಟ ಮಾಡಲಾಗುವ ಕಳಪೆ ಹೆಲ್ಮೆಟ್‌ಗಳನ್ನು ಖರೀದಿಸದಿರುವುದು ಉತ್ತಮ.
ಬಿಡಿಸುವ ಹೆಲ್ಮೆಟ್
ಹೆಲ್ಮೆಟ್‌ನ ಖರೀದಿ ಸಂದರ್ಭದಲ್ಲಿ ಖರೀದಿಸುತ್ತಿರುವ ಹೆಲ್ಮೆಟ್‌ನ ಗಾಜನ್ನು ಸವಾರನು ಸವಾರಿಯ ಸಂದರ್ಭದಲ್ಲಿ ಸುಲಭವಾಗಿ ತೆರೆಯುವಂತಿವೆಯೇ ಹಾಗೂ ಸವಾರರ ಅನುಕೂಲಕ್ಕೆ ತಕ್ಕಂತೆ ಅವುಗಳ ಗಾಜನ್ನು ಸೂಕ್ತವಾಗಿ ಮೇಲೆ ಕೆಳಗೆ ಹೊಂದಾಣಿಕೆ ಮಾಡುವಂತಿರಬೇಕು. ಇದರಿಂದಾಗಿ ಕತ್ತಲಾಗುತ್ತಿದ್ದಂತೆ ಗಾಜನ್ನು ತೆರೆದು, ಧೂಳು ಮತ್ತು ಬಿಸಿಲಿನ ಸಂದರ್ಭದಲ್ಲಿ ಸುಲಭವಾಗಿ ಮುಚ್ಚುವಂತಿರಬೇಕು. ರಸ್ತೆಯು ಸ್ಪಷ್ಟವಾಗಿ ಸವಾರನಿಗೆ ಗೋಚರಿಸದೇ ಇದ್ದಾಗ ಗಾಜನ್ನು ತೆರೆದು ಸವರಿ ಮಾಡಲು ಅನುಕೂಲವಾಗುವಂತಿರಬೇಕು.
ಸ್ಟೈಲಿಷ್ ಹೆಲ್ಮೆಟ್
ಇದೀಗ ವಿಭಿನ್ನ ಶೈಲಿ ಹಾಗೂ ವಿನ್ಯಾಸದ ಹೆಲ್ಮೆಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಯುವಕ ಯುವತಿಯರು ಇಂದಿನ ದಿನಗಳಲ್ಲಿ ಎಲ್ಲದರಲ್ಲೂ ವಿಭಿನ್ನತೆಯನ್ನು ಬಹುವಾಗಿ ಅಪೇಕ್ಷಿಸುತ್ತಾರೆ. ಈ ವಿಭಿನ್ನ ಹಾಗೂ ಸ್ಟೆöÊಲಿಷ್ ಹೆಲ್ಮೆಟ್ ನಮ್ಮ ತಲೆಗೆ ಸಂಪೂರ್ಣ ಸುರಕ್ಷತೆಯನ್ನು ಒದಗಿಸುತ್ತವೆ ಎಂದಾದರೆ ಮಾತ್ರ ಅವುಗಳನ್ನು ಖರೀದಿಸುವುದು ಒಳಿತು. ಯಾವುದೇ ವಿನ್ಯಾಸವಿರಲಿ ಹೆಲ್ಮೆಟ್‌ಗಳು ಸವಾರನ ಜೀವರಕ್ಷಕವಾಗಿರಬೇಕೇ ವಿನಃ ತೋರಿಕೆಗಾಗಿ ಅಲ್ಲ ಎನ್ನುವುದನ್ನು ಮರೆಯಬಾರದು.

