ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸಮಾಜದಲ್ಲಿ ಸಮಾನತೆಯನ್ನು ಸಾರಿ ಭೇದ ಭಾವವಿಲ್ಲದೇ ಸಮಾನ ಸಮಾಜಕ್ಕಾಗಿ ಹೋರಾಡಿದ ಜಗದ್ಗುರು ರೇಣುಕಾಚಾರ್ಯರು ಎಲ್ಲ ಧರ್ಮಗಳಿಗಿಂತ ಮಾನವ ಧರ್ಮ ಶ್ರೇಷ್ಠವಾದದ್ದು ಎಂದು ಪ್ರತಿಪಾದಿಸಿದ್ದರು ಎಂದು ಸಿ.ಎಂ.ಮನಗೂಳಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಬಿ.ಎನ್.ಪಾಟೀಲ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡ ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೇಣುಕಾಚಾರ್ಯರ ತತ್ವಗಳು, ಮನೋಭಾವನೆಗಳು, ಸಂದೇಶಗಳನ್ನು ಅರ್ಥಮಾಡಿಕೊಂಡಾಗ ಮಾತ್ರ ಜಯಂತಿಯ ಆಚರಣೆ ಸಾರ್ಥಕವಾಗುತ್ತದೆ. ಸಮಾಜದಲ್ಲಿದ್ದ ಹಲವಾರು ಕಟ್ಟು ಪಾಡುಗಳ ವಿರುದ್ಧ ಅವರು ಧ್ವನಿ ಎತ್ತಿದ್ದರು. ಜಾತಿ ವ್ಯವಸ್ಥೆ ಪುರುಷ ಸ್ತ್ರೀ ಎಂಬ ಸಮಾಜದ ಭಿನ್ನತೆಯನ್ನು ಹೋಗಲಾಡಿಸಲು ಅಂದಿನ ಕಾಲದಲ್ಲಿ ಹೋರಾಡಿದ್ದರು. ಹಾಗಾಗಿ ನಾವುಗಳು ಸಂಪತ್ತಿನೆಡೆಗೆ ಹೆಚ್ಚಿನ ಗಮನ ಹರಿಸದೆ ಸಂತರ ಮಹಾಂತರ ಜಯಂತಿಗಳನ್ನು ಆಚರಿಸುವುದರ ಜೊತೆಗೆ ಅವರ ತತ್ವಾದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಬೋರಗಿ ಪುರದಾಳ ವಿಶ್ವರಾಧ್ಯ ಮಠದ ಮಹಾಲಿಂಗೇಶ್ವರ ಮಹಾಸ್ವಾಮಿಗಳು, ಅದ್ಯಕ್ಷತೆ ವಹಿಸಿದ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ, ನೌಕರರ ಸಂಘದ ಅದ್ಯಕ್ಷ ಅಶೋಕ ತೆಲ್ಲೂರ ಮಾತನಾಡಿದರು.
ವೇದಿಕೆಯ ಮೇಲೆ ಕೆರೂಟಗಿ ಹಿರೇಮಠದ ಶಿವಬಸವ ಶಿವಾಚಾರ್ಯರು, ಕನ್ನೋಳ್ಳಿ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು, ವೀರಶೈವ ಮಹಾಸಭಾ ಅಧ್ಯಕ್ಷ ಅಶೋಕ ವಾರದ, ಗ್ರೇಡ್-೨ ತಹಶೀಲ್ದಾರ ಇಂದಿರಾಬಾಯಿ ಬಳಗಾನೂರ, ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ ಇದ್ದರು.
ಕಾರ್ಯಕ್ರಮಕ್ಕೂ ಮುನ್ನ; ಬೆಳಿಗ್ಗೆ ೮ಗಂಟೆಗೆ ಸಂಘದ ಕಾರ್ಯಾಲಯದಲ್ಲಿ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಬಳಿಕ ಮೆರವಣಿಗೆ ಮೂಲಕ ತಾಲೂಕು ಆಡಳಿತ ಹಮ್ಮಿಕೊಂಡ ಜಯಂತಿ ಕಾರ್ಯಕ್ರಮದಲ್ಲಿ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಸೇರದಿಂತೆ ಸಮಾಜ ಬಾಂಧವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಂಗಮ ಸಮಾಜದ ತಾಲೂಕಾಧ್ಯಕ್ಷ ಶಂಕರಲಿಂಗಯ್ಯ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ ದೇವರೆಡ್ಡಿ, ಶ್ರೀಶೈಲ ನಂದಿಕೋಲ, ಬಸಯ್ಯ ಹಿರೇಮಠ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಮಾಜ ಬಾಂಧವರು ಇದ್ದರು.
ಶಿಕ್ಷಣ ಸಂಯೋಜಕ ಎಂ.ಆರ್.ಡೋಣಿ ನಿರೂಪಿಸಿದರು. ಗಂಗಾಧರ ಸೋಮನಾಯಕ ವಂದಿಸಿದರು.