ಕಪ್ಪು ಬಣ್ಣದ ಗಾಜಿನ ಹೆಲ್ಮೆಟ್: ಹೆಲ್ಮೆಟ್‌ನ್ನು ಖರೀದಿಸುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಕಡು ಕಪ್ಪು ಬಣ್ಣದ ಗಾಜಿರುವ ಹೆಲ್ಮೆಟ್‌ನ್ನು ಖರೀದಿಸಬೇಡಿ. ಇದು ರಾತ್ರಿಯ ವೇಳೆ ಸವಾರನಿಗೆ ಸುರಕ್ಷಿತವಲ್ಲವಾಗಿದ್ದು, ಎದುರಿನಿಂದ ಬರುವ ವಾಹನದ ಪ್ರಖರವಾದ ಬೆಳಕಿನಿಂದಾಗಿ ಸವಾರನಿಗೆ ತನ್ನ ಮುದಿರುವ ರಸ್ತೆ ಹಾಗೂ ರಸ್ತೆಯ ಅಂಚು ಸರಿಯಾಗಿ ಕಾಣಿಸದೇ ಇರಬಹುದು. ಇದರಿಂದ ಅಪಘಾತಗಳಾಗುವ ಸಾಧ್ಯತೆಗಳೇ ಹೆಚ್ಚಿದ್ದು, ಪಾರದರ್ಶಕ ಗಾಜಿನ ಅಥವಾ ತೆಳು ಕಪ್ಪು ಬಣ್ಣದ ಗಾಜಿನ ಹೆಲ್ಮೆಟ್‌ನ್ನು ಖರೀದಿಸಿದರೆ ಉತ್ತಮ.
ಪರಿಪೂರ್ಣ ಹೆಲ್ಮೆಟ್
ಹೆಲ್ಮೆಟ್‌ನ್ನು ಖರೀದಿಸುವ ಸಂದರ್ಭದಲ್ಲಿ ಖರೀದಿಸುತ್ತಿರುವ ಹೆಲ್ಮೆಟ್‌ನಲ್ಲಿ ಯಾವುದೇ ರೀತಿಯ ಬಿರುಕುಗಳು ಇಲ್ಲವೆಂದು ಪರೀಕ್ಷಿಸಿ ಖಾತರಿಪಡಿಸಿಕೊಳ್ಳಿ. ಇಲ್ಲವಾದರೆ ಬಿರುಕು ಬಿಟ್ಟಿರುವ ಅಥವಾ ಅಪರಿಪೂರ್ಣ ಹೆಲ್ಮೆಟ್‌ನ್ನು ಖರೀದಿಸಬೇಕಾಗುವ ಹಾಗೂ ನಂತರದಲ್ಲಿ ಸವಾರನು ಅಪಾಯಕ್ಕೆ ಒಳಗಾಗುವ ಸಾಧ್ಯತೆಯೂ ಅಧಿಕವಾಗಿದೆ. ಹೆಲ್ಮೆಟ್‌ನ ಒಳಭಾಗದಲ್ಲಿ ಸೂಕ್ತವಾದ ರಕ್ಷಣಾ ಪರಿಕರಗಳನ್ನು ಸಮರ್ಪಕವಾಗಿ ಅಳವಡಿಸಲಾಗಿದೆಯೇ ಎಂದೂ ಪರೀಕ್ಷಿಸುವುದು ಒಳ್ಳೆಯದು. ಹಾಗೂ ಸವಾರನ್ನು ಹೆಲ್ಮೆಟ್‌ನ್ನು ಧರಿಸಿದಾಗ ಸುಲಭವಾಗಿ ಉಸಿರಾಡಲು ಅನುವಾಗುವಂತಿದೆಯೇ ಎಂದೂ ಪರೀಕ್ಷಿಸಿಕೊಳ್ಳಿರಿ. ಇಲ್ಲವಾದಲ್ಲಿ ಸವಾರನು ಸವಾರಿಯ ಸಂದರ್ಭದಲ್ಲಿ ಉಸಿರಾಡಲೂ ಕಷ್ಟಪಟ್ಟು ಕಿರಿಕಿರಿಗೊಳ್ಳಬಹುದು.
ಹೆಲ್ಮೆಟ್‌ನ ಬಳಕೆ
ಹೆಲ್ಮೆಟ್‌ನ ಬಾಹ್ಯ ವಿನ್ಯಾಸ ಹೇಗೆ ಉತ್ತಮವಾಗಿರುತ್ತದೆಯೋ ಹಾಗೆಯೇ ಅದರಲ್ಲಿ ಅಳವಡಿಸಲಾದ ಒಳಭಾಗದ ಪರಿಕರಗಳ ಬಗ್ಗೆಯೂ ಸ್ವಲ್ಪ ಗಮನಿಸಿರಿ. ಕಳಪೆ ಗುಣಮಟ್ಟದ ಸಾಧನಗಳನ್ನು (ಬಟ್ಟೆ, ಗಮ್, ಥರ್ಮಾಕೋಲ್, ಪ್ಲಾಸ್ಟಿಕ್) ಬಳಸಿದ್ದಲ್ಲಿ ಅದು ಸವಾರರ ಕೂದಲು ಉದರುವಿಕೆಗೂ ಕಾರಣವಾಗಬಹುದು ಎಂಬುವುದರ ಬಗ್ಗೆಯೂ ಗಮನವಹಿಸಿರಿ. ಹೆಲ್ಮೆಟ್‌ನ ಒಳಭಾಗದಲ್ಲಿ ತಲೆಗೆ ಸಮರ್ಪಕವಾಗಿ ಗಾಳಿಯಾಡುವಂತಿರಬೇಕು ಎನ್ನುವುದನ್ನು ಮರೆಯಬಾರದು.
ಹೆಲ್ಮೆಟ್‌ನ ಗಾತ್ರ
ಹೆಲ್ಮೆಟ್ ಖರೀದಿಯಲ್ಲಿ ಸವಾರರು ತಮಗೆ ಹೊಂದುವ ಗಾತ್ರದ ಹೆಲ್ಮೆಟ್‌ಗಳ ಖರೀದಿಯನ್ನು ಮಾಡಬೇಕು. ತೀರಾ ಬಿಗಿಯಾದ ಹೆಲ್ಮೆಟ್ ಸವಾರರನ್ನು ಆರಾಮದಾಯಕ ಸವಾರಿಗೆ ಅಡ್ಡಿಪಡಿಸಬಹುದು. ತೀರಾ ಸಡಿಲವಾದ ಗಾತ್ರದ ಹೆಲ್ಮೆಟ್ ಸವಾರರನ್ನು ತೀರಾ ತೊಂದರೆಗೀಡು ಮಾಡಬಹುದು. ತೀರಾ ಸಡಿಲವಾದ ಹೆಲ್ಮೆಟ್ ‘ತಲೆಗಿಂತ ದೊಡ್ಡ ಮುಂಡಾಸು’ (ರುಮಾಲು) ಎಂಬ ನಾಣ್ಣುಡಿಯಂತಾಗಬಹುದು.
ಹೆಲ್ಮೆಟ್‌ನ ಲಾಕ್
ಸವಾರರು ದ್ವಿಚಕ್ರವಾಹನವನ್ನು ಓಡಿಸುವ ಭರಾಟೆಯಲ್ಲಿ ಹೆಲ್ಮೆಟ್‌ನ ಲಾಕನ್ನು ಸರಿಯಾಗಿ ಹಾಕದೇ ಸವಾರಿ ಮಾಡುವುದನ್ನು ನಿತ್ಯ ನಾವು ಗಮನಿಸುತ್ತಿರುತ್ತೇವೆ. ಅದೆಷ್ಟೋ ಅಪಘಾತಗಳ ಸಂದರ್ಭದಲ್ಲಿ ಸವಾರರು ಈ ಲಾಕ್ ಹಾಕದಿರುವ ತಮ್ಮ ಬೇಜವಬ್ದಾರಿಯಿಂದಾಗಿ ಸವಾರರ ಪ್ರಾಣಕ್ಕೆ ಎರವಾದ ಅದೆಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಇನ್ನೂ ಕೆಲವೊಮ್ಮೆ ಹೆಲ್ಮೆಟ್‌ನ ಲಾಕ್ ಸರಿಯಿಲ್ಲದೇ ಲಾಕ್ ಹಾಕದೇ, ಕೈಗೆ ಹೆಲ್ಮೆಟ್‌ನ್ನು ಸಿಕ್ಕಿಸಿಕೊಂಡು ಸವಾರಿ ಮಾಡಿದಾಗ ಅಪಘಾತದಲ್ಲಿ ಸವಾರರು ಪ್ರಾಣಕಳೆದುಕೊಂಡ ಸಂದರ್ಭಗಳೂ ಇವೆ. ಹಾಗಾಗಿ ಹೆಲ್ಮೆಟ್ ಖರೀದಿಯ ಸಂದರ್ಭದಲ್ಲಿ ಅದರ ಲಾಕ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಎಂದು ಪರೀಕ್ಷಿಸಿ ಖರೀದಿಯನ್ನು ಮಾಡಿರಿ. ಸವಾರಿಯ ಸಂದರ್ಭದಲ್ಲಿ ಲಾಕ್ ಸಮರ್ಪಕವಾಗಿ ಹಾಕಲಾಗಿದೆಯೇ ಎಂದು ಸಮರ್ಪಕವಾಗಿ ಪರಿಶೀಲಿಸಿದ ನಂತರವೇ ಪ್ರಯಾಣವನ್ನು ಪ್ರಾರಂಭಿಸಿರಿ. ಸವಾರರ ಕುತ್ತಿಗೆ ಹಾಗೂ ಹೆಲ್ಮೆಟ್‌ನ ಲಾಕ್ ಸ್ವಿಚ್ ಮಧ್ಯೆ ಸಾಕಷ್ಟು ಅಂತರವಿರುವಂತೆಯೂ ನೋಡಿಕೊಳ್ಳುವುದು ಉತ್ತಮ.
ಒಟ್ಟಿನಲ್ಲಿ ಹೆಲ್ಮೆಟ್ ರಹಿತ ಸವಾರಿ ಕಾನೂನು ಪ್ರಕಾರ ಅಪರಾಧ ಹಾಗೂ ದಂಡಕ್ಕೂ ಮೂಲ ಎನ್ನುವುದು ಹೇಗೆ ಎಲ್ಲರೂ ತಿಳಿದ ಸತ್ಯವೋ ಅದೇ ರೀತಿ ಪ್ರಾಣಕ್ಕೆ ಸಂಚಕಾರವೂ ಹೌದು. ಅಪಘಾತದ ಸಾವನ್ನು ತಪ್ಪಿಸುವ ಉದ್ದೇಶದಿಂದ ಕಾನೂನನ್ನು ತರಲಾಗಿದೆಯೇ ವಿನಃ ಸವಾರರಿಗೆ ಕಿರಿಕಿರಿ ಉಂಟು ಮಾಡಲು ಎಂದು ಭಾವಿಸಬಾರದು. ಯುವ ಜನಾಂಗವು ದ್ವಿಚಕ್ರ ವಾಹನದಲ್ಲಿ ಕುಳಿತ ಕೂಡಲೇ ಹೆಲ್ಮೆಟ್ ಧರಿಸುವ ಹಾಗೂ ಹೆಲ್ಮೆಟ್ ಸಹಿತ ಸಾವರಿಯನ್ನೇ ತಮ್ಮ ಪರಿಪಾಠವನ್ನು ಮಾಡಿಕೊಂಡಾಗ ಖಂಡಿತವಾಗಿಯೂ ಅಪಘಾತದಿಂದ ಅದರಲ್ಲೂ ತಲೆಗಾಗುವ ಏಟಿನಿಂದಾಗುವ ಬಹುತೇಕ ಸಾವನ್ನು ತಡೆಗಟ್ಟಬಹುದಾಗಿದೆ. ಈ ಮೂಲಕ ಸ್ವಸ್ಥ ಹಾಗೂ ಪ್ರಜ್ಞಾವಂತ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಯುವ ಜನತೆಯ ಪಾತ್ರವೂ ಬಹುಮುಖ್ಯ ಪಾತ್ರವನ್ನು ವಹಿಸಬೇಕಾಗಿದೆ.
